ಕಚೇರಿಗೆ ಆಗಮಿಸಿ ಲ್ಯಾಪ್‌ಟಾಪ್ ಡೆಸ್ಕ್ ಮೇಲಿಟ್ಟು ವಾಶ್‌ರೂಂಗೆ ತೆರಳಿದ ಉದ್ಯೋಗಿ ಅಲ್ಲೇ ಕುಸಿದು ಮೃತಪಟ್ಟಿದ್ದಾನೆ. ಆದರೆ ಕಂಪನಿ ಲಾಗಿನ್ ನೀತಿ ಮುಂದಿಟ್ಟು ಪರಿಹಾರ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

ಶೆನ್‌ಝೆನ್ (ಆ.28) ಹಲವು ಬಾರಿ ಕಂಪನಿಗಳು ಉದ್ಯೋಗಿಗಳ ವಿರುದ್ಧ ನಿರ್ಧಾರ ತೆಗೆದುಕೊಂಡು ಭಾರಿ ಟೀಕೆಗೆ ಗುರಿಯಾದ ಘಟನೆಗಳಿವೆ. ಪ್ರಮುಖವಾಗಿ ವೇತನ ಹೆಚ್ಚಳ, ರಜೆ, ಕಂಪನಿಯಂದ ನಿರ್ಗಮಿಸುವಾಗ ಹಲವು ನೀತಿಗಳನ್ನು ಹೇಳಿ ಸತಾಯಿಸಿದ ಘಟನೆಗಳು ವರದಿಯಾಗಿದೆ. ಆದರೆ ಕಂಪನಿಯೊಂದು ತನ್ನ ಉದ್ಯೋಗಿ ಸಾವಿನಲ್ಲೂ ಹಲವು ನೀತಿ ಮುಂದಿಟ್ಟು ಪರಿಹಾರ ನಿರಾಕರಿಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಚೇರಿಗೆ ಆಗಮಿಸಿದ 39ರ ಹರದೆಯ ಉದ್ಯೋಗಿ ಲ್ಯಾಪ್‌ಟಾಪ್ ಡೆಸ್ಕ್ ಮೇಲಿಟ್ಟು ಕಚೇರಿ ವಾಶ್‌ರೂಂಗೆ ತೆರಳಿದ್ದಾನೆ. ಆದರೆ ಅಲ್ಲೇ ಕುಸಿದು ಮೃತಪಟ್ಟಿದ್ದಾನೆ. ಆದರೆ ಕಂಪನಿ ಪರಿಹಾರ ನೀಡಲು ಲಾಗಿನ್ ನೀತಿ ತಂದು ವಿಚಿತ್ರ ವಾದ ಮುಂದಿಟ್ಟ ಘಟನೆ ಚೀನಾದ ಶೆನ್‌ಝೆನ್‌ನಲ್ಲಿ ನಡೆದಿದೆ.

ಕಚೇರಿ ಬಂದಾಗ ಏನಾಯ್ತು?

ಪತ್ನಿ, ಇಬ್ಬರು ಮಕ್ಕಳ ತಂದೆ ಝಿಂಗ್ ಝಿ ಅನ್ನೋ ವ್ಯಕ್ತಿ ಕೆಲ ವರ್ಷಗಳಿಂದ ಚೀನಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಕಚೇರಿಗೆ ಆಗಮಿಸಿದ ಝೀ ಅಸ್ವಸ್ಥರಾಗಿದ್ದಾರೆ. ಹೀಗಾಗಿ ನೇರವಾಗಿ ಟಾಯ್ಲೆಟ್‌ಗೆ ತೆರಳಿದ್ದಾರೆ. ಆದರೆ ಕೆಲ ಹೊತ್ತಾದರೂ ಝೀ ಮರಳಿ ಬಾರದ ಕಾರಣ ಸಹೋದ್ಯೋಗಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಟಾಯ್ಲೆಟ್‌ನಲ್ಲಿ ಕುಸಿದು ಬಿದ್ದಿರುವುದು ಗಮನಿಸಿದ್ದಾರೆ. ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಸ್ಪಂದನೆ ಇರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಝೀ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಝೀ ಸಾವಿನಿಂದ ಕುಟುಂಬ ಆಘಾತಕ್ಕೆ ಒಳಗಾಗಿತ್ತು. ತಿಂಗಳ ಬಳಿಕ ಪತಿಯ ಉದ್ಯೋಗ ಸಂಬಂಧಿಸಿದ ಐಡಿ ಸೇರಿದಂತೆ ಇತರ ದಾಖಲೆ ಸಲ್ಲಿಸಿ ಫೈನಲ್ ಸೆಟ್ಲಲ್‌ಮೆಂಟ್ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಕರ್ತವ್ಯದಲ್ಲಿರುವಾಗ ಮೃತಪಟ್ಟ ಉದ್ಯೋಗಿಗೆ ಕಂಪನಿಯ ಪರಿಹಾರಕ್ಕೂ ಮನವಿ ಮಾಡಿದ್ದಾರೆ. ಆದರೆ ಈ ಅರ್ಜಿಯನ್ನು ಕಂಪನಿ ತಿರಸ್ಕರಿಸಿತ್ತು

