CPR to Baby Monkey: ಕೇರಳಂನ ತಿರುವನಂತಪುರದಲ್ಲಿ ಹೃದಯಸ್ಪರ್ಶಿ ಘಟನೆ ನಡೆದಿದ್ದು, ವಿದ್ಯುತ್ ತಂತಿ ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಮರಿ ಕೋತಿಗೆ ಫಾರೆಸ್ಟ್ ಆಫೀಸರ್ ಒಬ್ಬರು ಸಮಯಪ್ರಜ್ಞೆ ಮೆರೆದು CPR ಕೊಟ್ಟು ಪ್ರಾಣ ಉಳಿಸಿದ ಘಟನೆ ನಡೆದಿದೆ. ಹಳೆ ವಿಡೀಯೋ ಸೋಶಿಯಲ್ ಮೀಡೀಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.
ಫಾರೆಸ್ಟ್ ಆಫೀಸರ್ ಸಮಯಪ್ರಜ್ಞೆಯಿಂದ ಉಳಿಯಿತು ಮರಿ ಕೋತಿಯ ಪ್ರಾಣ
ಸಮಯ ಪ್ರಜ್ಞೆ ಇದ್ದರೆ, ಎಂತಹ ಸಂದರ್ಭದಲ್ಲೂ ಸಹ ಗೆದ್ದು ಬರಬಹುದು, ಒಂದು ಜೀವವನ್ನೂ ಉಳಿಸಬಹುದು ಅನ್ನೋದಕ್ಕೆ ಬೆಸ್ಟ್ ಉದಾಹರಣೆ ಈ ಘಟನೆ. ಇದು ನಡೆದು ವರ್ಷವಾಗಿರಬಹುದು, ಆದರೆ ಫಾರೆಸ್ಟ್ ಆಫೀಸರ್ ಕರ್ತವ್ಯ ಮತ್ತು ಸಮಯಪ್ರಜ್ಞೆಯಿಂದ ಸಾವಿನ ದವಡೆಯಿಂದ ಒಂದು ಜೀವವನ್ನು ಉಳಿಸಿ ತಂದಿರುವುದಂತೂ ನಿಜಾ. ಈ ಘಟನೆ ನಡೆದಿರುವುದು ಕೇರಳಂನ ತಿರುವನಂತಪುರದಲ್ಲಿ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ? ಇಲ್ಲಿದೆ ಘಟನೆಯ ಸಂಪೂರ್ಣ ಮಾಹಿತಿ.
ತಿರುವನಂತಪುರದ ಗೋಲ್ಡನ್ ವ್ಯಾಲಿ ಚೆಕ್‌ಪೋಸ್ಟ್ ಬಳಿ, ಮರಿ ಕೋತಿಯೊಂದು ತನ್ನ ಕೋತಿಗಳ ಗುಂಪಿನೊಂದಿಗೆ ಮರದಿಂದ ಮರಕ್ಕೆ ಹಾರುತ್ತಾ, ಆಟವಾಡುತ್ತಾ, ತಮಾಷೆಯಾಗಿ ಜಗಳ ಮಾಡುತ್ತಾ, ನಲಿದಾಡುತ್ತಿತ್ತು. ಆದರೆ ಅಕಸ್ಮಿಕವಾಗಿ ಆ ತಮಾಷೆ ಟ್ರಾಜಿಕ್ ಘಟನೆಯಾಗಿ ಬದಲಾಗಿದೆ. ಆಡುವ ಭರದಲ್ಲಿ ಮರಿ ಕೋತಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಸೆಕೆಂಡುಗಳಲ್ಲಿ ಕರೆಂಟ್ ಶಾಕ್ ಹೊಡೆದ ಪರಿಣಾಮವಾಗಿ, ಮರಿ ಕೋತಿ ಕುಸಿದು ನೆಲಕ್ಕೆ ಬಿದ್ದಿದೆ. ವಿದ್ಯುತ್ ಶಾಕ್ ನಿಂದಾಗಿ ಪ್ರಜ್ಞೆಯನ್ನು ಕಳೆದುಕೊಂಡಿತ್ತು.
