ಡೂಮ್ಸ್‌ಡೇ ಕ್ಲಾಕ್ (Doomsday clock) ಎನ್ನುವುದು ಜಾಗತಿಕ ವಿಪತ್ತಿಗೆ ಮಾನವಕುಲ ಎಷ್ಟು ಹತ್ತಿರದಲ್ಲಿದೆ ಎಂದು ಸೂಚಿಸುವ ಸಾಂಕೇತಿಕ ಗಡಿಯಾರ. ಇತ್ತೀಚೆಗೆ, ವಿಜ್ಞಾನಿಗಳು ಇದನ್ನು ಮಧ್ಯರಾತ್ರಿಗೆ ಕೇವಲ 85 ಸೆಕೆಂಡ್‌ಗಳಿಗೆ ನಿಗದಿಪಡಿಸಿದ್ದಾರೆ. ಏನಿದು? ತಿಳಿಯೋಣ ಬನ್ನಿ.
2026ರ ಜನವರಿ 27ರಂದು ವಿಜ್ಞಾನಿಗಳು ಒಂದು ಗಡಿಯಾರದ ಮುಳ್ಳನ್ನು ಸಾರ್ವಜನಿಕವಾಗಿ, ಲಕ್ಷಾಂತರ ಮಂದಿಯ ಲೈವ್ ನಡುವೆ, ತಿರುಗಿಸಿಟ್ಟರು. ಮಧ್ಯರಾತ್ರಿ 12 ಗಂಟೆಗೆ ಇನ್ನು 85 ಸೆಕೆಂಡ್ ಮಾತ್ರ ಬಾಕಿ ಇದೆ ಎಂದು ತೋರಿಸುವಂತೆ ಮುಳ್ಳನ್ನಿಟ್ಟರು. ಏನಿದು 85 ಸೆಕೆಂಡ್? ಅದು ಭೂಮಿಗೆ ಉಳಿದಿರುವ ಅವಧಿ. ಈ 85 ಸೆಕೆಂಡ್‌ನಲ್ಲಿ ಭೂಮಿ ನಾಶವಾಗುತ್ತದೆ, ಮನುಷ್ಯರು ನಾಶವಾಗುತ್ತಾರೆ. ಈ ಗಡಿಯಾರದ ಹೆಸರು ಡೂಮ್ಸ್‌ಡೇ ಕ್ಲಾಕ್ ಅಥವಾ ಪ್ರಳಯದ ಗಡಿಯಾರ.
ಏನಿದು 85 ಸೆಕೆಂಡ್ ಎಂದು ಗೊಂದಲಕ್ಕೀಡಾಗಬೇಡಿ. ಹೌದು, ಇದು ಮನುಕುಲದ ವಿಪತ್ತನ್ನು ಸೂಚಿಸುವ ಗಡಿಯಾರ, ನಿಜ. ಆದರೆ ಇನ್ನಷ್ಟು ವಿವರ ಇದರ ಬಗ್ಗೆ ನೀವು ತಿಳಿದುಕೊಳ್ಳುವುದಿದೆ. ಡೂಮ್ಸ್‌ಡೇ ಕ್ಲಾಕ್ (Doomsday Clock) ಎಂದರೆ ನಿಜವಾದ ಗಡಿಯಾರವಲ್ಲ. ಇದು ಮಾನವಕುಲವು ಜಾಗತಿಕ ವಿಪತ್ತಿಗೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ಸೂಚಿಸುವ ಪ್ರತೀಕಾತ್ಮಕ ಗಡಿಯಾರ. ಈ ಗಡಿಯಾರದಲ್ಲಿ “ಮಧ್ಯರಾತ್ರಿಗೆ ಉಳಿದಿರುವ ಸಮಯ” ಎಂದು ತೋರಿಸಲಾಗುತ್ತದೆ. ಇಲ್ಲಿ ಮಿಡ್‌ನೈಟ್ ಅಂದರೆ ಜಾಗತಿಕ ವಿಪತ್ತು ಅಥವಾ ಮಾನವ ನಿರ್ಮಿತ ಮಹಾವಿನಾಶ.
2026ರ ಜನವರಿ 27ರಂದು, ಡೂಮ್ಸ್‌ಡೇ ಕ್ಲಾಕ್ ಅನ್ನು ಮಿಡ್‌ನೈಟ್‌ಗೆ 85 ಸೆಕೆಂಡ್‌ಗಳು ಮಾತ್ರ ಉಳಿದಂತೆ ಸೆಟ್ ಮಾಡಲಾಯಿತು. ಅಂದರೆ ಮಹಾಪ್ರಳಯಲ್ಲೆ ಅಷ್ಟೇ ಸಮಯ ಉಳಿದಿದೆ ಎಂಬ ಘೋಷಣೆ. ಇದು ಈ ಗಡಿಯಾರದ 79 ವರ್ಷದ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಹಂತ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಡೂಮ್ಸ್‌ಡೇ ಕ್ಲಾಕ್ ಏನು?