ಲಾಗಿನ್ ಆಗಿರಲಿಲ್ಲ ಎಂದು ಕಂಪನಿ

ಕರ್ತವ್ಯದಲ್ಲಿರುವಾಗ ಉದ್ಯೋಗಿ ಮೃತಪಟ್ಟಿಲ್ಲ. ಉದ್ಯೋಗಿ ಲ್ಯಾಪ್‌ಟಾನ್ ಆನ್ ಆಗಿರಲಿಲ್ಲ. ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಿತ್ತು. ಕರ್ತವ್ಯದಲ್ಲಿರುವಾಗ ಮೃತಪಟ್ಟರೇ ಮಾತ್ರ ಪರಿಹಾರ ನೀಡಲು ಸಾಧ್ಯ. ಆದರೆ ಝೀ ಇನ್ನು ಕೆಲಸಕ್ಕೆ ಲಾಗಿನ್ ಆಗಿರಲಿಲ್ಲ. ಹೀಗಾಗಿ ಕಚೇರಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರಿಂದ ಪತ್ನಿ ತೀವ್ರವಾಗಿ ನೊಂದಿದ್ದರು. ಕಂಪನಿಗಾಗಿ ತಡ ರಾತ್ರಿವರೆಗೂ ಕೆಲಸ ಮಾಡಿದ ಪತಿಗೆ ಕೊನೆಗೆ ಪರಿಹಾರ ನೀಡಲು ನಿರಾಕರಿಸಿದ್ದು ಮಾತ್ರವಲ್ಲ, ಲಾಗಿನ್ ಆಗಿಲ್ಲ ಅನ್ನೋ ನೀತಿಯಿಂದ ಮತ್ತಷ್ಟು ಬೇಸರಗೊಂಡಿತ್ತು.

ಈ ಮಾಹಿತಿ ಚೀನಾದಲ್ಲಿ ಹರಿದಾಡುತ್ತಿದ್ದಂತೆ ಆಕ್ರೋಶ ಹೆಚ್ಚಾಗಿದೆ. ಇದೀಗ ಝೀ ಪತ್ನಿ ನ್ಯಾಯಾಲದ ಮೊರೆ ಹೋಗಿದ್ದಾಳೆ. ಪತಿ ಹೆಚ್ಚುವರಿಯಾಗಿ ಕೆಲಸ ಮಾಡಿದ್ದಾರೆ, ಅತೀವ ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ಪರಿಣಾಮ ಆರೋಗ್ಯ ಹದಗೆಟ್ಟಿದೆ. ಇತ್ತ ಕಚೇರಿಗೆ ತೆರಳಿ ಕಚೇರಿಯಲ್ಲೇ ಪ್ರಾಣಬಿಟ್ಟಿದ್ದಾರೆ. ಹೀಗಾಗಿ ಪರಿಹಾರಕ್ಕೆ ಅರ್ಹ ಎಂದು ಮನವಿ ಮಾಡಿದ್ದಾರೆ.