38 ವರ್ಷದ ದಂಪತಿ 11.5 ಕೋಟಿ ರೂ. ಆಸ್ತಿ ಗಳಿಸಿ, ಸಾಲ ಮತ್ತು ಮಕ್ಕಳ ಜವಾಬ್ದಾರಿ ಇಲ್ಲದೆ ಆರಂಭಿಕ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಕಾರ್ಪೊರೇಟ್ ಒತ್ತಡದಿಂದಾಗಿ ಆರೋಗ್ಯ ಮತ್ತು ಸಮಯಕ್ಕೆ ಹೆಚ್ಚು ಮೌಲ್ಯ ನೀಡಿರುವ ಅವರ 'FIRE' ಯೋಜನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆಧುನಿಕ ಕಾರ್ಪೊರೇಟ್ ಜಗತ್ತಿನಲ್ಲಿ ಬ್ರೆಕ್-ಲೆಸ್ ಓಟ, ದೀರ್ಘಾವಧಿಯ ಕೆಲಸದ ಅವಧಿ ಮತ್ತು ಮಾನಸಿಕ ಒತ್ತಡವು ಯುವಜನರ ಆದ್ಯತೆಗಳನ್ನೇ ಬದಲಾಯಿಸುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಪುಣೆಯ ಈ ೩೮ ವರ್ಷದ ದಂಪತಿ. ಯಾವುದೇ ರೀತಿಯ ಸಾಲದ ಹೊರೆಯಿಲ್ಲದೆ, ಮಕ್ಕಳ ಜವಾಬ್ದಾರಿಯೂ ಇಲ್ಲದೆ ಬರೋಬ್ಬರಿ ೧೧.೫ ಕೋಟಿ ರೂಪಾಯಿಗಳ ಬೃಹತ್ ಆಸ್ತಿ ಗಳಿಸಿರುವ ಈ ದಂಪತಿ, ಮುಂಬರುವ ೨ ರಿಂದ ೩ ವರ್ಷಗಳಲ್ಲಿ ತಮ್ಮ ಪೂರ್ಣಾವಧಿಯ ವೃತ್ತಿಜೀವನಕ್ಕೆ ಶಾಶ್ವತವಾಗಿ ವಿದಾಯ ಹೇಳಲು (ಮೂಲತಃ 'FIRE' – Financial Independence, Retire Early ಸಿದ್ಧಾಂತ) ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಬಳಕೆದಾರರಾದ ಅಮಿತ್ ಅರೋರಾ ಎಂಬುವವರು ತಮ್ಮ ಈ ಸೋದರಸಂಬಂಧಿ ದಂಪತಿಯ ಸ್ಫೂರ್ತಿದಾಯಕ ಹಾಗೂ ಆಶ್ಚರ್ಯಕರ ಆರ್ಥಿಕ ಪಯಣವನ್ನು ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
11.5 ಕೋಟಿ ರೂಪಾಯಿ ಹೂಡಿಕೆ ವಿವರ ಹೀಗಿದೆ!
ದಂಪತಿಗಳು ಅತ್ಯಂತ ಯೋಜನಾಬದ್ಧವಾಗಿ ತಮ್ಮ ಸಂಪತ್ತನ್ನು ವಿವಿಧ ಕಡೆ ಹೂಡಿಕೆ ಮಾಡಿದ್ದಾರೆ:
ಯುಎಸ್ ಷೇರು ಮಾರುಕಟ್ಟೆ; ಸುಮಾರು ೫ ಕೋಟಿ ರೂಪಾಯಿ
ರಿಯಲ್ ಎಸ್ಟೇಟ್ ಆಸ್ತಿಗಳು; 3.2 ಕೋಟಿ ರೂಪಾಯಿ
ಭಾರತೀಯ ಷೇರುಗಳು & ಮ್ಯೂಚುವಲ್ ಫಂಡ್‌ಗಳು; 1.8 ಕೋಟಿ ರೂಪಾಯಿ
ನಗದು ಮತ್ತು ನಿವೃತ್ತಿ ಉಳಿತಾಯ; 1.5 ಕೋಟಿ ರೂಪಾಯಿ
ಹಿನ್ನೆಲೆ ಮತ್ತು ಹಠಾತ್ ನಿರ್ಧಾರಕ್ಕೆ ಕಾರಣವೇನು?
ಈ ದಂಪತಿಯನ್ನು 'DINK' (Double Income, No Kids) (ಇಬ್ಬರಿಗೂ ಆದಾಯವಿದೆ, ಮಕ್ಕಳಿಲ್ಲ) ವರ್ಗಕ್ಕೆ ಸೇರಿಸಬಹುದು. ಇವರ ವಾರ್ಷಿಕ ಜೀವನಶೈಲಿಯ ವೆಚ್ಚ ಸುಮಾರು 22 ಲಕ್ಷ ರೂಪಾಯಿ. ಇದರಲ್ಲಿ ಅವರ ನಿವೃತ್ತ ಪೋಷಕರ ಆರೈಕೆ ವೆಚ್ಚವೂ ಸೇರಿದೆ. ಸಾಮಾನ್ಯವಾಗಿ ಹೆಚ್ಚಿನ ದಂಪತಿಗಳಿಗೆ ಇರುವ ಮಕ್ಕಳ ಶಿಕ್ಷಣ, ಉನ್ನತ ವ್ಯಾಸಂಗ ಅಥವಾ ಮದುವೆಯಂತಹ ಭಾರಿ ಮೊತ್ತದ ವೆಚ್ಚಗಳ ಜವಾಬ್ದಾರಿ ಇವರಿಗಿಲ್ಲ.