ಡೂಮ್ಸ್‌ಡೇ ಕ್ಲಾಕ್ ಅನ್ನು 1947ರಲ್ಲಿ, ದ್ವಿತೀಯ ಮಹಾಯುದ್ಧದ ನಂತರ, ವಿಜ್ಞಾನಿಗಳು ರೂಪಿಸಿದರು. ಅಣುಬಾಂಬ್ ಬಳಕೆಯ ಭೀತಿಯಿಂದ ಹುಟ್ಟಿದ ಈ ಕಲ್ಪನೆ, ಮಾನವ ಅಸ್ತಿತ್ವಕ್ಕೆ ಎದುರಾಗುವ ಭೀಕರ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ರೂಪಿಸಲಾಯಿತು. ಇದು ನಿಜವಾದ ಸಮಯವನ್ನು ಹೇಳುವ ಗಡಿಯಾರವಲ್ಲ. ಬದಲಾಗಿ, ಮಾನವ ಕುಲ ಎಷ್ಟು ಅಪಾಯದ ಅಂಚಿಗೆ ಬಂದಿದೆ ಎಂಬುದನ್ನು ಸರಳವಾಗಿ ತಿಳಿಸುವ ವಿಧಾನ.
ಗಡಿಯಾರದ ಸಮಯವನ್ನು ಯಾರು ನಿರ್ಧರಿಸುತ್ತಾರೆ?
ಪ್ರತಿ ವರ್ಷ ಡೂಮ್ಸ್‌ಡೇ ಕ್ಲಾಕ್‌ನ ಸಮಯವನ್ನು ನಿರ್ಧರಿಸುವ ಜವಾಬ್ದಾರಿ Bulletin of the Atomic Scientists ಸಂಸ್ಥೆಯ Science and Security Boardಗೆ ಸೇರಿದೆ. ಈ ಸಮಿತಿಯಲ್ಲಿ ಅಣುಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಭದ್ರತಾ ತಜ್ಞರು ಇದ್ದಾರೆ. ಈ ಪೈಕಿ ಕೆಲವರು ಹಿಂದೆ ಮ್ಯಾನ್ಹ್ಯಾಟನ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದವರು - ಅಂದರೆ ಮೊದಲ ಅಣುಬಾಂಬ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು.
ಸಮಯ ನಿರ್ಧಾರಕ್ಕೆ ವಿಜ್ಞಾನಿಗಳು ಈ ಅಂಶಗಳನ್ನು ಪರಿಶೀಲಿಸುತ್ತಾರೆ: ಅಣ್ವಸ್ತ್ರಗಳ ಪ್ರಯೋಗದ ಅಪಾಯ, ದೇಶಗಳ ನಡುವೆ ಯುದ್ಧ ಭೀತಿ, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಪರಿಸರ ಸಂಕಷ್ಟ, ಜೈವಿಕ ಅಪಾಯಗಳು, ಕೋವಿಡ್‌ನಂಥ ರೋಗಗಳು, ಲ್ಯಾಬ್ ಅಪಘಾತಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಹೊಸ ತಂತ್ರಜ್ಞಾನಗಳಿಂದ ಉಂಟಾಗುವ ಅಪಾಯಗಳು, ಜಾಗತಿಕ ರಾಜಕೀಯ ಅಸ್ಥಿರತೆ ಇತ್ಯಾದಿ. ಜಾಗತಿಕ ಪರಿಸ್ಥಿತಿ ಹೇಗೆ ಬದಲಾಗುತ್ತದೆಯೋ ಅದರಂತೆ ಗಡಿಯಾರದ ಸಮಯವನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಸರಿಸಲಾಗುತ್ತದೆ.
“ಮಿಡ್‌ನೈಟ್” ಅಂದರೆ ಜಗತ್ತಿನ ಅಂತ್ಯವೇ? ಇಲ್ಲ. ಮಿಡ್‌ನೈಟ್ ಅಂದರೆ ನೇರವಾಗಿ ಜಗತ್ತು ನಾಶವಾಗುತ್ತದೆ ಎಂಬುದಲ್ಲ. ಇದು ಮಾನವ ನಿರ್ಮಿತ ವಿಪತ್ತು - ಅಣುಯುದ್ಧ, ಭೀಕರ ಹವಾಮಾನ ದುರಂತ, ಅಥವಾ ತಂತ್ರಜ್ಞಾನದಿಂದ ಉಂಟಾಗುವ ಮಹಾವಿನಾಶವನ್ನು ಸೂಚಿಸುತ್ತದೆ. ವಿಜ್ಞಾನಿಗಳು ಇದನ್ನು ಭವಿಷ್ಯವಾಣಿ ಎಂದು ಅಲ್ಲ, ಎಚ್ಚರಿಕೆಯ ಘಂಟೆ (wake-up call) ಎಂದು ಹೇಳುತ್ತಾರೆ.
