ಬೆಂಗಳೂರಿನ ಜಾನ್ಸಿ ಬಿವಿ, ಬಡತನ ಮತ್ತು ಕೋವಿಡ್ ಸಂಕಷ್ಟಗಳನ್ನು ಮೆಟ್ಟಿ, ಪತಿಯ ಬೆಂಬಲದಿಂದ ಯಶಸ್ವಿ ಆಟೋ ಚಾಲಕಿಯಾದರು. ತಮ್ಮಂತೆ ಇತರ ಮಹಿಳೆಯರು ಕಷ್ಟಪಡಬಾರದೆಂದು, ಅವರು 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನಾ ತರಬೇತಿ ನೀಡಿದ್ದಾರೆ. ಈ ಮೂಲಕ ಅವರನ್ನು ಸ್ವಾವಲಂಬನೆ ಹಾದಿ ಇಲ್ಲಿದೆ..
ಬೆಂಗಳೂರು: 'ಕಷ್ಟಗಳು ಬಂದಾಗ ಕುಗ್ಗಿ ಹೋಗದೆ, ಅದನ್ನೇ ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಖಂಡಿತ ಒಲಿಯುತ್ತದೆ' ಎಂಬುದಕ್ಕೆ ಬೆಂಗಳೂರಿನ ಈ ಮಹಿಳೆಯೇ ಜೀವಂತ ಉದಾಹರಣೆ. ಬಡತನ, ತಂದೆಯ ಅಗಲಿಕೆ, ಹಾಗೂ ಕೋವಿಡ್ ಸೃಷ್ಟಿಸಿದ ಆರ್ಥಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಆಟೋ ಚಾಲಕಿಯಾದ ಜಾನ್ಸಿ ಬಿವಿ (Jansy BV), ಇಂದು ನೂರಾರು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ತಾನು ಅನುಭವಿಸಿದ ಕಷ್ಟಗಳು ಇತರ ಮಹಿಳೆಯರಿಗೆ ಬರಬಾರದೆಂದು, ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನೆ ತರಬೇತಿ ನೀಡಿ ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದ್ದಾರೆ.
ಬಲ್ಯದಲ್ಲೇ ಎದುರಾಯಿತು ಬಡತನದ ನೆರಳು:
ಬೆಂಗಳೂರಿನ ಬ್ಯಾನರ್‌ಘಟ್ಟ ಮೂಲದ ಜಾನ್ಸಿ ಅವರಿಗೆ ಕೇವಲ 10 ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡರು. ಲಾರಿ ಚಾಲಕರಾಗಿದ್ದ ತಂದೆಯ ಅಗಲಿಕೆಯ ನಂತರ, ತಾಯಿಯೇ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಯಿತು. ತಂದೆಯಂತೆ ಡ್ರೈವಿಂಗ್ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸೆ ಜಾನ್ಸಿಗೆ ಸಣ್ಣ ವಯಸ್ಸಿನಲ್ಲೇ ಇತ್ತು. ಆದರೆ ಕುಟುಂಬದ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ, ಅವರು ಆರಂಭದಲ್ಲಿ ಟೈಲರಿಂಗ್ (ದರ್ಜಿ) ವೃತ್ತಿಯನ್ನು ಆಯ್ದುಕೊಳ್ಳಬೇಕಾಯಿತು.
ಕೋವಿಡ್ ತಂದಿಟ್ಟ ಸಂಕಷ್ಟ ಹಾಗೂ ಪತಿಯ ಬೆಂಬಲ:
ಜಾನ್ಸಿ ಅವರ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿದ್ದು ಆಟೋ ಉದ್ಯಮ ನಡೆಸುತ್ತಿದ್ದ ವಿನೋದ್ ಎಂಬುವವರನ್ನು ಮದುವೆಯಾದ ನಂತರ. ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ವಿನೋದ್ ಅವರ ಆಟೋ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿತು. ವಾಹನಕ್ಕಾಗಿ ಮಾಡಿದ್ದ ಸಾಲ ತೀರಿಸಲು ದಂಪತಿ ಚಹಾ (Tea Stall) ಮಾರಾಟ ಮಾಡಲು ಪ್ರಾರಂಭಿಸಿದರು. ಈ ಕಷ್ಟದ ಸಮಯದಲ್ಲಿ, ಪತಿ ವಿನೋದ್ ಅವರು ಜಾನ್ಸಿಗೆ ಸ್ವತಃ ಆಟೋ ಚಲಾಯಿಸುವಂತೆ ಸಲಹೆ ನೀಡಿದರು. ಆರಂಭದಲ್ಲಿ ಸಂಬಂಧಿಕರು ಹಾಗೂ ಸಮಾಜದಿಂದ ಅಪಸ್ವರಗಳು ಕೇಳಿಬಂದರೂ, ಪತಿ ವಿನೋದ್ ಜಾನ್ಸಿ ಬೆನ್ನಿಗೆ ನಿಂತರು. ಆಟೋ ಚಾಲನೆಯನ್ನು ಕಲಿಸಿಕೊಟ್ಟರು.
