ಬಿಹಾರದಲ್ಲಿ 24 ವರ್ಷದ ಯುವಕನೊಬ್ಬ ತನ್ನ ಅತ್ತೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮಾವನಿಂದ ಥಳಿತಕ್ಕೊಳಗಾಗಿ ಬಲವಂತವಾಗಿ ಅತ್ತೆಯನ್ನೇ ಮದುವೆಯಾದ ಘಟನೆ ನಡೆದಿದೆ.
ತನ್ನ ಮಾವನ ಹೆಂಡ್ತಿ ಅತ್ತೆಯ ಜೊತೆಯೇ ಪ್ರೇಮ ಸಂಬಂಧ ಇರಿಸಿಕೊಂಡಿದ್ದ 24ರ ಹರೆಯದ ಯುವಕನಿಗೆ ಚೆನ್ನಾಗಿ ಬಾರಿಸಿ ಅತ್ತೆಯ ಜೊತೆಯೇ ಮದುವೆ ಮಾಡಿಸಿದಂತಹ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಕಿಡ್ನ್ಯಾಪ್ ಮಾಡಿ ಹಲ್ಲೆ
ಜುಲೈ 2ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಥಿಲೇಶ್ ಕುಮಾರ್ ಮುಖಿಯಾ ಎಂಬಾತ ಆತನ ಮಾವ ಶಿವಚಂದ್ರ ಮುಖಿಯಾ ಅವರ ಮನೆಯಲ್ಲಿಯೇ ಅತ್ತೆ ಜೊತೆ ಸಿಕ್ಕಿಬಿದ್ದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಾವ ಅತನನ್ನು ಮನೆಯಿಂದಲೇ ಕಿಡ್ನಾಪ್ ಮಾಡಿಸಿ ಆತನ ಮೇಲೆ ಹಲ್ಲೆ ಮಾಡಿ ಬಳಿಕ ಆತನ ಅತ್ತೆಯ ಜೊತೆಯೇ ಮದುವೆ ಮಾಡಿಸಿದ್ದಾನೆ. ಭೀಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್ಚಾಪುರ ವಾರ್ಡ್‌ನ ನಂಬರ್ 8ರಲ್ಲಿ ಈ ಘಟನೆ ನಡೆದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಥಿಲೇಶ್‌ನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಚಂದ್ರನ ಪತ್ನಿ ರೀತಾ ದೇವಿ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ತನ್ನ ಮಗನ ಮೇಲೆ ಗುಂಪೊಂದು ಹಲ್ಲೆ ಮಾಡಿದೆ ಎಂದು ಮಿಥಿಲೇಶ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಚಂದ್ರ ಹಾಗೂ ರೀತಾ ದಂಪತಿಗೆ 4 ವರ್ಷದ ಗಂಡು ಮಗನಿದ್ದಾನೆ.
ರಾಡ್‌ನಿಂದ ಹಲ್ಲೆ ಮಾಡುತ್ತಿರುವ ವೀಡಿಯೋ ವೈರಲ್
ಈಗ ಮಿಥಿಲೇಶ್‌ಗೆ ಗುಂಪೊಂದು ರಾಡ್‌ನಿಂದ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇವಲ ಮಿಥಿಲೇಶ್‌ಗೆ ಮಾತ್ರ ಈ ಗುಂಪು ಹಲ್ಲೆ ಮಾಡಿಲ್ಲ, ಈ ಸ್ಥಳಕ್ಕೆ ರೀತಾಳನ್ನು ಕೂಡ ಕರೆಸಿಕೊಂಡು ಬಂದ ಗುಂಪು ಆಕೆಯ ಮೇಲೆಯೂ ಹಲ್ಲೆ ಮಾಡಿದ್ದಾರೆ. ನಂತರ ರೀತಾಳ ಹಣೆಗೆ ಸಿಂಧೂರ ಇಟ್ಟು ಮದುವೆಯಾಗುವಂತೆ ಆತನಿಗೆ ಒತ್ತಾಯಿಸಿದ್ದಾರೆ. ಹೀಗಾಗಿ ಆತ ಒತ್ತಾಯಪೂರ್ವಕವಾಗಿ ರೀತಾಳ ಹಣೆಗೆ ಸಿಂಧೂರ ಇಟ್ಟಿದ್ದಾನೆ.
ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದರೆ ನಿಮಗೂ ಬಾರಿಸಲಾಗುವುದು ಎಂದು ಗುಂಪು ತನಗೆ ಬೆದರಿಕೆಯೊಡ್ಡಿದೆ ಎಂದು ಮಿಥಿಲೇಶ್ ತಂದೆ ರಾಮಚಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಮಗನ ಮೇಲೆ ಹೀಗೆ ಗುಂಪು ಹಲ್ಲೆ ಮಾಡಿರುವುದರಿಂದ ಆತನಿಗೆ ಗಂಭೀರ ಗಾಯಗಳಾಗಿವೆ. ಆತನ ಬೆನ್ನು, ಕತ್ತು, ಕೈಗಳಲ್ಲಿ ಗಾಯಗಳಾಗಿವೆ ಎಂದು ಮಿಥಿಲೇಶ್ ತಂದೆ ಆರೋಪಿಸಿದ್ದಾರೆ.
ಆದರೆ ಈ ಘಟನೆ ಬಗ್ಗೆ ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಭೀಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೀವ್‌ಚಾಪುರ ನಿವಾಸಿಗಳಾದ ರಾಜ ಕುಮಾರ್, ವಿಕಾಸ್ ಮುಖಿಯಾ, ಶಿವಚಂದ್ರ ಮುಖಿಯಾ, ಸೂರಜ್ ಮುಖಿಯಾ, ಪ್ರದೀಪ್ ಠಾಕೂರ್, ಸುರೇಶ್ ಮುಖಿಯಾ ಹಾಗೂ ಬೆಲ್‌ಗಂಜ್ ನಿವಾಸಿಗಳಾದ ರಾಹುಲ್ ಕುಮಾರ್ ಮತ್ತು ಸಜನ್ ಸಾಹ್ನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಭೀಮ್‌ಪುರ ಠಾಣಾಧಿಕಾರಿ (ಎಸ್‌ಎಚ್‌ಒ) ಮಿಥ್ಲೇಶ್ ಪಾಂಡೆ ತಿಳಿಸಿದ್ದಾರೆ.
ಮಿಥಿಲೇಶ್ ಸ್ಥಿತಿ ಗಂಭೀರ
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಿಥ್ಲೇಶ್ ಅವರನ್ನು ಆರಂಭದಲ್ಲಿ ನರ್ಪತ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನಂತರ ಪರಿಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಅರಾರಿಯಾ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
