ಮನೆಗೆಲಸದಾಕೆಯೊಬ್ಬರು ತಿಂಗಳಿಗೆ 1 ಲಕ್ಷ ರೂ. ಗಳಿಸುತ್ತಿರುವ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಕುಟುಂಬದ ಎಲ್ಲ ಸದಸ್ಯರ ಗಳಿಕೆ ಸೇರಿ ಈ ಮೊತ್ತ ತಲುಪುತ್ತದೆ. ತೆರಿಗೆ ವ್ಯಾಪ್ತಿಯ ಪ್ರಶ್ನೆಯೂ ಚರ್ಚೆಯಲ್ಲಿದೆ.

ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರೆಡ್ಡಿಟ್ ಬಳಕೆದಾರರು, ನಮ್ಮ ಮನೆಗೆಲಸದಾಕೆ ನಮಗಿಂತ ಶ್ರೀಮಂತೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿರುವ ನೆಟ್ಟಿಗರು, ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿರುವ ನಮ್ಮ ಸಂಪಾದನೆ 50 ಸಾವಿರಕ್ಕಿಂತಲೂ ಕಡಿಮೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಈ ಅಂಕಿ-ಅಂಶಗಳು ನೋಡಲು ಮಾತ್ರ ಚೆಂದ. ಆದರೆ ಈ ಕೆಲಸಗಳಲ್ಲಿ ಭದ್ರತೆ ಇರಲ್ಲ. ಖಾಸಗಿ ಕಂಪನಿ ಅಥವಾ ಸರ್ಕಾರಿ ಕೆಲಸಗಳಲ್ಲಿ ಸಿಗುವ ಉದ್ಯೋಗ ಭದ್ರತೆ ಸೇರಿದಂತೆ ಇನ್ನಿತರ ಯಾವುದೇ ಸೌಲಭ್ಯಗಳಿರಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರೆಡ್ಡಿಟ್ ಪೋಸ್ಟ್ ಮಾಡಿಕೊಂಡಿರುವ ವ್ಯಕ್ತಿ ಟಯರ್-3 ಸಿಟಿಯಲ್ಲಿ ವಾಸವಾಗಿರೋದಾಗಿ ಹೇಳಿಕೊಂಡಿದ್ದಾರೆ. ಇವರ ಮನೆ ಕೆಲಸಕ್ಕೆ ಬರುವ ಮಹಿಳೆ ಮೂರು ಮನೆಗಳಲ್ಲಿ ಕೆಲಸ ಮಾಡುವ ಮೂಲಕ ತಿಂಗಳಿಗೆ 30 ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಬೆಳಗ್ಗೆ 9ಕ್ಕೆ ಆರಂಭವಾದ ಇವರ ಕೆಲಸ ಸಂಜೆ 5 ಗಂಟೆಗೆ ಮುಗಿಯುತ್ತದೆ ಎಂದು ಹೇಳಿದ್ದಾರೆ.

ತಿಂಗಳಿಗೆ 1 ಲಕ್ಷ ಹೇಗೆ ಸಾಧ್ಯ?

ಮನೆಗೆಲಸಕ್ಕೆ ಬರುವ ಮಹಿಳೆ ಕುಟುಂಬದ ಮಾಸಿಕ ಆದಾಯ ಅಂದಾಜು 1 ಲಕ್ಷ ರೂಪಾಯಿ ಆಗುತ್ತದೆ ಎಂದು ನೆಟ್ಟಿಗ ಹೇಳಿಕೊಂಡಿದ್ದಾರೆ. ಮಹಿಳೆಗೆ 30 ಸಾವಿರ ಸಂಬಳ, ಆಕೆಯ ಪತಿ ದಿನಗೂಲಿ ಮಾಡಿಕೊಂಡು ತಿಂಗಳಿಗೆ 30,000 ರೂ. ಸಂಪಾದನೆ ಮಾಡುತ್ತಾರೆ. ಇನ್ನು ಮಹಿಳೆಯ ಹಿರಿಯ ಮಗ ಸೀರೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು 30 ಸಾವಿರ ಗಳಿಸುತ್ತಾರೆ.

