ಶಾಲೆಗೆ ಹೋಗಲು ಬೆಳಿಗ್ಗೆ ಏಳದ ಬಾಲಕನೊಬ್ಬನನ್ನು ಎಬ್ಬಿಸಲು ಅಪ್ಪನೊಬ್ಬ ಬ್ಯಾಂಡ್ ಸೆಟ್ ತರಿಸಿರುವ ತಮಾಷೆಯ ವಿಡಿಯೋ ವೈರಲ್ ಆಗುತ್ತಿದೆ. ಬ್ಯಾಂಡ್ ಬಾರಿಸಿದರೂ ಏಳದ ಈ ಬಾಲಕನನ್ನು ನೋಡಿ ನೆಟ್ಟಿಗರು ಕುಂಭಕರ್ಣ, ಕಳ್ಳ ಪುಟಾಣಿ ಎಂದು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಮನೆಗಳಲ್ಲಿ ಇದೇ ಕಥೆ ಎನ್ನಿ, ಶಾಲೆಗೆ ಹೋಗುವಾಗ ಬೆಳಿಗ್ಗೆ ಮಕ್ಕಳನ್ನು ಎಬ್ಬಿಸುವುದೇ ಅಪ್ಪ-ಅಮ್ಮಂದಿರಿಗೆ ದೊಡ್ಡ ತಲೆನೋವು. ಅದರಲ್ಲಿಯೂ ಈಗಂತೂ ಬೆಳಿಗ್ಗೆ 7-8 ಗಂಟೆಗೆಲ್ಲಾ ಶಾಲೆ. ಆಗಿನ್ನೂ ಈ ಪುಟಾಣಿಗಳಿಗೆ ಮಧ್ಯರಾತ್ರಿ. ಆಗಲೇ ಅವರನ್ನು ಎಬ್ಬಿಸಿ, ಅವರಿಗೆ ಸ್ನಾನ ಮಾಡಿಸಿ, ಅವರ ಬಾಯಲ್ಲಿ ಒಂದಿಷ್ಟು ತಿನಿಸು ತುರುಕಿ, ಟಿಫನ್​ ಬಾಕ್ಸ್​ ಕೊಟ್ಟು, ಶಾಲೆಯ ಗಾಡಿಯೋ, ಬಸ್ಸೋ ಇನ್ನಾವುದೇ ವಾಹನದಲ್ಲಿ ಮಕ್ಕಳನ್ನು ಕಳುಹಿಸುವುದರೊಳಗೆ ಅಪ್ಪ-ಅಮ್ಮಂದಿರ (ಅದರಲ್ಲಿಯೂ ಹೆಚ್ಚಾಗಿ ಅಮ್ಮಂದಿರ) ಜೀವ ಅರ್ಧ ಹೋಗಿರುತ್ತದೆ. ಇದು ಪಾಲಕರ ಪಾಡಾದರೆ, ಇನ್ನು ಮಕ್ಕಳು ಪಾಪ ಇಷ್ಟೆಲ್ಲಾ ಮಾಡುತ್ತಿದ್ದರೂ ಅವರು ನಿದ್ದೆ ಮಾತ್ರ ಹೋಗಿರುವುದಿಲ್ಲ ನಿದ್ದೆಯ ಮಂಪರಿನಲ್ಲಿಯೇ ಇರುತ್ತಾರೆ.

ಇದೀಗ, ಬಾಲಕನೊಬ್ಬನನ್ನು ಏಳಿಸಲು ಅಪ್ಪನೊಬ್ಬ ಬ್ಯಾಂಡ್ ಸೆಟ್​ ತರಿಸಿರುವ ಫನ್ನಿ ವಿಡಿಯೋ ವೈರಲ್​ ಆಗುತ್ತಿದೆ. Chandigarh MEDIA ಎನ್ನುವ ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ಬಾಲಕನೊಬ್ಬ ಗಡದ್ದಾಗಿ ಮಲಗಿದ್ದಾನೆ. ಅವನ ಶಾಲೆಗೆ ಲೇಟ್​ ಆಗಿರುವ ಕಾರಣದಿಂದ ಪಾಲಕರು ಎಷ್ಟೇ ಏಳಿಸಿದರೂ ಅವನು ಏಳಲೇ ಇಲ್ಲ. ಎಲ್ಲಾ ಪ್ರಯತ್ನ ಮಾಡಿ ಸೋತಾಗ ಅಪ್ಪ ಬ್ಯಾಂಡ್​ಸೆಟ್​ ಅವರನ್ನು ಕರೆಸಿದ್ದಾರೆ.

