ಮಹಾರಾಷ್ಟ್ರದಲ್ಲಿ ಐ-ಫೋನ್ ವಿಚಾರಕ್ಕೆ ಮಗ ಆತ್ಮಹತ್ಯೆಗೆ ಯತ್ನಿಸಿ, ಪೋಷಕರೂ ಮೃತಪಟ್ಟ ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಈ ದುರಂತದ ಬೆನ್ನಲ್ಲೇ, ಮಿಲೇನಿಯರ್ ಒಬ್ಬ ಐ-ಫೋನ್ ಹಂಚುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದರ ಅಸಲಿಯತ್ತನ್ನು ಪರಿಶೀಲಿಸಿದಾಗ ಅದು ಕೇವಲ ಲೈಕ್ಸ್‌ಗಾಗಿ ಮಾಡಿದ ನಕಲಿ ವಿಡಿಯೋ ಎಂಬುದು ಬಯಲಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾವ್ಡಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ 19 ವರ್ಷದ ಮಗ ಕುನಾಲ್ನನ್ನು ರಕ್ಷಿಸಲು ಹೋಗಿ ಹೆತ್ತ ಪೋಷಕರೂ ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಐ-ಫೋನ್ ಖರೀಸಿದ್ದ ಮಗ ಅದರ ಇಎಂಐ ಕಟ್ಟಲು ದುಡ್ಡು ಕೊಡುವಂತೆ ಅಪ್ಪನಿಗೆ ಹೇಳಿದ್ದ. ಇದೇ ಮಾತಿಗೆ ಮಾತು ಬೆಳೆದು ಅವನು ಬೆಟ್ಟದಿಂದ ಬಿದ್ದ. ಅದರ ಹಿಂದೆ ಅಪ್ಪ-ಅಮ್ಮ ಬಿದ್ದರು ಎಂದೇ ಸುದ್ದಿಯಾಗಿತ್ತು. ಆದರೆ ಈ ಘಟನೆಯ ಹಿಂದೆ ಇರುವುದು ಐ-ಫೋನ್ ವಿಷ್ಯ ಮಾತ್ರವಲ್ಲ, ಕೌಟುಂಬಿಕ ಕಲಹ ಎನ್ನುವುದು ಕೊನೆಗೆ ಬೆಳಕಿಗೆ ಬಂದಿದೆ.
ಆಗಾಗ್ಗೆ ಮನೆಯಲ್ಲಿ ಪೋಷಕರ ಮಧ್ಯೆ ನಡೆಯುತ್ತಿದ್ದ ಜಗಳದಿಂದ ಇದು ಸಂಭವಿಸಿದ್ದು, ಈ ಹಿಂದೆಯೂ ಕುನಾಲ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಎಂದೆಲ್ಲಾ ಹೇಳಲಾಗುತ್ತಿದೆ. ದಂಪತಿಯ ಮೊದಲ ಮಗನ ಸಾವಿನ ಬಳಿಕ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಕುನಾಲ್ ಕಳೆದ ವರ್ಷ ಇದೇ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಅವರು ವಿಫಲರಾದರು ಎಂದೆಲ್ಲಾ ಹೇಳಲಾಗುತ್ತಿದ್ದು, ಇದರ ಹಿಂದೆ ದೊಡ್ಡ ಸ್ಟೋರಿಯೇ ಬಯಲಿಗೆ ಬರುತ್ತಿದೆ.
ಮಿಲೀನಿಯರ್ನಿಂದ ಐ-ಫೋನ್ ವಿತರಣೆ?
