ಅಮೆರಿಕ ಮತ್ತು ಭಾರತದ ಆರೋಗ್ಯ ಸೇವಾ ವೆಚ್ಚದಲ್ಲಿ ಇರುವ ಅಜಗಜಾಂತರ ವ್ಯತ್ಯಾಸದ ಬಗ್ಗೆ ಭಾರತೀಯ ಹಿರಿಯ ನಾಗರಿಕರೊಬ್ಬರು ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಸಿಯಾಟಲ್ ಪ್ರವಾಸದಲ್ಲಿದ್ದಾಗ, ಭಾರತದಲ್ಲಿ ಕೇವಲ ₹2,500 ಆಗಬಹುದಾಗಿದ್ದ ಚಿಕಿತ್ಸೆಗೆ ಅವರು ಬರೋಬ್ಬರಿ ₹65,000ಕ್ಕೂ ಹೆಚ್ಚು ಹಣ ತೆತ್ತಿದ್ದಾರೆ. 

ಅಮೆರಿಕಕ್ಕೆ ಪ್ರವಾಸ ಹೋಗಿದ್ದ ಭಾರತದ ಹಿರಿಯ ನಾಗರಿಕೊಬ್ಬರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿ ವೈದ್ಯಕೀಯ ಚಿಕಿತ್ಸೆಯ ಅನುಭವ ಹಂಚಿಕೊಂಡಿದ್ದು, ಅವರ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತ ಮತ್ತು ಅಮೆರಿಕದ ನಡುವಿನ ಆರೋಗ್ಯ ವ್ಯವಸ್ಥೆಯ ವೆಚ್ಚಗಳ ನಡುವೆ ಅಬ್ಬ ಎಷ್ಟೊಂದು ವ್ಯತ್ಯಾಸವಿದೆ ಎಂಬುದು ಈ ಪೋಸ್ಟ್ ಎತ್ತಿತೋರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧೀರ್ ಸಿನ್ಹಾ ಎಂಬುವವರು ಅಮೆರಿಕದ ಆಸ್ಪತ್ರೆಯಲ್ಲಿ ತಮಗಾದ ಅನುಭವವನ್ನು 'X' ಖಾತೆಯಲ್ಲಿ ವಿವರಿಸಿದ್ದಾರೆ. ಇವರು ತಮ್ಮ ಪತ್ನಿಯೊಂದಿಗೆ ವಾಷಿಂಗ್ಟನ್‌ನ ಸಿಯಾಟಲ್ ನಗರಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ನಡೆದ ಘಟನೆ ವಿವರಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ:

Scroll to load tweet…

ಸಿನ್ಹ ಹೇಳ್ತಾರೆ, ಅವರು ಪತ್ನಿಯೊಂದಿಗೆ ಎರಡು ತಿಂಗಳ ಮಟ್ಟಿಗೆ ಸಿಯಾಟಲ್‌ಗೆ ಹೋಗಿದ್ದರು. ಭಾರತದಿಂದ ಹೊರಡುವಾಗ ಅವರ ಪತ್ನಿಗೆ ತೀವ್ರವಾದ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ, ಇಲ್ಲಿಂದಲೇ ಔಷಧಿಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಗೆ ಹೋದ ಮೇಲೆ ಆ ಮೆಡಿಸಿನ್‌ಗಳು ಖಾಲಿಯಾಗಿವೆ. ಆಗ ಅನಿವಾರ್ಯವಾಗಿ ಅಲ್ಲೇ ಸ್ಥಳೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಯ್ತು. ಇದಕ್ಕಾಗಿ ಅವರ ಮಗಳು ಶ್ವಾಸಕೋಶ ತಜ್ಞರ (pulmonologist) ಅಪಾಯಿಂಟ್‌ಮೆಂಟ್ ವ್ಯವಸ್ಥೆ ಮಾಡಿದ್ದರು. ಆದರೆ, ಅದಕ್ಕೂ ಮೊದಲು ಜನರಲ್ ಫಿಸಿಷಿಯನ್ ಬಳಿ ವಿಡಿಯೋ ಕಾಲ್ ಮೂಲಕ ಅಪಾಯಿಂಟ್‌ಮೆಂಟ್ ಪಡೆಯಬೇಕಿತ್ತು. ಅದಕ್ಕೆ ಒಂದು ವಾರ ಕಾಯಬೇಕಾಯಿತು.

ಕನ್ಸಲ್ಟೇಶನ್ ನಂತರ, ಡಾಕ್ಟರ್ ಬರೆದುಕೊಟ್ಟ ಔಷಧಿಗಳು ತಕ್ಷಣಕ್ಕೆ ಸಿಗಲಿಲ್ಲ. ಪ್ರಿಸ್ಕ್ರಿಪ್ಷನ್ ಸ್ಥಳೀಯ ಫಾರ್ಮಸಿಗೆ ತಲುಪಲು ಮತ್ತೆ ನಾಲ್ಕೈದು ದಿನ ಬೇಕಾಯಿತು ಎಂದು ಸಿನ್ಹಾ ಹೇಳಿದ್ದಾರೆ. ಕೊನೆಗೂ ಔಷಧಿಗಳು ಕೈಸೇರಿದಾಗ, ಆ ಬಾಕ್ಸ್ ಮೇಲೆ 'Made in India' ಅಂತ ಬರೆದಿತ್ತು. ಭಾರತದ ಫಾರ್ಮಾ ಕಂಪನಿ 'ಸಿಪ್ಲಾ' ತಯಾರಿಸಿದ ಔಷಧಿಗಳಾಗಿದ್ದವು.

