ಬಹುಕೋಟಿ ಉದ್ಯಮಿ ಮತ್ತು ಕಾನ್ಫಿಡೆಂಟ್ ಗ್ರೂಪ್ ಚೇರ್‌ಮನ್‌ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ 'ನಾಳೆ ಎಂಬುದೇ ಇಲ್ಲ' ಎಂದು ಅವರು ಹೇಳಿದ್ದ ವಿಡಿಯೋ ವೈರಲ್ ಆಗಿದ್ದು, ಅವರ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. 

ಬಹುಕೋಟಿ ಉದ್ಯಮಿ, ಕಾನ್ಪಿಡೆಂಟ್‌ ಗ್ರೂಪ್‌ ಚೇರ್‌ಮನ್‌ ಸಿಜೆ ರಾಯ್‌ ಆತ್ಮಹತ್ಯೆ ಮಾಡಿಕೊಂಡದ್ದು ನಿನ್ನೆ ಘಟಿಸಿದ ದೊಡ್ಡ ದುರಂತ ಸುದ್ದಿ. ದೇಶವಿದೇಶಗಳ ಮಾಧ್ಯಮಗಳಲ್ಲೂ ಈ ಸಾವು ಸದ್ದು ಮಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳೋಂಥದ್ದು ಈ ಕುಬೇರನಿಗೆ ಏನಾಗಿತ್ತು ಎಂಬ ಚರ್ಚೆ ಹುಟ್ಟುಹಾಕಿದೆ. ಈ ನಡುವೆ, ʼನಾಳೆ ಎಂಬುದೇ ಇಲ್ಲʼ ಎಂದು ಮಾತನಾಡಿದ್ದ ರಾಯ್‌ ಅವರ ಒಂದು ವಿಡಿಯೋ ಇದೀಗ ವೈರಲ್‌ ಆಗ್ತಿದೆ.

ವಿಡಿಯೋದಲ್ಲಿ ಏನಿದೆ? ʼನಾನು ಜೀವನದಲ್ಲಿ ಆರೇಳು ಸಲ ಸಾವನ್ನು ಹತ್ರದಿಂದ ನೋಡಿದೀನಿ. ದೇರ್‌ ಈಸ್‌ ನೋ ಟುಮಾರೋ (ನಾಳೆ ಎಂಬುದೇ ಇಲ್ಲ). ನಾನು ಆಸ್ತಿ ಮಾಡಿದೀನಿ. ಎಲ್ರೂ ಮಾಡಿದಾರೆ. ಆದ್ರೆ ನಾಳೆ ಇರುತ್ತೆ ಎಂಬ ಗ್ಯಾರಂಟಿ ಇಲ್ಲ. ಅದಕ್ಕೇ ಇವತ್ತನ್ನು ಸಂಭ್ರಮಿಸಿ. ಅಂದ್ರೆ ಹೋಗಿ ಕುಡಿದು ಹಣ ಹಾಳು ಮಾಡಿ ಅಂತ ಹೇಳೋದಲ್ಲ. ಒಳ್ಳೆಯದು ಅಂತ ನಿಮಗೆ ಯಾವುದು ಅನಿಸುತ್ತೋ, ಯಾವುದು ಇತರರಿಗೆ ಹಾನಿ ಮಾಡಲ್ವೋ, ಅದನ್ನು ಮಾಡಿ, ನಿಮ್ಮ ಚೌಕಟ್ಟಲ್ಲಿ ಮಾಡಿʼ ಎಂದು ಸಿಜೆ ರಾಯ್‌ ಒಂದು ಇಂಟರ್‌ವ್ಯೂದಲ್ಲಿ ಹೇಳಿದಾರೆ.

ಏನು ಇದರರ್ಥ ಎಂದು ಕೆಲವರು ತಲೆ ಕೆರೆದುಕೊಳ್ತಿದಾರೆ. ತಮ್ಮ ಸಾವಿಗೆ ಮೊದಲೇ ಈ ಬಗ್ಗೆ ಯೋಚಿಸಿದ್ರಾ, ಅಥವಾ ಆ ಕ್ಷಣದಲ್ಲಿ ಸುಮ್ಮನೇ ಬಂದ ಮಾತಾಗಿತ್ತಾ ಅಂತೆಲ್ಲ ಚರ್ಚೆಯಾಗ್ತಿದೆ.

