ಚಂಡಿಗಢದಲ್ಲಿ, ಯುವ ವೈದ್ಯೆಯೊಬ್ಬರು ಕೆಲಸಕ್ಕೆ ಸೇರಿದ ಮೊದಲ ದಿನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯು ಲಾಭಕ್ಕಾಗಿ ರೋಗಿಗಳನ್ನು ಅನಗತ್ಯವಾಗಿ ದಾಖಲಿಸಿ, ಐಸಿಯುಗೆ ಸೇರಿಸುವ ಮೂಲಕ ಸುಲಿಗೆ ಮಾಡುತ್ತಿರುವುದನ್ನು ವಿರೋಧಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಅವರು ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಂಡಿಗಢ: ಕೆಲಸಕ್ಕೆ ಸೇರಿದ ಮೊದಲ ದಿನವೇ ಖಾಸಗಿ ಆಸ್ಪತ್ರೆಯೊಂದು ರೋಗಿಗಳನ್ನು ಸುಲಿಗೆ ಮಾಡುವುದನ್ನು ನೋಡಿ ಯುವ ವೈದ್ಯೆಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ತಾನು ಯಾಕೆ ಮೊದಲ ದಿನವೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿವರಿಸಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ರೋಗಿಗಳನ್ನು ಸುಲಿಯುವ ಆಸ್ಪತ್ರೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ವೃತ್ತಿಯ ನೈತಿಕತೆಯ ಬಗ್ಗೆ ಈ ವಿಡಿಯೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

Add Asianetnews Kannada as a Preferred SourcegooglePreferred

ಲಾಭವೇ ಗುರಿ, ಮನುಷ್ಯರಿಗೆ ಬೆಲೆಯಿಲ್ಲ!

ಕೇವಲ ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಹೇಗೆಲ್ಲಾ ಮೋಸ ಮಾಡುತ್ತವೆ ಎಂಬುದನ್ನು ವಿವರಿಸಿ ಯುವ ವೈದ್ಯೆಯೊಬ್ಬರು ತಾವು ಸೇರಿದ್ದ ಪ್ರತಿಷ್ಠಿತ ಆಸ್ಪತ್ರೆಗೆ ರಾಜೀನಾಮೆ ನೀಡಿದ್ದಾರೆ. ಚಂಡೀಗಢದ ನಿವಾಸಿ ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ. ಪ್ರಭ್ಲೀನ್ ಕೌರ್ ಅವರೇ ಈ ರೀತಿ ರಾಜೀನಾಮೆ ನೀಡಿದವರು. ಆಸ್ಪತ್ರೆಯವರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ರೋಗಿಗಳನ್ನು ಅನಗತ್ಯವಾಗಿ ಅಡ್ಮಿಟ್ ಮಾಡಿಕೊಳ್ಳುತ್ತಿದ್ದಾರೆ ಮತ್ತು ಐಸಿಯುಗೆ ಸೇರಿಸುತ್ತಿದ್ದಾರೆ ಎಂದು ಡಾಕ್ಟರ್ ಆರೋಪಿಸಿದ್ದಾರೆ. ಚಂಡೀಗಢದ ಹಿರಿಯ ಸ್ತ್ರೀರೋಗತಜ್ಞರೊಬ್ಬರ ಮಾಲೀಕತ್ವದ ಆಸ್ಪತ್ರೆ ಇದಾಗಿದೆ ಎಂದು ಡಾ. ಪ್ರಭ್ಲೀನ್ ಕೌರ್ ತಮ್ಮ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

Scroll to load tweet…

ರೋಗಿ ಬಂದ್ರೆ ಸಾಕು, ಐಸಿಯುಗೆ ಹಾಕಿ!

"ವೈದ್ಯಕೀಯವಾಗಿ ಅಗತ್ಯವಿದೆಯೋ ಇಲ್ಲವೋ ಅಂತ ನೋಡದೆ, ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳನ್ನು ಅವರು ಅಡ್ಮಿಟ್ ಮಾಡಿಕೊಳ್ಳುತ್ತಿದ್ದಾರೆ" ಎಂದು ಡಾಕ್ಟರ್ ತಮ್ಮ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಆಸ್ಪತ್ರೆಯ ಬಿಲ್ ಹೆಚ್ಚಿಸುವುದಕ್ಕಾಗಿಯೇ ರೋಗಿಗಳನ್ನು ಅನಗತ್ಯವಾಗಿ ಐಸಿಯುಗೆ ಸೇರಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ನಿಯಂತ್ರಣದಲ್ಲಿ ಈ ಎಲ್ಲಾ ಅನಗತ್ಯ ಚಿಕಿತ್ಸೆಗಳು ನಡೆಯುತ್ತಿವೆ ಎಂದು ಡಾಕ್ಟರ್ ಆರೋಪಿಸಿದ್ದಾರೆ. "ರೋಗಿಯ ಸುರಕ್ಷತೆ ಮತ್ತು ವೈದ್ಯಕೀಯ ನೈತಿಕತೆಗಿಂತ ಸಂಬಳ ಅಥವಾ ಹುದ್ದೆ ದೊಡ್ಡದಲ್ಲ" ಎಂದು ಅವರು ತಮ್ಮ ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ

ಈ ವಿಡಿಯೋ ನೋಡ ನೋಡುತ್ತಿದ್ದಂತೆ ವೈರಲ್ ಆಗಿದೆ. ನೂರಾರು ಮಂದಿ ಯುವ ಡಾಕ್ಟರ್ ಅವರ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಲವಾರು ಮಂದಿ ವೈದ್ಯೆಯ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಆರೋಗ್ಯ ಕ್ಷೇತ್ರದ ಹಲವರು ಕೂಡ ವೈದ್ಯೆಯ ನಡೆಯನ್ನು ಶ್ಲಾಘಿಸಿದ್ದಾರೆ. "ರೋಗಿಗಳನ್ನು ರಕ್ಷಿಸುವ ಪ್ರತಿಜ್ಞೆಯ ನಿಜವಾದ ಅರ್ಥವನ್ನು ನೀವು ತೋರಿಸಿದ್ದೀರಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದೇಶದಲ್ಲಿನ ವ್ಯವಸ್ಥಿತ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಎಲ್ಲಾ ಡಾಕ್ಟರ್‌ಗಳು ಕಳ್ಳರೇ" ಎಂದು ಒಬ್ಬರು ಬರೆದರೆ, "ಖಾಸಗಿ ಆಸ್ಪತ್ರೆಗಳು ಕೇವಲ ಲಾಭಕ್ಕಾಗಿ ಕೆಲಸ ಮಾಡುತ್ತವೆ, ಅವರಿಗೆ ಮನುಷ್ಯರ ಜೀವ ಮುಖ್ಯವಲ್ಲ" ಎಂದು ಮತ್ತೊಬ್ಬರು ಆರೋಪಿಸಿದ್ದಾರೆ.