ಆದರೆ, ಅವರಿಗೆ ಅತಿದೊಡ್ಡ ಶಾಕ್ ಕಾದಿದ್ದು ಮೆಡಿಸಿನ್ ಬಿಲ್ ನೋಡಿದಾಗ. ಭಾರತದಲ್ಲಿ ಅದೇ ಮೆಡಿಸಿನ್ ಖರೀದಿಸಿದರೆ ಅದರ ಬೆಲೆ ಸುಮಾರು ₹2,500 ಆಗಬಹುದಾದ ಔಷಧಿ. ಆದರೆ ಅಮೆರಿಕದಲ್ಲಿ ಬರೋಬ್ಬರಿ ₹42,000 ಆಗಿತ್ತು. ಅವರ ಬಳಿ ಯುಎಸ್ ಮೆಡಿಕಲ್ ಇನ್ಶೂರೆನ್ಸ್ ಇದ್ದಿದ್ದರಿಂದ ಅರ್ಧದಷ್ಟು ಹಣ ಕವರ್ ಆಯಿತು. ಆದರೂ, ಅವರು ತಮ್ಮ ಕೈಯಿಂದ ಸುಮಾರು ₹21,000 ಪಾವತಿಸಬೇಕಾಯಿತು! ಒಂದು ವಾರದ ನಂತರ, ಡಾಕ್ಟರ್ ಕನ್ಸಲ್ಟೇಶನ್ ಶುಲ್ಕದ ಬಿಲ್ ಬಂತು. ಅದು $283, ಅಂದರೆ ಸುಮಾರು ₹23,000! ಒಟ್ಟಾರೆ, ಈ ಚಿಕಿತ್ಸೆಗೆ ಅವರು ₹65,000ಕ್ಕೂ ಹೆಚ್ಚು ಖರ್ಚು ಮಾಡಿದ್ದರು.

ಆರೋಗ್ಯ ಸೇವೆಯಲ್ಲಿ ಭಾರತ ಉತ್ತಮ

ಈ ಅನುಭವದ ನಂತರ, ಸಿನ್ಹಾ ಅವರು ಎರಡು ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಹೋಲಿಕೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಸಿಗುವ ಸೌಲಭ್ಯಗಳನ್ನು ಪ್ರಶಂಸಿಸುವಂತೆ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಔಷಧಿ, ವೈದ್ಯರು, ಮೊಬೈಲ್ ಡೇಟಾ, ಕ್ಷಣಾರ್ಧದಲ್ಲಿ ಮನೆಗೆ ಬರುವ ದಿನಸಿ, ಮನೆ ಬಾಗಿಲಿಗೆ ಬಂದು ಟೆಸ್ಟ್ ಮಾಡುವ ಡಯಾಗ್ನೋಸ್ಟಿಕ್ ಸೇವೆಗಳು, ಸುಲಭವಾದ ಯುಪಿಐ ಪಾವತಿ, ಮನೆಗೆಲಸಕ್ಕೆ ಸಿಗುವ ಸಹಾಯ ಮತ್ತು ನೆರೆಹೊರೆಯವರ ಬೆಂಬಲದಂತಹ ವ್ಯವಸ್ಥೆಗಳನ್ನು ಅವರು ಹೊಗಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಭಾರತದಲ್ಲಿ ಸಾಮಾನ್ಯ ಆರೋಗ್ಯ ಸೇವೆ ಮತ್ತು ಔಷಧಿಗಳು ಅಮೆರಿಕಕ್ಕಿಂತ ಅಗ್ಗ ಹಾಗೂ ಸುಲಭವಾಗಿ ಸಿಗುತ್ತವೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ಆದರೆ, ಇನ್ನು ಕೆಲವರು, ಅಮೆರಿಕದ ಮೂಲಸೌಕರ್ಯ, ವಿಮಾ ವ್ಯವಸ್ಥೆ, ಸುಧಾರಿತ ವೈದ್ಯಕೀಯ ತಂತ್ರಜ್ಞಾನ ಮತ್ತು ವಿಶೇಷ ಚಿಕಿತ್ಸೆಗಳನ್ನು ಪರಿಗಣಿಸಿ ಹೋಲಿಕೆ ಮಾಡಬೇಕು ಎಂದು ವಾದಿಸಿದ್ದಾರೆ.

ವೈದ್ಯಕೀಯ ವೆಚ್ಚ ದುಬಾರಿಯಾಗಿರುವ ದೇಶಗಳಿಗೆ ಭೇಟಿ ನೀಡುವಾಗ ಸಮಗ್ರ ಟ್ರಾವೆಲ್ ಮತ್ತು ಹೆಲ್ತ್ ಇನ್ಶೂರೆನ್ಸ್ ಹೊಂದುವುದು ಎಷ್ಟು ಮುಖ್ಯ ಎಂಬುದನ್ನು ಈ ಚರ್ಚೆ ಮತ್ತೊಮ್ಮೆ ನೆನಪಿಸಿದೆ.