ಅದರ ನಡುವೆಯೇ, ಐ-ಫೋನ್ನಿಂದ ಸಾವು ಎನ್ನುವ ವಿಷಯವನ್ನೇ ಕೆಲವರು ತಮ್ಮ ಸೋಷಿಯಲ್ ಮೀಡಿಯಾ ವಸ್ತುವಾಗಿಸಿಕೊಂಡಿದ್ದಾರೆ. ಇದೀಗ ಜಾಲತಾಣದಲ್ಲಿ ಭಾರಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಭರ್ಜರಿ ಬಂಗಾರವನ್ನು ಧರಿಸಿರುವ ಮಿಲೇನಿಯರ್ ಒಬ್ಬ, ಐ-ಫೋನ್ ಘಟನೆಯ ಬಳಿಕ ಯುವಕರಿಗೆ ಐ-ಫೋನ್ ವಿತರಿಸುತ್ತಿರುವುದಾಗಿ ಕ್ಯಾಪ್ಷನ್ ನೀಡಲಾಗಿದ್ದು, ಇದರಲ್ಲಿ ಹಲವು ಯುವಕ-ಯುವತಿಯರು ಬಂದು ಫೋನ್ ತೆಗೆದುಕೊಳ್ಳುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದವರು ಎಲ್ಲಿ ಜಾಗ, ನಮಗೆ ಸಿಕ್ಕಿಲ್ಲ. ಸಿಕ್ಕವರು ಪುಣ್ಯವಂತರು ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ,, ಜೊತೆಗೆ ಆತ ಅದೆಷ್ಟು ಶ್ರೀಮಂತ ಇರಬಹುದು, ಎಷ್ಟು ದಾನಿ ಇರಬಹುದು ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.
ಅಸಲಿಗೆ ಏನಿದು?
ಆದರೆ ಅಸಲಿ ವಿಷಯವೇ ಬೇರೆ. ಐ-ಫೋನ್- ಗೀ-ಫೋನ್ ಯಾವುದೂ ಅಲ್ಲ. ಇವನೊಬ್ಬ ಸಾಮಾನ್ಯ ಕಂಟೆಂಟ್ ಕ್ರಿಯೇಟರ್, ಖಾಲಿ ಬಾಕ್ಸ್ ಅನ್ನು ತನ್ನ ಸೋಷಿಯಲ್ ಮೀಡಿಯಾ ಲೈಕ್ಸ್‌ಗಾಗಿ ಹಂಚುತ್ತಾ ವಿಡಿಯೋ ಮಾಡಿಕೊಂಡಿದ್ದಾನೆ. ಈತ ಧರಿಸಿರುವುದು ಕೂಡ ಅಸಲಿ ಚಿನ್ನ ಅಲ್ಲ ಎನ್ನುವುದು ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತೆದೆ. ಐ-ಫೋನ್ ದುರಂತವನ್ನೇ ತನ್ನ ಬಂಡವಾಳ ಮಾಡಿಕೊಂಡಿರುವ ಈ ಯುಟ್ಯೂಬರ್ ಈ ವಿಡಿಯೋದಿಂದ ಸಕತ್ ಸಂಪಾದನೆ ಮಾಡುತ್ತಿದ್ದಾನೆ. ಇಂಥ ವಿಡಿಯೋ ಹಾಕಿದಾಗ ಹಲವರು ಅದನ್ನೇ ನಂಬೋದು ಇದೆ. ಇಂಥ ನಂಬುವವರೇ ಇವರ ಬಂಡವಾಳ. ಅವನು ಕೂಡ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಾನು ಹೀಗೆ ಫೋನ್ ವಿತರಿಸುತ್ತಿದ್ದೇನೆ ಎಂದು ಹೇಳಲೇ ಇಲ್ಲ. ಆದರೆ ಆ ರೀತಿ ಪೋಸ್ ಕೊಟ್ಟು ಬೇರೆಯವರನ್ನು ಮೂರ್ಖಮಾಡಿದ್ದಾನೆ ಅಷ್ಟೇ. ಮೂರ್ಖರಾಗುವವರು ಇರುವವರೆಗೂ ಹೀಗೆ ಮೂರ್ಖಮಾಡುವವರಿಗೇನೂ ಕೊರತೆ ಇರುವುದಿಲ್ಲವಲ್ಲ!


