ಒಂದು ಪತ್ನಿ ಸಂಭಾಳಿಸೋದೇ ಕಷ್ಟ ಅಂತ ಮದುವೆಯಾದವರು ಗೋಳಾಡ್ತಿದ್ದರೆ ಇಲ್ಲೊಬ್ಬ 21 ಮದುವೆಯಾಗಿದ್ದಾನಂತೆ. ಆತ ಯಾರು, ಇಷ್ಟೊಂದು ಮದುವೆ ಆಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಒಂದು ಮದುವೆಯಾಗೋದೇ ಕಷ್ಟ. ವಧು ಹುಡುಕಾಟ ನಡೆಸಿ ಸುಸ್ತಾಗಿರುವ ಅನೇಕರು ನಮ್ಮಲ್ಲಿದ್ದಾರೆ. ದೊಡ್ಡ ಹುದ್ದೆಯಲ್ಲಿದ್ದು, ಬೇಕಾದಷ್ಟು ಆಸ್ತಿ ಇದ್ರೂ ಮಕ್ಕಳಿಗೆ ಮದುವೆ ಆಗ್ತಿಲ್ಲ ಎನ್ನುವ ಕೊರಗು ಅಪ್ಪ – ಅಮ್ಮನಿಗೆ ಕಾಡ್ತಿದೆ. ಹೀಗಿರುವಾಗ ಭಿಕ್ಷುಕನೊಬ್ಬ 21 ಮದುವೆಯಾಗಿದ್ದಾನೆ ