ನಮ್ಮನ್ನು ಚೈನೀಸಿ, ಚೀನಾ ಎಂದು ಕರೆಯಬೇಡಿ. ನಾವೂ ಕೂಡ ಭಾರತೀಯರು. ನೀವು ಚೈನೀಸ್ ಎಂದು ಕರೆಯುವಾಗ ನಮಗೆ ತೀವ್ರ ನೋವಾಗುತ್ತದೆ. ಹಾಗೆ ಕರಯೆಬೇಡಿ ಎಂದು ಪುಟ್ಟ ಮಗು ಭಾವುಕವಾಗಿ ಮಾತನಾಡಿದ ವಿಡಿಯೋ ಭಾರಿ ಚರ್ಚೆಯಾಗುತ್ತಿದೆ.
ಅರುಣಾಚಲ ಪ್ರದೇಶ (ಆ20) ಭಾರತದ ಮೊದಲ ಸೂರ್ಯೋದಯ ತಾಣ ಎಂದೇ ಗುರುತಿಸಿಕೊಂಡಿರುವ ಅತ್ಯಂತ ಸುಂದರ ರಾಜ್ಯ ಅರುಣಾಚಲ ಪ್ರದೇಶ. ಚೀನಾ ಜೊತೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶ ಭೌಗೋಳಿಕವಾಗಿ, ರಾಜಕೀಯವಾಗಿಯೂ ಅತ್ಯಂತ ಪ್ರಮುಖ ರಾಜ್ಯ. ಆದರೆ ಅರುಣಾಚಲ ಪ್ರದೇಶದ ಜನರನ್ನು ಈಶಾನ್ಯ ಭಾರತದ ಜನರು ಗುರುತಿಸುತ್ತಾರೆ. ಆದರೆ ಭಾರತದ ಇನ್ನುಳಿದ ರಾಜ್ಯಗಳ ಜನರು ಮುಖದ ಚಹರೆಯಿಂದ ಗುರುತಿಸಿವುದು ಕಷ್ಟ. ಹೀಗಾಗಿ ಬಹುತೇಕರು ಅರುಣಾಚಲ ಪ್ರದೇಶದ ಜನರನ್ನು ಕಂಡ ತಕ್ಷಣ ಚೀನಾದವರಾ ಎಂದು ಪ್ರಶ್ನಿಸುತ್ತಾರೆ. ಈ ರೀತಿಯ ಮಾತುಗಳಿಂದ ನೊಂದಿರುವ ಪುಟ್ಟ ಬಾಲಕಿ ಇದೀಗ ನಾವು ಕೂಡ ಭಾರತೀಯರೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ಹಮ್ಕೋ ಇಂಡಿಯನ್ ಬೋಲೋ
ನಮ್ಮನ್ನು ಭಾರತೀಯರು ಎಂದು ಕರೆಯಿರಿ ಎಂದು ಪುಟ್ಟ ಬಾಲಕಿ ಹೇಳಿದ್ದಾಳೆ. ದೈಹಿಕ ರಚನೆ, ಮುಖಚರ್ಯೆ ಆಧಾರದ ಮೇಲೆ ನಮ್ಮನ್ನು ಚೈನೀಸ್ ಎಂದು ಕರೆಯುವ ಕೆಟ್ಟ ಸಂಪ್ರದಾಯ ಇನ್ನು ಮಾಸಿಲ್ಲ. ಜನಾಂಗೀಯವಾಗಿ ನಮ್ಮನ್ನು ಚೀನಾ ಜೊತೆ ಸೇರಿಸಿ ಮಾತನಾಡುತ್ತಾರೆ. ಇದರಿಂದ ನಮಗೆ ನೋವಾಗುತ್ತದೆ ಎಂದು ಪುಟ್ಟ ಬಾಲಕಿ ವಿಡಿಯೋ ಮೂಲಕ ಹೇಳಿದ್ದಾಳೆ. ತನ್ನ ತೊದಲು ನಡಿ, ಸರಳ ಭಾಷೆಯಲ್ಲಿ ಖಡಕ್ ಉತ್ತರ ನೀಡಿರುವ ಈ ಬಾಲಕಿ ವಿಡಿಯೋ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಬಾಲಕಿ ಹೇಳಿದ ವಿಡಿಯೋದಲ್ಲಿ ಏನಿದೆ
ಹಲವರು ಅರುಣಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಬರುವ ಹಲವರು, ನಾವು ಇತರ ರಾಜ್ಯಗಳಿಗೆ ಹೋದಾಗ, ನೀವು ಚೀನಾದವರೆ, ಚೈನೀಸ್ ಎಂದೆಲ್ಲಾ ಕರೆಯುತ್ತಾರೆ. ಇವರಿಗೆಲ್ಲಾ ನಾನು ಸರಳವಾಗಿ ಉತ್ತರಿಸುತ್ತೇನೆ. ನನ್ನ ಮುಖಚರ್ಯೆ ಭಿನ್ನವಾಗಿ ಕಾಣಬಹುದು. ಆದರೆ ನನ್ನ ಭೂಮಿ ಭಾರತ,ನನ್ನ ರಕ್ತ, ನನ್ನ ಸಂಸ್ಕೃತಿ ಭಾರತ. ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ಇಲ್ಲಿನ ಪ್ರತಿಯೊಬ್ಬರು ಹೆಮ್ಮೆಯ ಭಾರತೀಯರು ಎಂದು ಪುಟ್ಟ ಬಾಲಕಿ ಹೇಳಿದ್ದಾಳೆ.
ಈಶಾನ್ಯ ಭಾರತದ ರಾಜ್ಯಗಳು ಭಾರತದ ಪ್ರಮುಖ ರಾಜ್ಯಗಳಾದರೂ ಪ್ರವಾಸೋದ್ಯಮಕ್ಕಾಗಿ ಇತರ ರಾಜ್ಯಗಳಿಂದ ತೆರಳುವವರ ಸಂಖ್ಯೆ ಕಡಿಮೆ. ಈಶಾನ್ಯ ರಾಜ್ಯಗಳು ಕುರಿತು ಭಾರತದ ಇತರ ರಾಜ್ಯಗಳ ಜನರಿಗೆ ಸ್ಪಷ್ಟತೆ ಇಲ್ಲ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳ ಜನತೆ ಚೈನೀಸ್ ಅನ್ನೋ ಜನಾಂಗೀಯ ನಿಂದನೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ತಾವು ಹೆಮ್ಮೆಯ ಭಾರತೀಯರು ಎಂದರೂ ಹಲವರು ಮರು ಪ್ರಶ್ನೆ ಹಾಕಿದ ಘಟನೆಗಳು ಸಾಕಷ್ಟಿವೆ. ಇದೀಗ ಪುಟ್ಟ ಬಾಲಕಿ ಈಶಾನ್ ಭಾರತೀಯ ಜನರ ಪರವಾಗಿ ಮಾತನಾಡಿದ್ದಾಳೆ.
ಪುಟ್ಟ ಹುಡುಗಿಯ ಈ ವಿಡಿಯೋ ಭಾರಿ ಮೆಚ್ಚುಗೆ ಪಾತ್ರವಾಗಿದೆ. ಈಶಾನ್ಯ ಭಾರತೀಯರ ಕುರಿತು ಇತರ ರಾಜ್ಯಗಳು ಕನಿಷ್ಠ ಮಾಹಿತಿ ತಿಳಿದುಕೊಳ್ಳಬೇಕು. ಈ ರೀತಿ ಜನಾಂಗೀಯವಾಗಿ ನಿಂದಿಸಬಾರದು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಭಾರತದ ವಿವಿಧತೆಯನ್ನು ಗೌರವಿಸಬೇಕು, ಬಾಯಿ ಮಾತಿನಲ್ಲಿ ವಿವಿಧತೆಯಲ್ಲಿ ಏಕತೆ ಎಂದರೆ ಸಾಲದು, ಏನೂ ಅನ್ನೋ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.


