ತಮ್ಮ ಪಾಲಿನ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದ ನಾಯಿಗಳನ್ನು ಓಡಿಸಲು ಆನೆಗಳು ಸೊಂಡಿಲಿನಿಂದ ಮಣ್ಣನ್ನು ಬಾಚಿ ಎಸೆದವು. ಈ ತಮಾಷೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆಗಳು ಬಹಳ ಬುದ್ಧಿವಂತ ಪ್ರಾಣಿಗಳು. ತಮ್ಮ ಮರಿಗಳನ್ನು ರಕ್ಷಿಸುವುದರಿಂದ ಹಿಡಿದು ತಮ್ಮ ಪರಿವಾರವನ್ನು ಜೋಪಾನ ಮಾಡುವುದು ಆಹಾರವನ್ನು ಹುಡುಕುವುದು ಹೀಗೆ ಪ್ರತಿಯೊಂದರಲ್ಲೂ ಬಾಯಿ ಬರುವ ಮನುಷ್ಯಗಿಂತ ಮಾತು ಬಾರದ ಮೂಕ ಪ್ರಾಣಿಗಳು ತಮಗೂ ಬುದ್ಧಿ ಇದೆ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿವೆ. ತಮಗೆ ಹಾನಿ ಮಾಡದ ಹೊರತು ಇತರ ಪ್ರಾಣಿಗಳಿಗೆ ಹಾನಿ ಮಾಡದೇ ಪ್ರಕೃತಿಯಲ್ಲಿ ಸಾಮರಸ್ಯದಿಂದ ಬದುಕುವ ಈ ಆನೆಗಳ ವೀಡಿಯೋಗಳು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಈಗ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ನಿಮ್ಮ ಮೊಗದಲ್ಲಿ ನಗು ತಾರದೇ ಇರದು.
Ecoflix ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ಆನೆಗಳ ಕಲ್ಲಂಗಡಿ ಹಣ್ಣನ್ನು ಎರಡೂ ಮೂರು ನಾಯಿಗಳು ಜೊತೆ ಸೇರಿ ತಿನ್ನುತ್ತಿವೆ. ಇವುಗಳನ್ನು ಓಡಿಸಿ ಆನೆಗಳು ತಮ್ಮ ಆಹಾರವನ್ನು ರಕ್ಷಿಸಿಕೊಳ್ಳಬೇಕು. ನಾಯಿಗಳನ್ನು ಓಡಿಸುವುದು ಆನೆಗಳಿಗೆ ದೊಡ್ಡ ಕೆಲಸವೇನಲ್ಲ, ಆದರೂ ಇಲ್ಲಿ ಆನೆಗಳು ಏನು ಮಾಡಿದ್ವು ನೋಡಿದ್ರೆ ನೀವು ನಗದೇ ಇರಲ್ಲ...
ನಾಯಿಗಳ ಮೇಲೆ ಸೊಂಡಿಲಿನಿಂದ ಮಣ್ಣು ಎತ್ತಿ ಎಸೆದ ಆನೆಗಳು
ತಮ್ಮ ಆಹಾರವನ್ನು ನಾಯಿಗಳು ತಿನ್ನುವುದನ್ನು ನೋಡಿದ ಆನೆಗಳು ಕೆಲ ಕಾಲ ಘೀಳಿಟ್ಟು ಜೋರಾಗಿ ಸದ್ದು ಮಾಡುತ್ತಾ ಅವುಗಳನ್ನು ಓಡಿಸಲು ನೋಡಿವೆ. ಆದರೆ ಈ ನಾಯಿಗಳು ಕ್ಯಾರೇ ಅನ್ನದೇ ತಿನ್ನುವುದರಲ್ಲಿ ಮಗ್ನವಾಗಿವೆ. ಇನ್ನು ಕಾದರೆ ತಮಗೇನು ಸಿಗದು ಎಂದು ಯೋಚಿಸಿದ ಆನೆಗಳು, ತಾವು ನಿಂತಲ್ಲಿಂದಲೇ ಸೊಂಡಿಲಿನಲ್ಲಿ ಮಣ್ಣು ತುಂಬಿ ನಾಯಿಗಳ ಮೇಲೆ ಎಸೆದಿದ್ದು, ಮಣ್ಣು ಬೀಳುವ ವೇಳೆ ನಾಯಿಗಳು ಚದುರಿ ದೂರ ಸರಿಯುವುದನ್ನು ನೋಡಬಹುದು. ಕಾಲಿನಲ್ಲಿ ಮಣ್ಣನ್ನು ಕೆದಕುವ ಆನೆಗಳು ಅದನ್ನು ಸೊಂಡಿಲಿಗೆ ತುಂಬಿಸಿ ನಾಯಿಗಳ ಮೇಲೆ ಎಸೆದಿದ್ದು, ಈ ವೀಡಿಯೋ ನೋಡಿದರೆ ಎಂಥವರಿಗೂ ನಗು ಬರುವುದು.
