ಜಯನಗರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಚಾಲಕನ ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಪೊಲೀಸರು NCR ದಾಖಲಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಜೂನ್ 16): ನಗರದ ನಡು ರಸ್ತೆಯಲ್ಲಿ, ರ‍್ಯಾಪಿಡೋ ಬೈಕ್ ಟ್ಯಾಕ್ಸಿ (Rapido Bike Taxi service) ಚಾಲಕನೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿದ ಭಯಾನಕ ಘಟನೆ ಇದೀಗ ಬೆಳಕಿಗೆ ಬಂದಿದೆ. ಜೂನ್ 14ರಂದು ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ, ಜಯನಗರದ ಬಾಟ್ ಶೋರೂಂ ಬಳಿ ಈ ದುರಂತ ಸಂಭವಿಸಿದ್ದು, ಶ್ರೇಯ ಎಂಬ ಮಹಿಳೆ ಹಲ್ಲೆಗೆ ಒಳಗಾಗಿದ್ದಾಳೆ.
ಘಟನೆ ಹೀಗಿದೆ:
ಶ್ರೇಯ ಅವರು ಆ ದಿನದಂದು ರ‍್ಯಾಪಿಡೋ ಸೇವೆ ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನು ಅತಿ ವೇಗವಾಗಿ (ರ್ಯಾಶ್ ಡ್ರೈವಿಂಗ್) ವಾಹನ ಚಲಾಯಿಸುತ್ತಿದ್ದುದರಿಂದ, ಶ್ರೇಯ ಅವರು ಅಪಾಯ ಭೀತಿಯಿಂದ ಚಾಲಕನನ್ನು ಪ್ರಶ್ನಿಸಿದರು. ಇದರಿಂದ ಬೇಸತ್ತ ಚಾಲಕ, ಮಾತಿಗೆ ಮಾತು ಬೆಳೆಸಿ ಜಗಳ ಆರಂಭಿಸಿದನು. ಜಗಳದ ಮಧ್ಯೆ ಆಕ್ರೋಶಗೊಂಡ ಚಾಲಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿಯೇ ಶ್ರೇಯ ಮೇಲೆ ಹಲ್ಲೆ ಮಾಡಿದ ಚಾಲಕ, ಸ್ಥಳದಿಂದ ಪರಾರಿಯಾದನು ಎಂದು ಮಾಹಿತಿ.
NCR ದಾಖಲಿಸಿ ಪೊಲೀಸರ ನಿರ್ಲಕ್ಷ್ಯ:
ಇನ್ನು ಈ ಗಂಭೀರ ಘಟನೆ ನಡೆದ ನಂತರವೂ ಮಹಿಳೆ ಹೋಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ವಿಡಿಯೋ ಸಮೇತ ಮಾಹಿತಿ ಪಡೆದುಕೊಂಡ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ತೀವ್ರ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ಶ್ರೇಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಮಹಿಳೆಯ ಮೇಲೆ ಹಲ್ಲೆ ಆಗುತ್ತಿದೆ. ಆದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ NCR ಎಂದು ಬರೆದು ಕೈತೊಳೆಯುತ್ತಾರೆ ಎಂದರೆ ಮಹಿಳೆಯರ ಸುರಕ್ಷತೆ ಯಾವ ಮಟ್ಟದಲ್ಲಿದೆ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಮಹಿಳಾ ಸುರಕ್ಷತೆಗೆ ಗಂಭೀರ ಪ್ರಶ್ನೆ:
ಈ ಘಟನೆ ಇಂತಹ ಆಪ್ ಆಧಾರಿತ ಸಾರಿಗೆ ಸೇವೆಗಳ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ. ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿರುವಾಗ, ಈ ರೀತಿಯ ನಿರ್ಲಕ್ಷ್ಯವು ಆತಂಕಕಾರಿಯಾಗಿದೆ.
ಸಾರಾಂಶ:
- – ಹಲ್ಲೆ ದಿನಾಂಕ: ಜೂನ್ 14, ಬೆಳಿಗ್ಗೆ 10 ಗಂಟೆ
- – ಸ್ಥಳ: ಜಯನಗರ ಬಾಟ್ ಶೋರೂಂ ಬಳಿ
- – ಹಲ್ಲೆಗೊಳಗಾದವರು: ಶ್ರೇಯ
- – ಅಪರಾಧಿ: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ
- – ಪೊಲೀಸರ ಕ್ರಮ: NCR ದಾಖಲಿಸಿ ಬಂಧನವಿಲ್ಲ
ವಿಡಿಯೋ ಲಿಂಕ್ ಇಲ್ಲಿದೆ:
ರಾಜ್ಯಾದ್ಯಂತ ರ‍್ಯಾಪಿಡೋ ಸೇವೆ ಸ್ಥಗಿತ:
ಇನ್ನು ರಾಜ್ಯಾದ್ಯಂತ ಹೈಕೋರ್ಟ್ ಆದೇಶದ ಮೇರೆಗೆ ಇಂದಿನಂದ ರ‍್ಯಾಪಿಡೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಗಿಗ್ ವರ್ಕರ್ಸ್ ಆಗಿ ಕೆಲಸ ಮಾಡುತ್ತಿರುವ ರ‍್ಯಾಪಿಡೋ ಚಾಲಕರಿಗೆ ಕೆಲವು ಸಾರಿಗೆ ನಿಯಮಗಳನ್ನು ಜಾರಿಗೆ ಮಾಡಬೇಕು ಎಂದು ಸರ್ಕಾರಕ್ಕೆ ಆದೇಶ ಮಾಡಿದೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ನಿಯಮಗಳನ್ನು ಜಾರಿ ಮಾಡದ ಹಿನ್ನೆಲೆಯಲ್ಲಿ ರ‍್ಯಾಪಿಡೋ ಸೇವೆಯನ್ನು ಜೂ.16ರಿಂದ ಸ್ಥಗಿತ ಮಾಡಲಾಗಿದೆ. ಮುಂದಿನ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿಕೆ ಮಾಡಲಾಗಿದೆ. ಆಗ ಸರ್ಕಾರದಿಂದ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಿದಲ್ಲಿ ಅಥವಾ ಈ ಬಗ್ಗೆ ಭರವಸೆ ನೀಡಿದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.
