ಭಾರತೀಯ ರೈಲ್ವೆಯ ಜನತಾ ಖಾನ ಯೋಜನೆಯು ಕೇವಲ ₹15ಕ್ಕೆ ಪ್ರಯಾಣಿಕರಿಗೆ ಒಳ್ಳೆಯ ಊಟ ಒದಗಿಸುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನವದೆಹಲಿ: ಭಾರತೀಯ ರೈಲ್ವೆಯಲ್ಲಿ ರೈಲು ಪ್ರಯಾಣದ ವೇಳೆ ಸಿಗುವ ಆಹಾರದ ವಿಚಾರ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಅನೇಕ ಬಾರಿ ರೈಲ್ವೆಯ ಆಹಾರ ಕಳಪೆ ಗುಣಮಟ್ಟದ ಕಾರಣಕ್ಕೆ ವೈರಲ್ ಆಗುತ್ತದೆ. ಆದರೆ ಈ ಬಾರಿ ಒಂದೊಳ್ಳೆ ಕಾರಣಕ್ಕೆ ರೈಲ್ವೆಯ ಆಹಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಜನರಿಗೆ ಕೈಗೆಟುಕ ದರದಲ್ಲಿ ರೈಲ್ವೆ ಉಪಹಾರ ಒದಗಿಸುತ್ತಿದೆ.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಕಳೆದ ವರ್ಷ ಭಾರತೀಯ ರೈಲ್ವೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರಯಾಣಿಕರಿಗೆ, ವಿಶೇಷವಾಗಿ ಸಾಮಾನ್ಯ ದರ್ಜೆಯ ಬೋಗಿಗಳಲ್ಲಿರುವವರಿಗೆ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು ನೀಡುವ ಸಂಕಲ್ಪ ಮಾಡಿದೆ. ಇದರ ಫಲವಾಗಿ ಈಗ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಆಹಾರ ಸಿಗುತ್ತಿದ್ದು ಅದರ ವೀಡಿಯೋ ಈಗ ವೈರಲ್ ಆಗಿದೆ.
ಜೆಮ್ಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ರೈಲ್ವೆಯ ಪ್ರಯಾಣಿಕರೊಬ್ಬರು ರೈಲ್ವೆಯ 15 ರೂಪಾಯಿ ಊಟದಲ್ಲಿ ಏನೇನಿದೆ ಎಂಬುದು ವೀಡಿಯೋದಲ್ಲಿದೆ. 15 ರೂಪಾಯಿಯ ಪ್ಯಾಕ್‌ನಲ್ಲಿ 7 ಪುರಿ ಹಾಗೂ ಅದಕ್ಕೆ ಸಾಕಾಗುವಷ್ಟು ಸಾಗು(ಬಾಜಿಯನ್ನು) ನೀಡಲಾಗಿದೆ. ಇದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಕೇವಲ 15 ರೂಪಾಯಿಯಲ್ಲಿ ಒಳ್ಳೆಯ ಆಹಾರವನ್ನೇ ರೈಲ್ವೆ ತನ್ನ ಸಾಮಾನ್ಯ ಪ್ರಯಾಣಿಕರಿಗೆ ನೀಡಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಕ್ಷಕರಿಂದ ಒಳ್ಳೆ ಸ್ಪಂದನೆ ವ್ಯಕ್ತವಾಗಿದೆ. ಜನತಾ ಖಾನ: ಕೇವಲ ₹15 ಗೆ ಭಾರತೀಯ ರೈಲ್ವೆಯ ಕೈಗೆಟುಕುವ ಊಟ ಯೋಜನೆ. ಎಂದು ಬರೆದು ಅವರು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ಏಳು ಪೂರಿಗಳು ಮತ್ತು ಭಾಜಿ ಜೊತೆಗೆ ಉಪ್ಪಿನಕಾಯಿಯನ್ನು ಒಳಗೊಂಡಿರುವ 'ಜನತಾ ಖಾನಾ'ವನ್ನು ತೋರಿಸಲಾಗಿದೆ. ಈ ಊಟವು 15 ರೂ.ಗಳಿಗೆ ಲಭ್ಯವಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಅಗ್ಗದ ಮತ್ತು ಹೊಟ್ಟೆ ತುಂಬುವ ಆಹಾರವನ್ನು ನೀಡುವುದು ಈ ಜನತಾ ಖಾನ ಯೋಜನೆಯ ಹಿಂದಿನ ಉದ್ದೇಶವಾಗಿದೆ. ಇದಲ್ಲದೇ ಇದಕ್ಕಿಂತ 5 ರೂ ಜಾಸ್ತಿ ನೀಡಿದರೆ ಅಂದರೆ 20 ರೂ ನೀಡಿದರೆ ನಿಮಗೆ ಈ ಆಹಾರದ ಜೊತೆ 300 ಮಿಲಿ ನೀರಿನ ಬಾಟಲಿಯೂ ಸಿಗುವುದು.