ಇತಿಹಾಸದಲ್ಲಿ ಈ ಗಡಿಯಾರವೂ ಬದಲಾಗುತ್ತ ಬಂದಿದೆ. 1947ರಿಂದ ಇಲ್ಲಿವರೆಗೆ ಡೂಮ್ಸ್‌ಡೇ ಕ್ಲಾಕ್‌ನ್ನು 25ಕ್ಕಿಂತ ಹೆಚ್ಚು ಬಾರಿ ಬದಲಾಯಿಸಲಾಗಿದೆ.
ಪ್ರಮುಖ ಹಂತಗಳು:
1947: ಮೊಟ್ಟಮೊದಲ ಬಾರಿ - ಮಿಡ್‌ನೈಟ್‌ಗೆ 7 ನಿಮಿಷ
1991: ಶೀತಲ ಯುದ್ಧ ಅಂತ್ಯದ ನಂತರ - 17 ನಿಮಿಷ (ಅತ್ಯಂತ ಸುರಕ್ಷಿತ ಹಂತ)
2020: 100 ಸೆಕೆಂಡ್
2023: 90 ಸೆಕೆಂಡ್
2026: 85 ಸೆಕೆಂಡ್ (ಇತಿಹಾಸದಲ್ಲೇ ಅತ್ಯಂತ ಹತ್ತಿರ)
ವಿಜ್ಞಾನಿಗಳು ಏಕೆ ಇಷ್ಟು ಆತಂಕದಲ್ಲಿದ್ದಾರೆ?
ವಿಜ್ಞಾನಿಗಳ ಪ್ರಕಾರ, ಇಂದಿನ ಕಾಲದಲ್ಲಿ ಹಲವು ಅಪಾಯಗಳು ಒಂದೇ ಸಮಯದಲ್ಲಿ ಹೆಚ್ಚಾಗುತ್ತಿವೆ: ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಅಣುಯುದ್ಧ ಭೀತಿ, ಹವಾಮಾನ ಬದಲಾವಣೆ - ಬಿಸಿಲಿನ ಅಲೆ, ಪ್ರವಾಹ, ಬಿರುಗಾಳಿ, ಆಹಾರ ಕೊರತೆ, AI ಮತ್ತು ಬಯೋಟೆಕ್ ವೇಗದ ಬೆಳವಣಿಗೆ, ಜಾಗತಿಕ ಮಟ್ಟದಲ್ಲಿ ರಾಜಕೀಯ ಭಿನ್ನತೆ ಮತ್ತು ಸಹಕಾರದ ಕೊರತೆ - ಈ ಎಲ್ಲವೂ ಸೇರಿ ಮಾನವ ಕುಲವನ್ನು ಅಪಾಯದ ಅಂಚಿಗೆ ತಳ್ಳುತ್ತಿವೆ.
ಡೂಮ್ಸ್‌ಡೇ ಕ್ಲಾಕ್ ಮನುಕುಲವನ್ನು ಎಚ್ಚರಿಸುತ್ತದೆ. ಸರಿಯಾದ ನಿರ್ಧಾರಗಳು, ಅಂತರರಾಷ್ಟ್ರೀಯ ಸಹಕಾರ, ಅಣುಶಸ್ತ್ರ ನಿಯಂತ್ರಣ, ಹವಾಮಾನ ರಕ್ಷಣೆ ಮತ್ತು ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ- ಇವೆಲ್ಲದಿಂದ ಗಡಿಯಾರದ ಸಮಯವನ್ನು ಮತ್ತೆ ಹಿಂದಕ್ಕೆ ತಳ್ಳಬಹುದು. 2026ರಲ್ಲಿ ಡೂಮ್ಸ್‌ಡೇ ಕ್ಲಾಕ್ 85 ಸೆಕೆಂಡ್‌ಗೆ ಸರಿದಿರುವುದು, ಮಾನವ ಇತಿಹಾಸದ ಅತ್ಯಂತ ಗಂಭೀರ ಎಚ್ಚರಿಕೆಗಳಲ್ಲಿ ಒಂದು. ಬದುಕುಳಿಯಬೇಕಿದ್ದರೆ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ನೆನಪಿಸುತ್ತದೆ. ಮಾನವ ಕುಲದ ಭವಿಷ್ಯ ಇನ್ನೂ ನಮ್ಮ ಕೈಯಲ್ಲೇ ಇದೆ.


