ಮದುವೆ ಅಂದ್ಮೇಲೆ ವಧು – ವರರು ಇರ್ಬೇಕು. ಆದ್ರೆ ಇಲ್ಲಿ ವಧು- ವರರಿಲ್ಲ. ಆಚರಣೆ ಇಲ್ಲ. ಮದುವೆ ಸಂಭ್ರಮ, ಖುಷಿ ಇದೆ. ಮಹಾನಗರಗಳಲ್ಲಿ ಫೇಮಸ್ ಆಗ್ತಿರುವ ಮದುವೆ ಯಾವ್ದು ಗೊತ್ತಾ? 

ಮದುವೆ (Marriage) ಅಂದ್ಮೇಲೆ ಅಲ್ಲಿ ಹೂವಿನ ಅಲಂಕಾರ ಇರುತ್ತೆ. ಮೆಹಂದಿ, ಅರಿಶಿನದ ಖುಷಿ ಇರುತ್ತೆ. ಸಂಗೀತ, ಡಾನ್ಸ್ ಇರುತ್ತೆ. ಸಾಂಪ್ರದಾಯಿಕ ಉಡುಪು, ವಾದ್ಯಗಳ ಶಬ್ಧ ಕೇಳ್ತಿರುತ್ತೆ. ಸಾಕಷ್ಟು ಮಂದಿ ಸೇರಿರ್ತಾರೆ. ಮಂತ್ರ ಹೇಳಿ ಮದುವೆ ಮಾಡಿಸೋಕೆ ಪಂಡೀತರಿರ್ತಾರೆ. ಮದುವೆಗೆ ಬಂದವರು ಮೊದಲು ನೋಡೋದು ವಧು – ವರರನ್ನು. ಅವರನ್ನು ಆಶೀರ್ವದಿಸಿ, ಅವ್ರ ಬಗ್ಗೆ ಒಂದಿಷ್ಟು ಗುಸುಗುಸು – ಪಿಸುಪಿಸು ಮಾಡಿ ನಂತ್ರ ಹೊಟ್ಟೆ ತುಂಬ ಊಟ ಮಾಡಿ ಹೊರಡ್ತಾರೆ. ಆದ್ರೆ ಈಗಿನ ಮದುವೆಯಲ್ಲಿ ವಧು – ವರರನ್ನು ಬಿಟ್ಟು ಎಲ್ಲ ಇರುತ್ತೆ. ಮದುವೆಗೆ ಮುಖ್ಯವಾಗಿ ಬೇಕಾಗಿರೋ ವಧು – ವರರೇ ಇಲ್ಲಿರೋದಿಲ್ಲ. ಇದು ಜೆನ್ ಝಡ್ ಟ್ರೆಂಡ್. ವಧು – ವರರು ಇಲ್ಲದೆ ಇವರು ಮದುವೆ ಎಂಜಾಯ್ ಮಾಡ್ತಿದ್ದಾರೆ. ಅದಕ್ಕೆ ನಕಲಿ ಮದುವೆ ಪಾರ್ಟಿ ಅಂತಾನೇ ನಾಮಕರಣ ಕೂಡ ಮಾಡಲಾಗಿದೆ.

ನಕಲಿ ವೆಡ್ಡಿಂಗ್ ಪಾರ್ಟಿ (Fake Wedding Party) ಅಂದ್ರೇನು? :

ಮಹಾನಗರಗಳಲ್ಲಿ ಈ ನಕಲಿ ಮದುವೆ ಜೋರು ಪಡೀತಿದೆ. ವಿವಾಹದ ಸಾಂಪ್ರದಾಯಿಕ ಹೊರೆ, ಸಾಮಾಜಿಕ ಜವಾಬ್ದಾರಿ, ಸಂಬಂಧಿಕರ ಹಸ್ತಕ್ಷೇಪ, ಇಡೀ ದಿನ ಆಚರಣೆ ಇಲ್ಲಿಲ್ಲ. ಈ ಮದುವೆಯಲ್ಲಿ ಬರೀ ಮೋಜು – ಮಸ್ತಿ. ಇದನ್ನು ಸಾಂಪ್ರದಾಯಿಕ ಪಾರ್ಟಿ ಅಂತ ಕರೆಯಬಹುದು. ಈ ಪಾರ್ಟಿಗೆ ಬರುವ ಜನರು ಸಾಂಪ್ರದಾಯಿಕ ಬಟ್ಟೆ ಧರಿಸಿ ಬರ್ತಾರೆ. ಮದುವೆಯಂತೆ ಅಲಂಕಾರ ಮಾಡ್ಕೊಂಡು ಬರ್ತಾರೆ. ಪಾರ್ಟಿಗೆ ಬಂದು ಮದುವೆ ವೈಬ್ ನಲ್ಲಿ ಎಂಜಾಯ್ ಮಾಡ್ತಾರೆ. ಹಾಡ್ತಾರೆ, ಕುಣಿತಾರೆ. ಮಹಾನಗರಗಳಾದ ದೆಹಲಿ, ಬೆಂಗಳೂರು, ಪುಣೆಯಂತ ನಗರಗಳಲ್ಲಿ ಜನರೇಷನ್ ಝೆಡ್ ಈ ಪಾರ್ಟಿಯನ್ನು ಹೆಚ್ಚು ಎಂಜಾಯ್ ಮಾಡ್ತಿದೆ.