ಈ ವೀಡಿಯೋವನ್ನು 800,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಹಲವಾರು ಈ ಕೈಗೆಟುಕ ದರದಲ್ಲಿ ಸಿಗುವ ಆಹಾರಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಊಟದ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ. ಈ ಬೆಲೆಗೆ ಈ ಆಹಾರ ಪ್ರಮಾಣಿಕವಾಗಿ ಹೇಳುವುದಾದರೆ ಚೆನ್ನಾಗಿದೆ. ಇದೇ ವ್ಯವಸ್ಥೆಪ್ರತಿ ರೈಲ್ವೆ ನಿಲ್ದಾಣದಲ್ಲಿ ಲಭ್ಯವಿರಬೇಕು" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಕಡಿಮೆ ಹಣವನ್ನು ಹೊಂದಿರುವ ಜನರಿಗೆ ಇದು ಒಳ್ಳೆಯ ವ್ಯವಸ್ಥೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
15 ರೂಪಾಯಿಗೆ ಪೂರ್ತಿ ಊಟ ಇದು ಸಾರ್ವಜನಿಕ ಸೇವೆ ಕಾಣಿಸುವ ರೀತಿ. ಈ ಜನತಾ ಖಾನ ಎಂಬುದು ಕಡಿಮೆ ಬೆಲೆಯಲ್ಲಿ ದೊಡ್ಡ ಪರಿಣಾಮ ಬೀರುವ ಯೋಜನೆಯಾಗಿದೆ. ಯಾರು ಹಸಿವಿನಿಂದ ಬಳಲಬಾರದು ಎಂಬ ಉದ್ಏಶ ಹೊಂದಿದೆ. ಈ ವ್ಯವಸ್ಥೆ ಮಾಡಿ ತಿನ್ನುವ ತಟ್ಟೆಯಲ್ಲಿ ಗೌರವ ಇಟ್ಟ ಭಾರತೀಯ ರೈಲ್ವೆಗೆ ಧನ್ಯವಾದಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದು ಒಳ್ಳೆಯ ಪ್ರಯತ್ನ. ಆದರೆ ರೈಲು ಪ್ರಯಾಣ ಮಾಡುವುದಕ್ಕೆ ಇರುವುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರು ಚಲಿಸುವ ಗಾಡಿಯಲ್ಲಿರುವ 5 ಸ್ಟಾರ್ ಹೊಟೇಲ್‌ನವರಲ್ಲ, ನೀವು ನಿಮ್ಮ ಆಹಾರದ ಬಗ್ಗೆ ಭಾರಿ ಕಳವಳ ಹೊಂದಿದ್ದರೆ ಅದನ್ನು ನೀವು ಹೊರಗಿನಿಂದಲೇ ತರಿಸಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇದು ತುಂಬಾ ಚೆನ್ನಾಗಿರುತ್ತದೆ. ನಾನು ಈ ಜನತಾ ಮಿಲ್ ಅನ್ನು ಈ ಹಿಂದೆ ತಿಂದಿದ್ದೇನೆ. ಅದು ರುಚಿಯ ಜೊತೆ ನಿಮ್ಮ ಹೊಟ್ಟೆಯನ್ನು ಸಂಪೂರ್ಣವಾಗಿ ತುಂಬಿಸುತ್ತದೆ. ಹಾಗೂ ಇದು ಎಲ್ಲಾ ಕಡೆ ರೈಲುಗಳಲ್ಲಿ ಸಿಗುವಂತಾಗಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗಿದ್ದು ಕೆಲವರು ಈ ಆಹಾರವನ್ನು ಟೀಕೆ ಮಾಡಿದ್ದಾರೆ. ಈ ಆಹಾರದ ಗುಣಮಟ್ಟ ಚೆನ್ನಾಗಿಲ್ಲ ಸಾಧಾರಣವಾದ ಊಟ ಇದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
