ಗುರುಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಕುಸಿದು ಟ್ರಕ್ ಒಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗುರುಗ್ರಾಮ್: ನಿನ್ನೆ ಸಂಜೆ ಒಂದೇ ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ ರಾಷ್ಟ್ರ ರಾಜಧಾನಿ ಸಮೀಪದ ಗುರುಗ್ರಾಮ ಅಕ್ಷರಶಃ ಕೆರೆಯಂತಾಗಿದ್ದು, ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿತ್ತು. ಹೀಗಾಗಿ ಇಂದು ಅಲ್ಲಿದ್ದ ಬಹುತೇಕ ಕಚೇರಿಗಳಿಗೆ ಜಿಲ್ಲಾಡಳಿತವೂ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿತ್ತು.
ಇದರ ನಡುವೆ ನಿನ್ನೆ ಸುರಿದ ಭಾರಿ ಮಳೆಯ ಪರಿಣಾಮ ಗುರುಗ್ರಾಮದ ದಕ್ಷಿಣ ಪೆರಿಫೆರಲ್ ರಸ್ತೆಯ (SPR) ಒಂದು ದೊಡ್ಡ ಭಾಗವೇ ಕುಸಿದು ಹೋಗಿದ್ದು, ರಸ್ತೆ ಮಧ್ಯೆಯೇ 40 ಅಡಿ ಆಳದ ಕಂದಕ ನಿರ್ಮಾಣವಾಗಿತ್ತು. ಈ ಕಂದಕಕ್ಕೆ 14 ಚಕ್ರಗಳ ಟ್ರಕ್ಕೊಂದು ಬಿದ್ದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹುಶಃ ಟ್ರಕ್ ಸಾಗುತ್ತಿದ್ದ ವೇಳೆಯೇ ರಸ್ತೆ ಕುಸಿದು ಈ ದೊಡ್ಡ ಕಂದಕ ಸೃಷ್ಟಿಯಾಗಿದ್ದು ಈ ಕಂದಕದೊಳಗೆ ಟ್ರಕ್ ಬಿದ್ದಿದೆ. ಆದರೆ ಅದೃಷ್ಟವಶಾತ್ ಚಾಲಕ ಮತ್ತು ಅವನ ಸಹಾಯಕ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ನಿನ್ನೆ ರಾತ್ರಿ ಗುರುಗ್ರಾಮವೂ ಸೇರಿದಂತೆ ರಾಷ್ಟ್ರ ರಾಜಧಾನಿಗೆ ಸಮೀಪದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಗುರುಗ್ರಾಮದಲ್ಲಿ ಕಳೆದ 12 ಗಂಟೆಗಳಲ್ಲಿ 133 ಮಿ.ಮೀ ಮಳೆಯಾಗಿದ್ದರೆ ಇದರಲ್ಲಿ ಕೇವಲ 90 ನಿಮಿಷಗಳಲ್ಲಿ 103 ಮಿ.ಮೀ ಮಳೆಯಾಗಿದೆ ಇಲ್ಲಿ ಭಾರತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಗುರುವಾರ ಬೆಳಗ್ಗೆಯೂ ಮಳೆ ಮುಂದುವರಿದಿದ್ದರಿಂದ, ಗುರುಗ್ರಾಮ್‌ನ ಹಲವಾರು ಭಾಗಗಳು ಜಲಾವೃತವಾಗಿದ್ದು, ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಗುರುಗ್ರಾಮ್‌ನ ನರಸಿಂಗ್‌ಪುರ ಪ್ರದೇಶದ ಇತ್ತೀಚಿನ ದೃಶ್ಯಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿರುವುದು ಕಾಣಿಸುತ್ತದೆ. ಹೀಗಾಗಿ ಆ ಪ್ರದೇಶದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.
ಭಾರೀ ಮಳೆಯ ಕಾರಣಕ್ಕೆ, ಜಿಲ್ಲಾಡಳಿತವೂ, ಗುರುಗ್ರಾಮ್ ಜಿಲ್ಲೆಯ ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ಜುಲೈ 10, ಗುರುವಾರ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಮಾರ್ಗದರ್ಶನ ನೀಡಬೇಕೆಂದು ಅಧಿಸೂಚನೆ ಹೊರಡಿಸಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತೀಚಿನ ಬುಲೆಟಿನ್ ಪ್ರಕಾರ, ಮುಂದಿನ ಮೂರು ದಿನಗಳವರೆಗೆ ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಹಾಗೆಯೇ ಚಂಡೀಗಢದ ಪ್ರಾದೇಶಿಕ ಹವಾಮಾನ ಕೇಂದ್ರವು ಗುರುಗ್ರಾಮದಲ್ಲಿ ಮುಂದಿನ ಎರಡು ದಿನಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವು ಬಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
