ನಗರದ ಈ ಸಿನಿಮಾ ಥಿಯೇಟರ್ ಒಂದು ವಿಶಿಷ್ಟ ಸೇವೆ ಆರಂಭಿಸಿದೆ. ಮಧ್ಯಾಹ್ನದ ಸಮಯದಲ್ಲಿ ಸಿನಿಮಾ ಪ್ರದರ್ಶಿಸುವ ಬದಲು, ಆರಾಮವಾಗಿ ನಿದ್ದೆ ಮಾಡಲು ರಿಕ್ಲೈನರ್ ಸೀಟ್‌ಗಳನ್ನು ಬಾಡಿಗೆಗೆ ನೀಡುತ್ತಿದೆ. ಈ 'ಲೈಯಿಂಗ್ ಫ್ಲ್ಯಾಟ್ ಪ್ಲಾನ್' ಕಡಿಮೆ ಜನರಿರುವ ಹಗಲಿನ ಹೊತ್ತನ್ನು ಬಳಸಿಕೊಳ್ಳುವ ಹೊಸ ಉಪಾಯವಾಗಿದೆ.

ಕ್ಸಿಯಾನ್: ಸಿನಿಮಾ ನೋಡ್ತಾ ಬೋರ್ ಆದ್ರೆ ಇನ್ಮುಂದೆ ಎದ್ದು ಹೋಗ್ಬೇಕಂತಿಲ್ಲ, ಅಲ್ಲೇ ಆರಾಮಾಗಿ ಒಂದು ನಿದ್ದೆ ಹೊಡಿಬಹುದು. ಅಷ್ಟೇ ಅಲ್ಲ, ಆಫೀಸ್ ಕೆಲಸದ ಮಧ್ಯೆ ಸ್ವಲ್ಪ ರೆಸ್ಟ್ ಬೇಕು ಅನ್ನೋರಿಗೂ ಈ ಚಾನ್ಸ್ ಇದೆ. ಹೌದು, ಚೀನಾದ ಒಂದು ಸಿನಿಮಾ ಥಿಯೇಟರ್ ಇಂಥದ್ದೊಂದು ವಿಚಿತ್ರ ಐಡಿಯಾ ಮಾಡಿದೆ. ಸಿನಿಮಾ ಹಾಲ್‌ನಲ್ಲಿ ಸಿನಿಮಾ ಬದಲಿಗೆ, ಮಧ್ಯಾಹ್ನದ ಹೊತ್ತು ನಿದ್ದೆ ಮಾಡಲು ಜನರಿಗೆ ಅವಕಾಶ ನೀಡುತ್ತಿದೆ.

ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದಲ್ಲಿರುವ 'ಲುಮಿಯೈ ಸಿನಿಮಾ ಥಿಯೇಟರ್' ಈ ಹೊಸ ಪ್ಲ್ಯಾನ್ ಶುರು ಮಾಡಿದೆ.

ಏನಿದು 'ಲೈಯಿಂಗ್ ಫ್ಲ್ಯಾಟ್ ಪ್ಲಾನ್'?

ಥಿಯೇಟರ್‌ನವರು ಈ ವಿಶೇಷ ಸೇವೆಗೆ 'ಲೈಯಿಂಗ್ ಫ್ಲ್ಯಾಟ್ ಪ್ಲಾನ್' ಅಂತ ಹೆಸರಿಟ್ಟಿದ್ದಾರೆ. ಕೆಲಸದ ದಿನಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ 2:30ರವರೆಗೆ ಈ ನ್ಯಾಪ್ ಸರ್ವೀಸ್ ಇರುತ್ತೆ. ಇದಕ್ಕಾಗಿ ಎರಡು ವಿಶೇಷ ಹಾಲ್‌ಗಳಲ್ಲಿ ಒಟ್ಟು 76 ಸೀಟ್‌ಗಳನ್ನು ರೆಡಿ ಮಾಡಿದ್ದಾರೆ. ಇವು ಮಾಮೂಲಿ ಸೀಟ್‌ಗಳಲ್ಲ, ಸಂಪೂರ್ಣವಾಗಿ ಮಲಗಿಕೊಳ್ಳಬಹುದಾದ ರಿಕ್ಲೈನರ್ ಸೀಟ್‌ಗಳು. ಒಬ್ಬರಿಗೆ ತಿಂಗಳ ಪಾಸ್‌ಗೆ 39.9 ಯುವಾನ್, ಇಬ್ಬರಿಗೆ 59.9 ಯುವಾನ್ ಚಾರ್ಜ್ ಮಾಡ್ತಾರೆ. ಇದರ ಜೊತೆಗೆ ಹೊದಿಕೆ, ಕಾಫಿ, ಇತರೆ ಪಾನೀಯಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಕೊಡ್ತಾರೆ. ಇಯರ್‌ಪ್ಲಗ್ ಮತ್ತು ಐ ಮಾಸ್ಕ್‌ ಬೇಕಂದ್ರೆ ತಲಾ 5.9 ಯುವಾನ್ ಹೆಚ್ಚುವರಿ ಕೊಡಬೇಕು.

