ಬೆಂಗಳೂರಿನ ಜಯನಗರದಲ್ಲಿ ರ‍್ಯಾಪಿಡೋ ಚಾಲಕನೊಬ್ಬ ಯುವತಿಗೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ರ‍್ಯಾಪಿಡೋ ಚಾಲಕನ ಹಲ್ಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಹೊಸ ತಿರುವು ನೀಡಿವೆ.
ಬೆಂಗಳೂರು (ಜೂ. 16): ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಹೋಗುತ್ತಿದ್ದ ಯುವತಿ ಶ್ರೇಯಾ ಮೇಲೆ ರ‍್ಯಾಪಿಡೋ ಬೈಕ್ ಚಾಲಕ ಸುಹಾಸ್ ಹಲ್ಲೆ ಮಾಡಿದ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಸಿಸಿಟಿವಿ ದೃಶ್ಯಗಳು ಸಂಪೂರ್ಣ ಘಟನೆಗೆ ಹೊಸ ಆಯಾಮ ನೀಡಿವೆ.
ಬೆಂಗಳೂರಿನ ಜಯನಗರದ ಬಾಟಾ ಶೋ ರೂಮ್ ಬಳಿ ಜೂ.13ರಂದು ನಡೆದ ಘಟನೆಯ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರ‍್ಯಾಪಿಡೋ ಬುಕ್ ಮಾಡಿಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್ ಟ್ಯಾಕ್ಸಿ ಚಾಲಕ ಹಲ್ಲೆ ಮಾಡಿದ್ದು, ಒಂದು ಹೊಡೆತಕ್ಕೆ ಯುವತಿ ರಸ್ತೆಗೆ ಮುಗ್ಗರಿಸಿ ಬೀಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲಿಯೇ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರ‍್ಯಾಪಿಡೋ ಬೈಕ್ ಚಾಲಕನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದರು. ಒಮ್ಮ ಮಹಿಳೆ ಮೇಲೆ ಸಾರ್ವಜನಿಕವಾಗಿ ಹಲ್ಲೆ ಆಗಿದ್ದರೂ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಎನ್‌ಸಿಆರ್ ಮಾಡಿ ಕೈಬಿಟ್ಟಿದ್ದಕ್ಕೆ ಜನರೇ ಪೊಲೀಸರ ನಡೆಗೆ ಛೀಮಾರಿ ಹಾಕಿದ್ದರು.
ಇದಾದ ನಂತರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ, ಹೇಳಿಕೆ ಪಡೆದುಕೊಳ್ಳಲು ಮುಂದಾಗಿದ್ದರು. ಆಗ ಯುವತಿ ರ‍್ಯಾಪಿಡೋ ಚಾಲಕ ನನಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದು, ನಾನು ಈ ಘಟನೆಯನ್ನು ನಿರ್ಲಕ್ಷ್ಯ ಮಾಡಿದ್ದೆನು. ಆದರೆ, ವಿಡಿಯೋ ವೈರಲ್ ಆಗಿರುವ ಬೆನ್ನಲ್ಲಿಯೇ ನಾನು ಸ್ನೇಹಿತರ ಒತ್ತಾಯದ ಮೇರೆಗೆ 3 ದಿನಗಳ ಬಳಿಕ ದೂರು ನೀಡುತ್ತಿರುವುದಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಮೇಲೆ ದೂರು ನೀಡಿದ್ದಳು. ನಾನು ಬುಕಿಂಗ್ ಮಾಡಿದ ಜಾಗಕ್ಕೆ ಮ್ಯಾಪ್‌ನಲ್ಲಿ ತೋರಿಸಿದ ಮಾರ್ಗದಲ್ಲಿ ಹೋಗದೇ ರಸ್ತೆ ನಿಯಮಗಳನ್ನು ಮೀರಿ ರ‍್ಯಾಶ್ ಡ್ರೈವಿಂಗ್ ಮೂಲಕ ಹೋಗುತ್ತಿದ್ದನು. ಇದರಿಂದ ನನಗೆ ಸುರಕ್ಷತೆ ಇಲ್ಲವೆಂದು ಎನಿಸಿ ಬೈಕ್‌ನಿಂದ ಇಳಿದಾಗ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರು.
