ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಬೆಕ್ಕು ಮತ್ತು ಕಿಂಗ್ ಕೋಬ್ರಾ ಮುಖಾಮುಖಿಯಾಗಿವೆ. ತನ್ನ ಮೇಲೆ ದಾಳಿ ಮಾಡಿದ ಕೋಬ್ರಾದಿಂದ ಬೆಕ್ಕು ತನ್ನ ಚುರುಕುತನ ಮತ್ತು ಮಿಂಚಿನ ವೇಗದಿಂದ ತಪ್ಪಿಸಿಕೊಳ್ಳುತ್ತದೆ. ಈ ರೋಚಕ ಹೋರಾಟದಲ್ಲಿ ಬೆಕ್ಕಿನ ಧೈರ್ಯ ಮತ್ತು ಪ್ರತಿಕ್ರಿಯಿಸುವ ವೇಗ ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಬೆಕ್ಕನ್ನು ಅತ್ಯಂತ ಜಾಣ ಹಾಗೂ ಚುರುಕಾದ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಬೆಕ್ಕಿನ ರಿಯಾಕ್ಷನ್ ಟೈಮ್ (ಪ್ರತಿಕ್ರಿಯಿಸುವ ವೇಗ) ಅತ್ಯಂತ ವೇಗವಾಗಿರುತ್ತದೆ ಎಂದು ನಂಬಲಾಗಿದೆ. ಎದುರಾಳಿಯಾಗಿ ಸಾಕ್ಷಾತ್ ವಿಷಕಾರಿ 'ಕಿಂಗ್ ಕೋಬ್ರಾ' ನಿಂತಾಗ, ಆ ಹೋರಾಟ ಅಷ್ಟು ಸುಲಭವಲ್ಲ. ಒಂದು ಕಡೆ ತೀಕ್ಷ್ಣ ಬುದ್ಧಿ, ಮತ್ತೊಂದೆಡೆ ಮಾರಣಾಂತಿಕ ವಿಷದ ದಾಳಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಕ್ಕು ಮತ್ತು ಕಿಂಗ್ ಕೋಬ್ರಾ ನಡುವಿನ ಮುಖಾಮುಖಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಕಾಳಗದಲ್ಲಿ ಕೊನೆಗೆ ಏನಾಯಿತು ಎಂಬುದು ಸಾಕಷ್ಟು ಕುತೂಹಲಕಾರಿಯಾಗಿದೆ.
ಬೆಕ್ಕು vs ಕಿಂಗ್ ಕೋಬ್ರಾ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬಯಲು ಪ್ರದೇಶವೊಂದರಲ್ಲಿ ಬೆಕ್ಕು ಮತ್ತು ಕಿಂಗ್ ಕೋಬ್ರಾ ಪರಸ್ಪರ ಎದುರಾಗುತ್ತವೆ. ಸಾಮಾನ್ಯವಾಗಿ ಕಿಂಗ್ ಕೋಬ್ರಾ ಅತ್ಯಂತ ಶಕ್ತಿಶಾಲಿ ಮತ್ತು ಮಾರಣಾಂತಿಕ ಹಾವಾಗಿರುವುದರಿಂದ ಈ ಹೋರಾಟ ಏಕಪಕ್ಷೀಯವಾಗಿರುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ಬೆಕ್ಕು ನೋಡಲು ಸಾಧಾರಣ ಪ್ರಾಣಿಯಂತೆ ಕಂಡರೂ ಅದರ ಚುರುಕುತನ ಮತ್ತು ರಿಯಾಕ್ಷನ್ ಟೈಮ್ ಹಾವಿಗಿಂತಲೂ ಅದ್ಭುತವಾಗಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ವಿಡಿಯೋದಲ್ಲಿ ಕೋಬ್ರಾ ತನ್ನ ಹೆಡೆಯನ್ನು ಬಿಚ್ಚಿ ಬೆಕ್ಕನ್ನು ಹೆದರಿಸಲು ಪ್ರಯತ್ನಿಸುತ್ತದೆ. ಆದರೆ ಬೆಕ್ಕು ಕಿಂಚಿತ್ತೂ ಹೆದರದೆ ಹಾವಿನ ಎದುರು ಅತ್ಯಂತ ಧೈರ್ಯದಿಂದ ಕುಳಿತುಕೊಳ್ಳುತ್ತದೆ.
ಕೋಬ್ರಾ ಇದ್ದಕ್ಕಿದ್ದಂತೆ ಬೆಕ್ಕಿನ ಮೇಲೆ ದಾಳಿ ಮಾಡಲು ಮುನ್ನುಗ್ಗುತ್ತದೆ. ಆದರೆ ಬೆಕ್ಕು ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ (ಮಿಂಚಿನ ವೇಗದಲ್ಲಿ) ಹಿಂದಕ್ಕೆ ಸರಿದು ಹಾವಿನ ದಾಳಿಯಿಂದ ಅತ್ಯಂತ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಬೆಕ್ಕಿನ ಈ ಅಪ್ರತಿಮ ವೇಗವನ್ನು ನೋಡಿ ಒಂದು ಕ್ಷಣ ಕೋಬ್ರಾ ದಂಗಾಗಿ ಹಿಂದೆ ಸರಿಯುತ್ತದೆ. ನಂತರ ಬೆಕ್ಕು ತನ್ನ ಪಂಜದಿಂದ ಹಾವಿಗೆ ಅಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡುತ್ತದೆ. ಇದರೊಂದಿಗೆ ಈ ರೋಚಕ ಹೋರಾಟ ಅಲ್ಲಿಗೆ ಕೊನೆಗೊಳ್ಳುತ್ತದೆ.
ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಖಾತೆಯಾದ @gharkekalesh ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಬೆಕ್ಕಿನ ಸಾಹಸಕ್ಕೆ ಮನಸೋತು ಹಲವು ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಕಿಂಗ್ ಕೋಬ್ರಾಕ್ಕಿಂತ ಬೆಕ್ಕುಗಳೇ ಹೆಚ್ಚು ವೇಗವಾಗಿವೆ ಎಂದು ಬರೆದರೆ, ಮತ್ತೊಬ್ಬರು ಬೆಕ್ಕುಗಳನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ಕಿಂಗ್ ಕೋಬ್ರಾ ಅಪಾಯಕಾರಿ ಹೌದು, ಆದರೆ ಬೆಕ್ಕಿಗಿಂತ ಚುರುಕಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

