ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ವಿಮಾನ ನಿಲ್ದಾಣ ತಲುಪಲು ಹಿಡಿಯುವ ಸಮಯವು, ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಹಾರುವ ಸಮಯಕ್ಕಿಂತ (2 ಗಂಟೆ 20 ನಿಮಿಷ) ಹೆಚ್ಚಾಗಿದೆ ಎಂದು ಪ್ರಯಾಣಿಕ ಮನೀಶ್ ಕುಮಾರ್ ಸಿಂಗ್ ಅಳಲು ತೋಡಿಕೊಂಡಿದ್ದಾರೆ. ಕಳಪೆ ನಗರ ಯೋಜನೆಯಿಂದಾಗಿ ಜನರ ಸಮಯ ವ್ಯರ್ಥವಾಗುತ್ತಿರುವುದನ್ನು ಪ್ರಶ್ನಿಸಿ ಅವರು ಮಾಡಿದ ವಿಡಿಯೋ ಸದ್ಯ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಗತ್ಪ್ರಸಿದ್ಧ. ಆದರೆ ಇಲ್ಲೊಬ್ಬ ಪ್ರಯಾಣಿಕ ತನಗಾದ ಅನುಭವವನ್ನು ಹಂಚಿಕೊಳ್ಳುವ ಮೂಲಕ ನಗರದ ಕಳಪೆ ಸಂಪರ್ಕ ಮತ್ತು ಮೂಲಸೌಕರ್ಯ ಯೋಜನೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಪ್ರಯಾಣಿಸುತ್ತಿದ್ದ ಮನೀಶ್ ಕುಮಾರ್ ಸಿಂಗ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಭಾರಿ ಸಂಚಲನ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲ್ಕತ್ತಾಗೆ ಹಾರುವುದಕ್ಕಿಂತ ಹೆಚ್‌ಎಸ್‌ಆರ್‌ನಿಂದ ಏರ್‌ಪೋರ್ಟ್‌ ತಲುಪುವುದೇ ದೊಡ್ಡ ಸಾಹಸ!

ಮನೀಶ್ ಕುಮಾರ್ ಅವರು ಕೋಲ್ಕತ್ತಾಗೆ ವಿಮಾನ ಹಿಡಿಯಲು ಕಾರಿನಲ್ಲಿ ತೆರಳುವಾಗ ಈ ವಿಡಿಯೋ ಮಾಡಿದ್ದಾರೆ. "ನಮ್ಮ ದೇಶದಲ್ಲಿ ಕಳಪೆ ನಗರ ಯೋಜನೆಯಿಂದಾಗಿ ಜನರು ತಮ್ಮ ಎಷ್ಟು ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯ ಮತ್ತು ತಮಾಷೆ ಎನಿಸಬಹುದು" ಎನ್ನುತ್ತಾ ಅವರು ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಎರಡೂವರೆಯಿಂದ ಮೂರು ಗಂಟೆಗಳ ಕಾಲ ಬೇಕಾಗುತ್ತದೆ. ಆದರೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಇರುವ ವಿಮಾನ ಪ್ರಯಾಣದ ಅವಧಿ ಕೇವಲ 2 ಗಂಟೆ 20 ನಿಮಿಷಗಳು! "ವಾಸ್ತವವಾಗಿ, ನಾನು ಸುಮಾರು 2,000 ಕಿಲೋಮೀಟರ್ ದೂರದಲ್ಲಿರುವ ಕೋಲ್ಕತ್ತಾಗೆ ಹಾರಲು ತೆಗೆದುಕೊಳ್ಳುವ ಸಮಯಕ್ಕಿಂತ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ಇಲ್ಲಿನ ವಿಮಾನ ನಿಲ್ದಾಣ ತಲುಪಲು ನನಗೆ ಹೆಚ್ಚು ಸಮಯ ಹಿಡಿಯಿತು" ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಜಾಗತಿಕ ನಗರಗಳಿಗೆ ಹೋಲಿಕೆ:

ನ್ಯೂಯಾರ್ಕ್ ಮತ್ತು ಚಿಕಾಗೋದಂತಹ ಅಂತರರಾಷ್ಟ್ರೀಯ ಮಹಾನಗರಗಳನ್ನು ಉದಾಹರಿಸಿದ ಅವರು, "ಅವು ವಿಸ್ತೀರ್ಣದಲ್ಲಿ ಎಷ್ಟು ದೊಡ್ಡದಾಗಿದ್ದರೂ ಸಹ, ಅಲ್ಲಿನ ಪರಿಣಾಮಕಾರಿ ಸಂಪರ್ಕದಿಂದಾಗಿ ಜನರು ನಗರದ ಯಾವುದೇ ಮೂಲೆಯಿಂದ ಕೇವಲ 30 ರಿಂದ 40 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ತಲುಪಬಹುದು. ಆದರೆ ನಾವು ಸಾರಿಗೆ ಮೂಲಸೌಕರ್ಯದಲ್ಲಿ ತೀರಾ ಹಿಂದೆ ಬಿದ್ದಿದ್ದೇವೆ" ಎಂದಿದ್ದಾರೆ.

ನಗರ ಯೋಜನೆ ಬಗ್ಗೆ ಗಂಭೀರ ಪ್ರಶ್ನೆಗಳು:

ವಿಮಾನ ನಿಲ್ದಾಣವನ್ನು ನಿರ್ಮಿಸುವ ಮೊದಲೇ ಅಲ್ಲಿಗೆ ತಲುಪುವ ರಸ್ತೆ ಮತ್ತು ಸಾರಿಗೆ ಸಂಪರ್ಕವನ್ನು ಯೋಜಿಸಬೇಕು. ಅದನ್ನು ಬಿಟ್ಟು ವಿಮಾನ ನಿಲ್ದಾಣ ಕಟ್ಟಿದ ನಂತರ ಜನರು ಅಲ್ಲಿಗೆ ಹೇಗೆ ಹೋಗುತ್ತಾರೆ ಎಂದು ಯೋಚಿಸುವುದು ಮೂರ್ಖತನ. "ಅಭಿವೃದ್ಧಿಯ ಹೆಸರಿನಲ್ಲಿ ನಾವು ನಿಖರವಾಗಿ ಏನನ್ನು ನಿರ್ಮಿಸುತ್ತಿದ್ದೇವೆ? ನಮ್ಮ ನಗರ ಯೋಜನೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ. ನಗರಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು, ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

View post on Instagram