ಹಲ್ಲೆಗೊಳಗಾದ ಯುವತಿ ಶ್ರೇಯಾ ದೂರು ನೀಡಿದ ಬೆನ್ನಲ್ಲಿಯೇ ಎಫ್‌ಐಆರ್ ದಾಖಲಿಸಿಕೊಂಡ ಜಯನಗರ ಠಾಣೆ ಪೊಲೀಸರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಆತನನ್ನು ವಿಚಾರಣೆ ಮಾಡಿದಾಗ ಶ್ರೇಯಾ ಎಂಬ ಯುವತಿ ಬಿಟಿಎಂ ಲೇಔಟ್‌ನಿಂದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಳು. ಪ್ರಯಾಣದ ನಡುವೆ ತಾನು ಸೂಚಿಸಿದ ದಾರಿಯಲ್ಲಿ ಹೋಗಿಲ್ಲ ಎಂಬ ಆಕ್ರೋಶದಲ್ಲಿ ಯುವತಿ ಮೊದಲಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ನಂತರ ತನ್ನ ಲಂಚ್ ಬಾಕ್ಸ್‌ನಿಂದ ಹಲ್ಲೆ ಮಾಡಿದಳು ಎಂದು ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ವಿಡಿಯೋದಲ್ಲಿ ಬಯಲಾದ ದೃಶ್ಯ:
ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು CCTV ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಯುವತಿ ಶ್ರೇಯಾ ಮೊದಲಿಗೆ ಬೈಕ್‌ನಿಂದ ಇಳಿದು, ಚಾಲಕ ಸುಹಾಸ್‌ನ ಬೆನ್ನಿಗೆ ಎರಡು ಬಾರಿ ಹೊಡೆದಿರುವುದು ಸ್ಪಷ್ಟವಾಗಿದೆ. ಇಷ್ಟಕ್ಕೆ ಸುಮ್ಮನಾಗದೇ ಬೈಕ್‌ನಿಂದ ಇಳಿದ ನಂತರವೂ ಒಮ್ಮೆ ಯುವಕನ ಕೆನ್ನೆಗೆ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡ ಚಾಲಕ ಸುಹಾಸ್ ಕೂಡ ಸಿಟ್ಟಿನಲ್ಲಿ ಒಂದು ಹೊಡೆತ ಕೊಟ್ಟಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆರಂಭದ ದೃಶ್ಯಗಳಿಲ್ಲದೇ ಚಾಲಕ ಹಲ್ಲೆ ಮಾಡುವ ವಿಡಿಯೋದ ಭಾಗ ಮಾತ್ರ ವೈರಲ್ ಆಗಿತ್ತು.
ಮೊದಲು FIR ದಾಖಲಾಗಿರಲಿಲ್ಲ:
ಪ್ರಾರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ NCR (Non Cognizable Report) ಮಾತ್ರ ದಾಖಲಿಸಲಾಗಿತ್ತು. ಆದರೆ ವಿಡಿಯೋ ವೈರಲ್ ಆದ ನಂತರ, ಶ್ರೇಯಾ ತನ್ನ ಸ್ನೇಹಿತರ ಒತ್ತಾಯದ ಮೇರೆಗೆ ತಾಣಕ್ಕೆ ಹೋಗಿ ಅಧಿಕೃತ ದೂರು ನೀಡಿದ್ದಾರೆ. ಇದೀಗ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಸುಹಾಸ್ ವಿರುದ್ಧ IPC ಸೆಕ್ಷನ್ 352 (ಹಲ್ಲೆ), 115(2), ಮತ್ತು 79 ಅಡಿ FIR ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು ಮಾತನಾಡಿ, 'ಸದ್ಯ ಚಾಲಕ ಸುಹಾಸ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಶ್ರೇಯಾ ಅವರ ದೂರು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಇಬ್ಬರನ್ನೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದ್ದಾರೆ.