ಮೊದಲಿಗೆ ಆನೆ ಮಣ್ಣನ್ನು ಎಸೆದಾಗ ಸ್ವಲ್ಪ ಚದುರಿದ ನಾಯಿಗಳು ಮತ್ತೆ ಅಲ್ಲೇ ನಿಲ್ಲುತ್ತವೆ. ಹೀಗಾಗಿ ಆನೆಗಳು ಮತ್ತೊಮ್ಮೆ ಸೊಂಡಿಲಿನಲ್ಲಿ ಮಣ್ಣನ್ನು ಎತ್ತಿ ಎಸೆದಿವೆ. ನಂತರ ಎರಡು ಹೆಜ್ಜೆ ಮುಂದೆ ಹೋಗಿ ಮತ್ತೊಮ್ಮೆ ಅವುಗಳ ಮೇಲೆ ಮಣ್ಣು ಎಸೆದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಅನೇಕರು ಆನೆಗಳ ಬುದ್ಧಿವಂತಿಕೆಗೆ ಭೇಷ್ ಎಂದಿದ್ದಾರೆ.
ಆನೆಗಳಿಗೆ ಈ ನಾಯಿಗಳನ್ನು ಓಡಿಸುವುದು ಕಷ್ಟದ ಕೆಲಸವಲ್ಲ, ಕೇವಲ ಒಂದು ಹೆಜ್ಜೆ ಇಟ್ಟರು ನಾಯಿ ಅಪ್ಪಚ್ಚಿ ಆಗುತ್ತಿತ್ತು. ಆದರೂ ಇವರು ಮಣ್ಣೆಸೆದು ಅವುಗಳನ್ನು ದೂರ ಓಡಿಸುವುದು ನೋಡಿ ಅಚ್ಚರಿ ಆಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆನೆಗಳು ನಾಯಿಗಳನ್ನು ತುಳಿಯುವ ಬದಲು ಮಣ್ಣು ಎಸೆದಿವೆ. ಅವುಗಳಿಗೂ ಗೊತ್ತು ಸಹಜೀವನದ ಬಗ್ಗೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅವರು ಮೊದಲು ಎಚ್ಚರಿಕೆ ನೀಡಿದರು, ನಂತರ ಮಣ್ಣು ಎಸೆದು ಕೊನೆಗೆ ತಮ್ಮ ಕಲ್ಲಂಗಡಿ ಹಣ್ಣನ್ನು ಸ್ವಾಧೀನಪಡಿಸಿಕೊಳ್ಳಲು ನಡೆದರು. ಆಕ್ರಮಣಶೀಲತೆ ಅವರ ಮೊದಲ ಆಯ್ಕೆಯಾಗಿರಲಿಲ್ಲ. ನಾನು ಈ ಸೌಮ್ಯ, ಬುದ್ಧಿವಂತ ದೈತ್ಯರನ್ನು ಪ್ರೀತಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