ಮಸಾಜ್ ಸೀಟ್‌ಗಳೂ ಇವೆ

ಇಲ್ಲಿ ಕೆಲವು ರೂಲ್ಸ್ ಕೂಡ ಇವೆ. ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇಡಬೇಕು. ಒಂದು ವೇಳೆ ಫೋನ್ ಬಂದ್ರೆ, ನ್ಯಾಪ್ ಏರಿಯಾದಿಂದ ಹೊರಗೆ ಹೋಗಿ ಮಾತಾಡಬೇಕು. ವಿಶ್ರಾಂತಿ ಪಡೆಯುವಾಗ ಚಪ್ಪಲಿ ಬಿಚ್ಚುವಂತಿಲ್ಲ ಅನ್ನೋದು ಇನ್ನೊಂದು ನಿಯಮ. ಇಲ್ಲಿ ಎರಡು ತರಹದ ಹಾಲ್‌ಗಳಿವೆ. ಹೆಚ್ಚು ವಿಶಾಲವಾದ ಸೀಟ್‌ಗಳಿರುವ 'ಲಿಷರ್ ಸ್ಕ್ರೀನಿಂಗ್ ಹಾಲ್'ಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಇದೆ. ಮಸಾಜ್ ಚೇರ್‌ಗಳಿರುವ 'ಮಸಾಜ್ ಸೀಟ್ ಹಾಲ್' ಕೂಡ ಲಭ್ಯವಿದೆ.

ಥಿಯೇಟರ್‌ನಲ್ಲಿ ಸಿನಿಮಾ ನೋಡೋಕೆ ಜನರಿಲ್ಲ!

ವಾರದ ದಿನಗಳಲ್ಲಿ ಹಗಲು ಹೊತ್ತಿನ ಶೋಗಳಿಗೆ ಜನರೇ ಬರ್ತಿರಲಿಲ್ಲ, ಸೀಟ್‌ಗಳೆಲ್ಲಾ ಖಾಲಿ ಇರ್ತಿತ್ತು. ಇದೇ ಕಾರಣಕ್ಕೆ ಈ ಹೊಸ ಸೇವೆ ಶುರು ಮಾಡಿದ್ದೀವಿ ಅಂತ ಥಿಯೇಟರ್ ಮ್ಯಾನೇಜರ್ ಶು ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ. ಈಗಂತೂ ಹೆಚ್ಚಿನ ದಿನಗಳಲ್ಲಿ ಲಭ್ಯವಿರುವ ಸೀಟ್‌ಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಸೀಟ್‌ಗಳು ಈ ನ್ಯಾಪ್ ಸರ್ವೀಸ್‌ಗಾಗಿಯೇ ಬಳಕೆಯಾಗುತ್ತಿವೆಯಂತೆ.

ಕಳೆದ ನಾಲ್ಕು ತಿಂಗಳಿಂದ ಈ ಸೇವೆ ಬಳಸುತ್ತಿರುವ 33 ವರ್ಷದ ಗು ಅನ್ನೋ ಗ್ರಾಹಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 'ಆಫೀಸ್‌ನಲ್ಲಿ ಮಲಗೋಕೆ ಟ್ರೈ ಮಾಡ್ತಿದ್ದೆ, ಆದ್ರೆ ಸರಿಯಾಗಿ ನಿದ್ದೆ ಬರ್ತಿರಲಿಲ್ಲ. ಈ ಥಿಯೇಟರ್‌ನ ಕತ್ತಲೆ, ಸ್ವಚ್ಛ ವಾತಾವರಣದಲ್ಲಿ ಆರಾಮಾಗಿ ನಿದ್ದೆ ಮಾಡಬಹುದು' ಅಂತ ಅವರು ಹೇಳುತ್ತಾರೆ. ಚೀನಾದಲ್ಲಿ ಮಧ್ಯಾಹ್ನದ ನಿದ್ದೆ ಅನ್ನೋದು ದೈನಂದಿನ ಜೀವನದ ಒಂದು ಭಾಗ. 'ಚೈನಾ ಸ್ಲೀಪ್ ರಿಸರ್ಚ್ ಸೊಸೈಟಿ' ನಡೆಸಿದ ಸಮೀಕ್ಷೆಯ ಪ್ರಕಾರ, ಶೇ. 70ಕ್ಕಿಂತ ಹೆಚ್ಚು ಜನ ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮಧ್ಯಾಹ್ನ ನಿದ್ದೆ ಮಾಡಲು ಇಷ್ಟಪಡ್ತಾರೆ ಅಂತ ವರದಿ ಹೇಳುತ್ತೆ.