Viral News: ಸೋಪಲ್ಲಿ ಕೆಮಿಕಲ್ ಇಲ್ಲ ಅಂತಾ ತೋರಿಸೋಕೆ ತಿಂದೇ ಬಿಡೋದಾ?
ನಾವು ತಯಾರಿಸಿದ ಉತ್ಪನ್ನ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗ್ಬೇಕೆಂದ್ರೆ ಒಳ್ಳೆ ಜಾಹೀರಾತು ನೀಡ್ಬೇಕು. ಜನರನ್ನು ಆಕರ್ಷಿಸಬೇಕು. ಅದಕ್ಕೆ ಕಂಪನಿ ನಾನಾ ಕಸರತ್ತು ಮಾಡುತ್ತೆ. ಆತ ಈತ ಮಾಡಿದ್ದು ಅಚ್ಚರಿಗೊಳಿಸುವಂತಿದೆ.
ಬ್ಯುಸಿನೆಸ್ ಮಾಡುವ ಜನರಿಗೆ ತಮ್ಮ ವಸ್ತುಗಳು ಅಥವಾ ಸೇವೆ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗ್ಬೇಕು, ಹೆಚ್ಚು ಗಳಿಸಬೇಕೆಂಬ ಬಯಕೆ ಇದ್ದೇ ಇರುತ್ತೆ. ತಾವು ಮಾಡ್ತಿರುವ ವ್ಯಾಪಾರ ಅಥವಾ ತಯಾರಿಸಿರುವ ವಸ್ತು ಸರಿಯಾಗಿದೆ ಎಂಬುದನ್ನು ಸಾಬೀತುಪಡಿಸಲು ಅವರು ಏನು ಬೇಕಾದ್ರೂ ಮಾಡ್ತಾರೆ. ಜನರನ್ನು ಆಕರ್ಷಿಸಲು ಜಾಹಿರಾತು, ಉತ್ಪನ್ನದ ಬಗ್ಗೆ ಮಾಹಿತಿ ನೀಡೋದು ಅನಿವಾರ್ಯವಾಗುತ್ತದೆ. ಕೆಲವೊಮ್ಮೆ ಇದೇ ಕಾರಣಕ್ಕೆ ಅವರು ಮೂರ್ಖತನದ ಕೆಲಸವನ್ನೂ ಮಾಡ್ತಾರೆ. ಚೀನಾದ ಕಂಪನಿಯೊಂದರ ಚೇರ್ ಮೆನ್ ಇತ್ತೀಚಿಗೆ ಅಂತಹದ್ದೇ ಕೆಲಸ ಮಾಡಿದ್ದಾರೆ. ಆತನ ಮೂರ್ಖತನ ಈಗ ಚರ್ಚೆಯಲ್ಲಿದೆ. ಚೀನಾ ಸಾಮಾಜಿಕ ಜಾಲತಾಣದಲ್ಲಿ ಆತ ಮಾಡಿದ ಕೆಲಸದ ವಿಡಿಯೋ ವೈರಲ್ ಆಗಿದೆ.
ಚೀನಾ (China) ಕಂಪನಿ ಚೇರ್ಮೆನ್ ಮಾಡಿದ ಕೆಲಸ ಏನು? : ಸೋಪ್ (Soap) ನಲ್ಲಿ ರಾಸಾಯನಿಕ ಇರೋದು ನಿಮಗೆಲ್ಲ ತಿಳಿದಿದೆ. ಇದು ಅನೇಕ ಬಾರಿ ಅಲರ್ಜಿಗೆ ಕಾರಣವಾಗುತ್ತದೆ. ನಮ್ಮ ಸೋಪ್ ನಲ್ಲಿ ಕೆಮಿಕಲ್ಸ್ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲು ಈ ಕಂಪನಿ (Company) ಅಧ್ಯಕ್ಷ ಸೋಪ್ ತಿಂದಿದ್ದಾನೆ. ಕ್ಲೆನ್ಸಿಂಗ್ ಉತ್ಪನ್ನ ತಯಾರಕ ಹಾಂಗ್‌ವೀ ಅಧ್ಯಕ್ಷರು ಲಾಂಡ್ರಿ ಸೋಪ್ ಬಗ್ಗೆ ಮಾಹಿತಿ ನೀಡ್ತಿದ್ದರು. ಈ ವೇಳೆ ಸೋಪ್ ಯಾವುದೇ ಹಾನಿಕಾರಕ ರಾಸಾಯನಿಕವನ್ನು ಹೊಂದಿಲ್ಲವೆಂದು ಅವರು ಹೇಳಿದರು. ಸೋಪ್ ಬರೀ ಕ್ಷಾರ, ಪ್ರಾಣಿಗಳ ಕೊಬ್ಬು ಮತ್ತು ಹಾಲನ್ನು ಮಾತ್ರ ಹೊಂದಿರುತ್ತದೆ ಎಂದು ಅವರು ಹೇಳಿದ್ದಲ್ಲದೆ ಅದನ್ನು ಬಿಸ್ಕತ್ ನಂತೆ ತಿನ್ನಲು ಶುರು ಮಾಡಿದ್ರು.
