Self-defense for women: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಯಾರಾದರೂ ಹಿಂಬದಿಯಿಂದ ಜುಟ್ಟು ಹಿಡಿದು ಅಟ್ಯಾಕ್ ಮಾಡಿದರೆ ಏನು ಮಾಡಬೇಕು? ಇನ್‌ಸ್ಟಾಗ್ರಾಂನಲ್ಲಿ 1.8 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿರುವ ಈ ಒಂದು ಸಣ್ಣ ಟೆಕ್ನಿಕ್ ಹೆಣ್ಣುಮಕ್ಕಳ ರಕ್ಷಣೆಗೆ ವರದಾನವಾಗಬಲ್ಲದು. ಅಂದಹಾಗೆ ಈ ವೈರಲ್ ವಿಡಿಯೋದ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಕಾಲದಲ್ಲಿ ಅಜ್ಜಿಯಂದಿರಿಂದ ಹಿಡಿದು ಚಿಕ್ಕ ಮಕ್ಕಳೂ ಸಹ ಬಹಳ ಸುರಕ್ಷತೆಯಿಂದ ಓಡಾಡಬೇಕಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಅನಿರೀಕ್ಷಿತವಾಗಿ ಎದುರಾಗುವ ಕಿರುಕುಳ ಅಥವಾ ದಾಳಿಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕಾದುದು ಅಗತ್ಯ. ಈ ನಿಟ್ಟಿನಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಸದ್ಯ ವೈರಲ್ ಆಗುತ್ತಿರುವ ಒಂದು ವಿಡಿಯೋ ಹೆಣ್ಣುಮಕ್ಕಳಿಗೆ ವಿಶೇಷವಾದ ಆತ್ಮರಕ್ಷಣೆಯ ಪಾಠವನ್ನು ಹೇಳಿಕೊಡುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
'How to escape for hair grab situation' (ಜುಟ್ಟು ಹಿಡಿದು ಎಳೆಯುವಾಗ ತಪ್ಪಿಸಿಕೊಳ್ಳುವುದು ಹೇಗೆ?) ಎಂಬ ಶೀರ್ಷಿಕೆಯಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದ ಪ್ರಾರಂಭದಲ್ಲಿ ತೋರಿಸಿರುವಂತೆ, ಯುವತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬರುವ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಜುಟ್ಟನ್ನು ಹಿಡಿದು ಬಲವಾಗಿ ಎಳೆಯುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಯಾರೇ ಆದರೂ ಗಾಬರಿಯಾಗುತ್ತಾರೆ. ಆದರೆ ವಿಡಿಯೋದಲ್ಲಿ ಆ ಯುವತಿ ತಕ್ಷಣವೇ ಅತೀ ಸರಳವಾದ ಮತ್ತು ಪರಿಣಾಮಕಾರಿಯಾದ ಟೆಕ್ನಿಕ್ ಬಳಸಿ ಅವನ ಹಿಡಿತದಿಂದ ಹೇಗೆ ಬಚಾವ್ ಆಗಬಹುದು ಎಂಬುದನ್ನು ಹಂತ-ಹಂತವಾಗಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ಸ್
ನೇಹಾ ಜರಾಲ್ (Neha Jaral) ಎಂಬ ಕಂಟೆಂಟ್ ಕ್ರಿಯೇಟರ್ selfdefensewithbs ಎಂಬ ಇನ್‌ಸ್ಟಾಗ್ರಾಂ ಪೇಜ್‌ನಿಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಅಪ್‌ಲೋಡ್ ಆದ ಕೇವಲ ಒಂದೇ ದಿನಕ್ಕೆ ಬರೋಬ್ಬರಿ 18.6 ಮಿಲಿಯನ್ (1.8 ಕೋಟಿಗೂ ಹೆಚ್ಚು) ವೀಕ್ಷಣೆಗಳನ್ನು ಗಳಿಸುವ ಮೂಲಕ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ಈವರೆಗೆ 1.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ಸ್ ಬಂದಿವೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳೂ ನಡೆಯುತ್ತಿವೆ. ಅನೇಕ ಮಹಿಳೆಯರು "ಇಂತಹ ಕೌಶಲಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೃದಯದ ಇಮೋಜಿಗಳನ್ನು ಹಾಕಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ಅಥವಾ ವ್ಯಂಗ್ಯವಾಗಿ "ದೀದಿ, ಆಪತ್ತಿನ ಸಮಯದಲ್ಲಿ ಇಷ್ಟೆಲ್ಲಾ ಟೆಕ್ನಿಕ್ ಬಳಸಲು ನಮಗೆ ಆಕ್ರಮಣಕಾರಿ ವ್ಯಕ್ತಿ ಸಮಯ ಕೊಡುತ್ತಾನಾ?" (Itna time tujhe koun dega didi) ಎಂದು ಕಾಮೆಂಟ್ ಮಾಡಿದ್ದಾರೆ.
ಆದರೆ ವಾಸ್ತವದಲ್ಲಿ, ಇಂತಹ ಸಣ್ಣ ಪುಟ್ಟ ತಂತ್ರಗಳನ್ನು ತಿಳಿದಿರುವುದು ತುರ್ತು ಸಂದರ್ಭದಲ್ಲಿ ನಮ್ಮ ಪ್ರಾಣ ಉಳಿಸಲು ಸಹಕಾರಿಯಾಗಬಲ್ಲದು. ನೇಹಾ ಜರಾಲ್ ಅವರು ತಮ್ಮ ಪೇಜ್‌ನಲ್ಲಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಇಂತಹ ಹಲವು ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದು, ನಿಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಇವು ಖಂಡಿತವಾಗಿಯೂ ಉಪಯುಕ್ತವಾಗಬಹುದು. ಸುರಕ್ಷತೆಯ ದೃಷ್ಟಿಯಿಂದ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳುವುದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.