ಬೆಂಗಳೂರು ಮೂಲದ ಯುವರ್ ಥರ್ಡ್ ಪ್ಲೇಸ್ ಇದನ್ನು 'ಬೇಗನಿ ಶಾದಿ' ಎಂದು ಕರೆಯುತ್ತದೆ. ಅಲ್ಲಿ ನೀವು ಯಾವುದೇ ಜವಾಬ್ದಾರಿಗಳಿಲ್ಲದೆ ಆನಂದಿಸಬಹುದು. ದೆಹಲಿಯ ಕ್ಸೈಲೋ ರೂಫ್ಟಾಪ್ನಿಂದ ಪುಣೆಯ ಫಾರ್ಮ್ಹೌಸ್ವರೆಗೆ, ಈ ಪಾರ್ಟಿಗಳು ಪ್ರತಿ ವಾರಾಂತ್ಯವನ್ನು ಮದುವೆಯಾಗಿ ಪರಿವರ್ತಿಸುತ್ತಿವೆ.

ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಮುಕುಲ್ ಖುರಾನಾ ಇದ್ರ ಬಗ್ಗೆ ಜನರ ಗಮನ ಸೆಳೆದಿದ್ದಾರೆ. ಅವರು ತಮ್ಮ ವಿಡಿಯೋದಲ್ಲಿ ಈ ಪಾರ್ಟಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿಯ ಜುಮ್ಮಾ ಕಿ ರಾತ್ ನಂತಹ ಥೀಮ್ ಪಾರ್ಟಿಗಳಿಗೆ ಪ್ರವೇಶ ಶುಲ್ಕವಿರುತ್ತೆ. ಜನರು 500 ರಿಂದ 3,000 ರೂಪಾಯಿವರೆಗೆ ಶುಲ್ಕ ಪಾವತಿಸಿ ಈ ಪಾರ್ಟಿಗೆ ಎಂಟ್ರಿಯಾಗ್ತಾರೆ. ಬರೀ ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ ಯುಎಸ್ನ ಕಾರ್ನೆಲ್ ವಿಶ್ವವಿದ್ಯಾಲಯದಂತಹ ವಿದೇಶಿ ಕ್ಯಾಂಪಸ್ಗಳಲ್ಲೂ ನಡೆಯುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗ್ತಿದೆ. ಬಹುತೇಕರು ಇದನ್ನು ವಿರೋಧಿಸಿದ್ದಾರೆ. ಜನರೇಷನ್ ಝಡ್ ತಪ್ಪು ದಾರಿಯಲ್ಲಿ ಹೋಗ್ತಿದೆ ಅಂತ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ಸ್ವಾತಂತ್ರ್ಯ , ಸೃಜನಶೀಲತೆ ಎಂದಿದ್ದಾರೆ. ಈ ಪಾರ್ಟಿ ಶೀಘ್ರವೇ ಕಣ್ಮರೆಯಾಗಲಿದೆ ಎಂದಿದ್ದಾರೆ. ಇದನ್ನು ಸಂಸ್ಕೃತಿ ಮತ್ತು ಮೌಲ್ಯಗಳ ಅವನತಿ ಎಂದು ಕೆಲವರು ಹೇಳಿದ್ದಾರೆ. ಮದುವೆ ತನ್ನ ನಿಜವಾದ ಅರ್ಥ ಕಳೆದುಕೊಳ್ತಿದೆಯೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಚರ್ಚೆ ಏನೇ ಇರಲಿ, ನಕಲಿ ಮದುವೆ ಅಸಲಿ ಚರ್ಚೆಗೆ ಕಾರಣವಾಗಿದೆ. ಜನರೇಷನ್ ಝಡ್ ಇದನ್ನು ಇಷ್ಟಪಡ್ತಿದೆ.