ವೀಡಿಯೋದಲ್ಲಿ ಅವರು ಹಾಂಗ್‌ವೇ ಸೋಪ್ ಅನ್ನು ಹಸು ಮತ್ತು ಕುರಿಗಳ ಕೊಬ್ಬಿನಿಂದ ತಯಾರಿಸಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಯಾವುದೇ ಗಟರ್ ಆಯಿಲ್ ಅಥವಾ ಟಾಲ್ಕ್ ಅಥವಾ ಬಿಳಿಮಾಡುವ ಏಜೆಂಟ್ ಟೈಟಾನಿಯಂ ಡೈಆಕ್ಸೈಡ್‌ನಂತಹ ವಸ್ತು ಇದರಲ್ಲಿ ಇಲ್ಲ ಎಂದು ಅವರು ಹೇಳುತ್ತಾರೆ .
Watch: ಮೂರು ಕಂಪನಿಗಳ 11 ಕೋಟಿ ಮೌಲ್ಯದ ಷೇರು ಹೊಂದಿದ್ದರೂ, ಸರಳವಾಗಿ ಬದುಕುವ ಕರ್ನಾಟಕದ ಹಿರಿಯ ಜೀವ!
ಸೋಪ್ ಹೊಟ್ಟೆ ಒಳಗೆ ಹೋದ್ರೆ ಏನಾಗುತ್ತೆ? : ಸೋಪನ್ನು ತಿಂದಿದ್ದಲ್ಲದೆ ಅದು ಹೊಟ್ಟೆಗೆ ಹೋದ್ರೆ ಏನಾಗುತ್ತೆ ಎಂಬುದನ್ನು ಅಧ್ಯಕ್ಷರು ವಿಡಿಯೋದಲ್ಲಿ ಹೇಳುತ್ತಾರೆ. ಇದು ಹೊಟ್ಟೆಯನ್ನು ಪ್ರವೇಶಿಸಿದರೆ ಅದು ದೇಹದ ಕೊಬ್ಬು ಮತ್ತು ಎಣ್ಣೆಯಾಗಿ ಬದಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ.
ಸೋಪ್ ತಿನ್ನಬೇಡಿ ಎಂದ ಅಧ್ಯಕ್ಷ : ವಿಡಿಯೋದಲ್ಲಿ ತಾನು ಸೋಪನ್ನು ಬಿಸ್ಕತ್ ನಂತೆ ತಿಂದರೂ ಜನರಿಗೆ ಇದನ್ನು ತಿನ್ನದಂತೆ ಸಲಹೆ ನೀಡಿದ್ದಾರೆ. ನಾನು ಏಕೆ ಸೋಪ್ ತಿಂದೆ ಎಂಬುದು ನಿಮಗೆ ತಿಳಿದಿರಬಹುದು. ಸೋಪ್ ಎಷ್ಟು ಶುದ್ಧವಾಗಿದೆ ಎಂಬುದನ್ನು ನಿಮಗೆ ಅರ್ಥ ಮಾಡಿಸಲು ನಾನು ಇದರ ಸೇವನೆ ಮಾಡಿದ್ದೇನೆ. ಇದು ದೇಹಕ್ಕೆ ಹೋದ್ಮೇಲೆ ಕೊಬ್ಬು ಮತ್ತು ಎಣ್ಣೆಯಾಗಿ ಬದಲಾಗುತ್ತದೆ ನಿಜ. ಆದ್ರೆ ನಿಮ್ಮ ದೇಹದ ಕೊಬ್ಬನ್ನು ಕರಗಿಸುವ ಕೆಲಸವನ್ನು ಸೋಪ್ ಮಾಡುತ್ತೆ ಎಂಬುದನ್ನು ನಾನು ಹೇಳೋದಿಲ್ಲ. ನಮ್ಮ ಕಂಪನಿ ಸೋಪ್ ನಲ್ಲಿ ನಾವು ಕೆಮಿಕಲ್ ಬಳಸದೆ ಇರಬಹುದು. ಆದ್ರೆ ಇದು ತಿನ್ನಲು ಯೋಗ್ಯವಲ್ಲ. ಯಾವುದೇ ಕಾರಣಕ್ಕೂ ನೀವು ಸೋಪ್ ತಿನ್ನಬೇಡಿ ಎಂದು ಅಧ್ಯಕ್ಷರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಪ್ ಕಂಪನಿ ಅಧ್ಯಕ್ಷರು ತಮ್ಮ ಉತ್ಪನ್ನ ಎಷ್ಟು ಶುದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಸೋಪನ್ನು ತಿಂದಿದ್ದಿರಬಹುದು. ಆದ್ರೆ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಅಧ್ಯಕ್ಷನ ವರ್ತನೆಯನ್ನು ಹಾಸ್ಯ ಮಾಡಿದ್ದಾರೆ. ಅನೇಕರು ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬ ಹಸಿವಿನ ಸಂದರ್ಭದಲ್ಲಿ ಇದು ಜೀವ ಉಳಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಇದು ಮಿತಿ ಮೀರಿದ ಮಾರ್ಕೆಟಿಂಗ್ ತಂತ್ರವೆಂದೂ ಕೆಲವರು ಕಮೆಂಟ್ ಮಾಡಿದ್ದಾರೆ.