ಆಟೋ ಚಾಲಕಿಯಾಗಿ ಯಶಸ್ವಿ ಪಯಣ:
ಕೆಲವು ತಿಂಗಳ ತರಬೇತಿಯ ನಂತರ, ಜಾನ್ಸಿ ವೃತ್ತಿಪರವಾಗಿ ಆಟೋ ಓಡಿಸಲು ಪ್ರಾರಂಭಿಸಿದರು. ತಮ್ಮ ಮೊದಲ ದಿನದ ಕಾಯಕದಲ್ಲೇ 700 ರೂಪಾಯಿ ಸಂಪಾದಿಸಿ ಆತ್ಮವಿಶ್ವಾಸ ಗಳಿಸಿಕೊಂಡರು. ತದನಂತರ ಕಮರ್ಷಿಯಲ್ ಚಾಲನಾ ಪರವಾನಗಿ (Commercial DL) ಪಡೆದು 'ಉಬರ್' (Uber) ಸಂಸ್ಥೆಯೊಂದಿಗೆ ಜೋಡಿಸಿಕೊಂಡರು. 'ನನ್ನ ಪತಿಯನ್ನು ಮದುವೆಯಾಗಿದ್ದೇ ನನ್ನ ಜೀವನದ ಅತ್ಯುತ್ತಮ ನಿರ್ಧಾರ. ಅವರು ನನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ ಮತ್ತು ಬೆಂಬಲಿಸುತ್ತಾರೆ' ಎಂದು ಜಾನ್ಸಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮಹಿಳೆಯರಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿ:
2021ರಲ್ಲಿ ಇಂದಿರಾನಗರ ಆರ್‌ಟಿಒ (RTO) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಾನ್ಸಿಗೆ ಒಂದು ವಿಷಯ ಸ್ಪಷ್ಟವಾಯಿತು. ದೇಶದಲ್ಲಿ ಎಷ್ಟೋ ಮಹಿಳೆಯರಿಗೆ ದುಡಿದು ಬದುಕುವ ಆಸೆ ಇದೆಯಾದರೂ, ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಅಭಾವವಿದೆ ಎಂಬುದನ್ನು ಅವರು ಅರಿತರು. ತಕ್ಷಣವೇ ಕಾರ್ಯಪ್ರವೃತ್ತರಾದ ಜಾನ್ಸಿ, ಅಂತಹ ಮಹಿಳೆಯರಿಗೆ ಉಚಿತವಾಗಿ ಆಟೋ ಡ್ರೈವಿಂಗ್ ಕಲಿಸಲು ನಿರ್ಧರಿಸಿದರು.
ಇಲ್ಲಿಯವರೆಗೆ ಬೆಂಗಳೂರಿನ ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಜಾನ್ಸಿ ಉಚಿತವಾಗಿ ಚಾಲನಾ ತರಬೇತಿ ನೀಡಿದ್ದಾರೆ. "ನಾಲ್ಕು ಬಾಗಿಲ ಮಧ್ಯೆ ಬಂಧಿಯಾಗಿರುವ ಅಥವಾ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಮಹಿಳೆಯರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ಅವರು ಸ್ವಾವಲಂಬಿಗಳಾಗಿ ಸಂಪಾದನೆ ಮಾಡುವುದನ್ನು ನೋಡಿದಾಗ ನನಗೆ ಹೆಮ್ಮೆ ಎನಿಸುತ್ತದೆ" ಎನ್ನುತ್ತಾರೆ ಈ ಸಾಧಕಿ. ಜಾನ್ಸಿ ಅವರ ಈ ನಿಸ್ವಾರ್ಥ ಸೇವೆ ಹಾಗೂ ಶ್ರಮ ಇಡೀ ಸಮಾಜಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುವಂತಿದೆ.