ಬ್ಯಾಂಡ್​ಸೆಟ್​ಗೂ ಜಗ್ಗಲಿಲ್ಲ!

ಹಾಗೆಂದ ಮಾತ್ರ ಈ ಬಾಲಕ ಎದ್ದು ಬಿಡ್ತಾನೆ. ಬ್ಯಾಂಡ್​ಸೆಟ್​ ಬಿಟ್ಟು ಭೂಕಂಪ ಆದ್ರೂ ನಾನು ಏಳಲ್ಲ ಎಂದು ಪಣ ತೊಟ್ಟು ಮಲಗಿದ್ದಾನೆ ಕಂದ. ನಂತರ ಆತನನ್ನು ಬಡಿದು ಎಬ್ಬಿಸಿದರೂ ಅವನಿಗೆ ಈ ಲೋಕದ ಪರಿವೇ ಇಲ್ಲ. ಇದರ ವಿಡಿಯೋ ವೈರಲ್​ ಆಗುತ್ತಲೇ ತಮಾಷೆಗಳ ಕಮೆಂಟ್ಸ್​ ತುಂಬಿ ಹೋಗಿದೆ. ಹಲವರು ಹಲವು ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ.

ಫನ್ನಿ ಕಮೆಂಟ್ಸ್​

ಕೆಲವರು ಈತ ಕುಂಭಕರ್ಣನ ವಂಶದವ ಇರಬೇಕು ಎಂದಿದ್ದರೆ, ಮತ್ತೆ ಕೆಲವರು ಈತ ಕಳ್ಳ ಪುಟಾಣಿ. ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣ, ನಿದ್ದೆ ಮಾಡಿದಂತೆ ನಾಟಕ ಮಾಡುತ್ತಿದ್ದಾನೆ ಎಂದು ತಮಾಷೆಮಾಡುತ್ತಿದ್ದಾರೆ. ಮತ್ತೆ ಹಲವರು, ತಮ್ಮ ಮನೆಯಲ್ಲಿ ಮಕ್ಕಳನ್ನು ಎಬ್ಬಿಸಲು ತಾವು ಪಡುವ ಕಷ್ಟಗಳ ಬಗ್ಗೆ ಕಮೆಂಟ್ಸ್​ನಲ್ಲಿ ಹೇಳುತ್ತಿದ್ದಾರೆ. ಮತ್ತೆ ಕೆಲವರು ದೊಡ್ಡವರಾದ ಮೇಲೆ ನಿದ್ದೆಗಾಗಿ ಒದ್ದಾಡಬೇಕು, ಈ ವಯಸ್ಸಿನಲ್ಲಿ ಆದರೂ ಚೆನ್ನಾಗಿ ನಿದ್ದೆ ಮಾಡಲಿ ಬಿಡಿ, ಆತನನ್ನು ಎಬ್ಬಿಸಬೇಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾಲಕ ಈಗ ಸೋಷಿಯಲ್​ ಮೀಡಿಯಾ ಸ್ಟಾರ್​ ಆಗಿದ್ದಾನೆ. ಅವನಿಗೂ ತಾನಿಷ್ಟು ವೈರಲ್ ಆಗುತ್ತೇನೆಂದು ಗೊತ್ತೇ ಇಲ್ಲ. ಸ್ವಲ್ಪ ವರ್ಷ ಬಿಟ್ಟು ಈ ವಿಡಿಯೋ ನೋಡಿದಾಗ ಅವನೇ ಸುಸ್ತಾಗಿ ಹೋಗೋದು ಗ್ಯಾರೆಂಟಿ.