ಇನ್ನು ಮಗಳು 11ನೇ ಕ್ಲಾಸ್‌ನಲ್ಲಿ ಓದುತ್ತಿದ್ದು, ಆಕೆ ಪ್ರತಿ ತಿಂಗಳು 3,000 ರೂ. ಖರ್ಚು ಮಾಡಿ ಟೈಲರಿಂಗ್ ಕಲಿಯುತ್ತಿದ್ದಾಳೆ. ಈ ತರಬೇತಿ ಬಳಿಕ ಆಕೆಯೂ ತಿಂಗಳಿಗೆ 15 ರಿಂದ 20 ಸಾವಿರ ರೂಪಾಯಿ ಸಂಪಾದನೆ ಮಾಡಲಿದ್ದಾಳೆ. ಮುಂದಿನ ತಿಂಗಳಿನಿಂದ ಇವರ ಕುಟುಂಬದ ಆದಾಯ 1 ಲಕ್ಷ ರೂ.ಗೂ ಹೆಚ್ಚಾಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಂಪದಾನೆಗೆ ಯಾವುದೇ ರೀತಿ ತೆರಿಗೆಯನ್ನು ಪಾವತಿಸುವುದಿಲ್ಲ. ಮಹಿಳೆ ಮತ್ತು ಆಕೆಯ ಪತಿ ತಮ್ಮ ಸಂಭಾವನೆಯನ್ನು ನಗದು ರೂಪದಲ್ಲಿ ಪಡೆದುಕೊಳ್ಳುತ್ತಾರೆ.

ಕುಟುಂಬದ ಖರ್ಚುಗಳೇನು?

ತಿಂಗಳಿಗೆ 1 ಲಕ್ಷ ರೂ. ಸಂಪಾದಿಸುವ ಈ ಕುಟುಂಬ 6,000 ರೂ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಕ್ಕಿ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಸರ್ಕಾರದ ಯೋಜನೆಯಡಿಯಲ್ಲಿ ಉಚಿತವಾಗಿ ಪಡೆಯುತ್ತಾರೆ. ಇಷ್ಟು ಮಾತ್ರವಲ್ಲ ಹಳ್ಳಿಯಲ್ಲಿ ಸುಂದರವಾದ ಮನೆಯೊಂದನ್ನು ಸಹ ಹೊಂದಿದ್ದಾರೆ. ಈ ಮನೆಯನ್ನು ಪಿಎಂ ಆವಾಸ್ ಯೋಜನೆಯಲ್ಲಿ ಪಡೆದುಕೊಂಡಿದ್ದು, ಸದ್ಯ ಇದನ್ನು ಬಾಡಿಗೆಗೆ ನೀಡಿದ್ದಾರೆ. ಇದು ಈ ಕುಟುಂಬದ ಹೆಚ್ಚುವರಿ ಆದಾಯವಾಗಿದೆ. ಪೂರ್ವಜರಿಂದ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಮೂರು ತಿಂಗಳಿಗೊಮ್ಮೆ ಈ ಕೃಷಿ ಭೂಮಿಯಿಂದ 30 ರಿಂದ 40 ಸಾವಿರ ರೂ. ಆದಾಯ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.

ನಾನು ಹೀಗೆ ಪೋಸ್ಟ್ ಮಾಡಿದ್ದಕ್ಕೆ ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ನನಗೆ ಆಕೆ ಬಗ್ಗೆ ನಿಜಕ್ಕೂ ಸಂತೋಷವಾಗುತ್ತದೆ. ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹಾಗಾಗಿ ಈ ಎಲ್ಲದಕ್ಕೂ ಆ ಕುಟುಂಬ ಅರ್ಹವಾಗಿದೆ. ಆದ್ರೆ ಇಲ್ಲಿ ನಿಜವಾಗಿ ಮಧ್ಯಮ ವರ್ಗಕ್ಕೆ ಸೇರಿದ್ದು ಯಾರು? ಬಡವ/ಶ್ರೀಮಂತ ಯಾರು ಎಂದು ಕೇಳಿದ್ದಾರೆ.

ಮಹಿಳೆ ಕುಟುಂಬದ ಆದಾಯ ತಿಂಗಳಿಗೆ 1.5 ಲಕ್ಷ ರೂ. ಎಂದು ಭಾವಿಸೋಣ. ಇಷ್ಟು ದೊಡ್ಡ ಮೊತ್ತ ಐದು ಜನರ ಗಳಿಕೆಯಾಗಿದೆ. ಅಂದ್ರೆ ಒಬ್ಬರ ಆದಾಯ ಕನಿಷ್ಠ 30 ಸಾವಿರ ರೂಪಾಯಿ ಆಗುತ್ತದೆ. ಹಾಗಾಗಿ ಇಲ್ಲಿ ಯಾರು ತೆರಿಗೆ ವ್ಯಾಪ್ತಿಗೆ ಒಳಪಡಲ್ಲ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.