ಮರಿ ಕೋತಿಗೆ ಸಿಪಿಆರ್ ಕೊಟ್ಟ ಫಾರೆಸ್ಟ್ ಆಫೀಸರ್
ಸಮೀಪದಲ್ಲಿ ಕರ್ತವ್ಯದಲ್ಲಿದ್ದ ಪೊನ್ಮುಡಿಯಲ್ಲಿ ಬೀಟ್ ಫಾರೆಸ್ಟ್ ಅಧಿಕಾರಿ ಅರುಣ್ ಪಿಆರ್ ಬಿದ್ದ ಕೋತಿಯನ್ನು ನೋಡಿದ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೆ ಸಹಾಯ ಮಾಡಲು ಧಾವಿಸಿದರು. ಒಂದು ಕ್ಷಣವೂ ವ್ಯರ್ಥ ಮಾಡದೆ, ತಮ್ಮ ಸಮಯ ಹಾಗೂ ಕರ್ತವ್ಯ ಪ್ರಜ್ಞೆಯಿಂದಾಗಿ ನಿಮಿಷದಲ್ಲಿ ಪ್ರಜ್ಞೆಯಿಲ್ಲದೆ ನೆಲದ ಮೇಲೆ ಬಿದ್ದಂತಹ ಕೋತಿ ಮರಿಯನ್ನು ಕೈಯಲ್ಲಿ ಹಿಡಿದು, ಕಾಡಿನ ಮಧ್ಯದಲ್ಲಿಯೇ ಸಿಪಿಆರ್ ಮಾಡಲು ಪ್ರಾರಂಭಿಸಿದರು. ನಿಮಿಷಗಳ ನಂತರ, ಪ್ರಯತ್ನವು ಫಲ ನೀಡಿತು. ಮರಿ ಕೋತಿ ನಿಧಾನವಾಗಿ ಪ್ರಜ್ಞೆಯನ್ನು ಮರಳಿ ಪಡೆಯಿತು.
ಅಮ್ಮನ ಮಡಿಲು ಸೇರಿದ ಮರಿ ಕೋತಿ
ಮರಿ ಕೋತಿಯ ಸ್ಥಿತಿ ಸ್ಥಿರವಾದ ನಂತರ, ಅದನ್ನು ಎಚ್ಚರಿಕೆಯಿಂದ ತಾಯಿಯ ಬಳಿಗೆ ಬಿಟ್ಟು ಬಂದರು, ತಾಯಿ ಕೋತಿ ಓಡೋಡಿ ಬಂದು ತನ್ನ ಮರಿಯನ್ನು ಗಟ್ಟಿಯಾಗಿ ಬಿಗಿದಪ್ಪಿ, ಕಾಡಿನೊಳಗೆ ಓಡಿದೆ. ಇನ್ನು ಫಾರೆಸ್ಟ್ ಆಫೀಸರ್ ಸಿಪಿಆರ್ ಮಾಡುವುದನ್ನು ಮರದ ಮೇಲಿನಿಂದಲೇ ದೂರದಿಂದಲೇ ಕುಳಿತು ನೋಡುತ್ತಿದ್ದ ಮಂಗಗಳು ಸಹ, ಮರಿಕೋತಿ ಎಚ್ಚರವಾಗುತ್ತಿದ್ದಂತೆ ಕೆಳಗಿಳಿದು ಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಾನವೀಯತೆ ಜಾತಿ, ಧರ್ಮ, ಪ್ರಾಣಿ, ಪಕ್ಷಿ, ಮನುಷ್ಯರನ್ನು ಮೀರಿಸಿದ್ದು ಎಂದು ತೋರಿಸಿದ್ದಕ್ಕಾಗಿ ಫಾರೆಸ್ಟ್ ಆಫೀಸರ್ ಅರುಣ್ ಪಿಆರ್ ಮತ್ತು ಕೇರಳದ ಅರಣ್ಯ ತಂಡಕ್ಕೆ ನೆಟ್ಟಿಗರು ಧನ್ಯವಾದಗಳನ್ನು ತಿಳಿಸಿದ್ದಾರೆ.