ಬಹುಕೋಟಿ ಸಾಮ್ರಾಜ್ಯದ ಕುಬೇರ

ಸಿಜೆ ರಾಯ್‌ ಅಥವಾ ಡಾ. ಚಿರಿಯನ್ ಕಂಡತ್ ಜೋಸೆಫ್ ರಾಯ್ ಸಂಪತ್ತು ಸುಮ್ನೇ ಅಲ್ಲ. ರಾಯ್ ಬಿಲಿಯನೇರ್ ಆಗಿದ್ದೇ ರೋಚಕ ಕತೆ. ಹೆಚ್‌ಪಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಾಮಾನ್ಯ ಉದ್ಯೋಗಿಯೊಬ್ಬ ನೋಡ ನೋಡ್ತಿದ್ದಂತೆ ಸಾವಿರಾರು ಕೋಟಿ ಮೌಲ್ಯದ ಉದ್ಯಮ ಕಟ್ಟಿ ಹೆಮ್ಮರವಾಗಿ ಬೆಳೆದುಬಿಟ್ಟಿದ್ದು ಸುಲಭದ ಮಾತಲ್ಲ. ಕೇರಳದ ಕೊಚ್ಚಿಯಲ್ಲಿ ಹುಟ್ಟಿ ಬೆಂಗಳೂರಲ್ಲಿ ಬೆಳೆದ ಸಿಜೆ ರಾಯ್, ಹೆಚ್‌ಪಿ ಕಂಪನಿಯಲ್ಲಿ ಕೆಲಸ ಬಿಟ್ಟು ಉದ್ಯಮ ಆರಂಭಿಸಿದರು. 2006ರಲ್ಲಿ ರಿಯಲ್ ಎಸ್ಟೇಟ್ ಉತ್ತುಂಗದಲ್ಲಿದ್ದ ಸಾಲ-ಮುಕ್ತ ನೀತಿಯಡಿ ಉದ್ಯಮವನ್ನು ಬೆಂಗಳೂರು, ಕೇರಳ, ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಹಲವಾರು ನಿವಾಸ, ವಾಣಿಜ್ಯ, ಟೌನ್‌ಶಿಪ್ ನಿರ್ಮಾಣ ಮಾಡಿದರು. ಅಮೆರಿಕಾ ಮತ್ತು ಯುಎಇಗೆ ಬಿಸಿನೆಸ್ ವಿಸ್ತರಿಸಿದರು. ಕಾನ್ಪಿಡೆಂಡ್ ಗ್ರೂಪ್ 159ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿ, ಕೋಟ್ಯಂತರ ಗ್ರಾಹಕರಿಗೆ ಮನೆಗಳನ್ನು ಒದಗಿಸಿತು.

ರಿಯಲ್ ಎಸ್ಟೇಟ್ ಜೊತೆ ಜೊತೆಗೆ ಹಾಸ್ಪಿಟಾಲಿಟಿ, ನಿರ್ಮಾಣ ಕ್ಷೇತ್ರ, ಶಿಕ್ಷಣ, ಸಿನಿಮಾ ಮೊದಲಾದ ವ್ಯವಹಾರಗಳಲ್ಲಿ ವ್ಯಾಪಕವಾಗಿ ಬಿಸಿನೆಸ್ ಮಾಡಿದರು. ಸಿಜೆ ರಾಯ್ ಅಂದಾಜು ಆಸ್ತಿ ಮೌಲ್ಯವೇ 8,500 ಕೋಟಿ ಎಂದು ಅಂದಾಜಿಸಲಾಗಿದೆ. ರೋಲ್ಸ್ ರಾಯ್, ಲ್ಯಾಂಬೋರ್ಗಿನಿ, ಬುಗಾಟಿ ಸೇರಿದಂತೆ ಲಕ್ಸುರಿ ಕಾರುಗಳ ಸಂಗ್ರಹವನ್ನ ಹೊಂದಿದ್ದರು. ಮಲಯಾಳಂ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸಹ ಹೂಡಿಕೆ ಮಾಡಿ ಸಕ್ಸೆಸ್ ಕಂಡಿರು. 2012ರಲ್ಲಿ ಮೋಹನ ಲಾಲ್ ನಟನೆಯ ಕ್ಯಾಸನೋವಾ ಚಿತ್ರವು ಹಣ, ಕೀರ್ತಿ ಎರಡನ್ನೂ ಗಳಿಸಿಕೊಟ್ಟಿತ್ತು. ಬಹಳ ಕಾಲದವರೆಗೆ ಬಿಗ್‌ಬಾಸ್ ಮಲಯಾಳಂ ಮತ್ತು ಇತರ ರಿಯಾಲಿಟಿ ಶೋಗಳಿಗೆ ಪ್ರಾಯೋಜಕತ್ವ ನೀಡಿದ್ದರು.

 

View post on Instagram
 

 

ಇಷ್ಟೆಲ್ಲಾ ಸಾಮ್ರ‍್ಯಾಜ್ಯ ಕಟ್ಟಿದ್ದ ಸಿಜೆ ರಾಯ್, 2026 ಜನವರಿ 30ರಂದು ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ 57ನೇ ವಯಸ್ಸಿನಲ್ಲಿ ಪತ್ನಿ, ಪುತ್ರ ಮತ್ತು ಪುತ್ರಿಯನ್ನ ಅಗಲಿದ್ದು ಸಾವಿರಾರು ಕೋಟಿಯ ಸಾಮ್ರ‍್ಯಾಜ್ಯವನ್ನ ಬಿಟ್ಟು ತೆರಳಿದ್ದಾರೆ. ಐಟಿ ದಾಳಿಗೆ ಹೆದರಿ ಶೂಟ್ ಮಾಡಿಕೊಂಡ್ರಾ? ಅಥವಾ ತೀರಿಸಲಾಗದಷ್ಟು ಸಾಲ ಬೆಳೆದಿತ್ತಾ? ಅಥವಾ ಬೇರೇನಾದ್ರೂ ಚಿಂತೆ ಇತ್ತಾ? ಪ್ರಶ್ನೆಗಳಿವೆ. ತನಿಖೆ ನಡೆಯುತ್ತಿದೆ.