ನೆಮ್ಮದಿ ಜೀವನಕ್ಕೆ ಸನಯ ಬಂದಿದೆ!
ಆರಂಭದಲ್ಲಿ ಇನ್ನೂ ದೊಡ್ಡ ಮೊತ್ತದ ಹಣದ ನಿಧಿ ನಿರ್ಮಿಸಬೇಕೆಂಬ ಆಸೆ ಇವರಿಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇಬ್ಬರ ಕೆಲಸದಲ್ಲೂ ಹೆಚ್ಚಿದ ದೀರ್ಘಾವಧಿ ದುಡಿಮೆ ಮತ್ತು ಕಠಿಣ ಸವಾಲುಗಳು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸಿದವು. "ಹಣ ಗಳಿಸುವುದಕ್ಕಿಂತ ಸಮಯ ಮತ್ತು ಆರೋಗ್ಯವೇ ಜೀವನದ ನಿಜವಾದ ಸಂಪತ್ತು" ಎಂಬ ಸತ್ಯ ಅವರಿಗೆ ಅರಿವಾಯಿತು. ದಂಪತಿಯ ಪತ್ನಿ ಹೇಳುವಂತೆ, "ನಾವು ನಮ್ಮ ಸಂಪೂರ್ಣ ಬಾಲ್ಯ ಮತ್ತು ಯೌವನವನ್ನು ಹಣ ಗಳಿಸುವುದರಲ್ಲೇ ಕಳೆದೆವು, ಈಗ ಆ ಹಣವನ್ನು ನಮ್ಮ ಜೀವನ ಸಂತೋಷವಾಗಿ ಕಳೆಯಲು ಬಳಸುವ ಸಮಯ ಬಂದಿದೆ."
ಸೋಷಿಯಲ್ ಮೀಡಿಯಾದಲ್ಲಿ ಮಹಾ ಚರ್ಚೆ!
ಅಮಿತ್ ಅರೋರಾ ಅವರ ಈ ಪೋಸ್ಟ್ ಬಹಿರಂಗಗೊಳ್ಳುತ್ತಿದ್ದಂತೆಯೇ ನೆಟ್ಟಿಗರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಬೆಂಬಲಿಸುವ ವರ್ಗ; ಮಕ್ಕಳಿಲ್ಲದ ಮತ್ತು 11.5 ಕೋಟಿಯಷ್ಟು ಬೃಹತ್ ಆಸ್ತಿ ಹೊಂದಿರುವ ಈ ದಂಪತಿಗೆ ಇದು ಕನಸಿನ ಸನ್ನಿವೇಶ. ವರ್ಷಕ್ಕೆ ೨೨ ಲಕ್ಷ ಖರ್ಚು ಮಾಡುವ ಅವರು ಈಗಲೇ ಉದ್ಯೋಗ ತೊರೆದು ಆರಾಮವಾಗಿ ಜೀವನ ಆನಂದಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಎಚ್ಚರಿಕೆ ನೀಡುವ ವರ್ಗ; ಮತ್ತೆ ಕೆಲವರು, ನಿವೃತ್ತಿಯ ನಿರ್ಧಾರವು ಕೇವಲ ಒಟ್ಟು ಆಸ್ತಿ ಮೇಲಷ್ಟೇ ಅಲ್ಲ, ಭವಿಷ್ಯದಲ್ಲಿ ಬರುವ ಹಣದ ಹರಿವು (Cash Flow) ಮತ್ತು ಹಣದುಬ್ಬರವನ್ನು (Inflation) ಹೇಗೆ ಎದುರಿಸುತ್ತೀರಿ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಕೇವಲ 38ನೇ ವಯಸ್ಸಿನಲ್ಲಿ ಉದ್ಯೋಗ ತೊರೆಯುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ದಂಪತಿ ನಿಲುವು!
ಕೆಲಸವನ್ನು ದ್ವೇಷಿಸುತ್ತಿದ್ದಾರೆ ಎಂದಾಗಲಿ ಅಥವಾ ಸಾಧಿಸುವ ಆಸೆ ಮುಗಿಯಿತು ಎಂದಾಗಲಿ ಈ ದಂಪತಿ ಹೊರಬರುತ್ತಿಲ್ಲ. ಬದಲಾಗಿ ಬ್ಯಾಂಕ್ ಖಾತೆಯಲ್ಲಿನ ಸಂಖ್ಯೆಗಿಂತ ತಮ್ಮದೇ ಆದ ಸಮಯಕ್ಕೆ ಹೆಚ್ಚು ಮೌಲ್ಯ ನೀಡುವುದು ಮುಖ್ಯ ಎಂಬ ನಿಲುವು ತಳೆದಿದ್ದಾರೆ. ಇಂದಿನ ಕಾರ್ಪೊರೇಟ್ ಯುಗದಲ್ಲಿ ಯುವಜನತೆಗೆ ಈ ಕಥೆ ಹೊಸ ಆಲೋಚನಾ ಶಕ್ತಿಯನ್ನು ನೀಡುತ್ತಿರುವುದಂತೂ ಸತ್ಯ.


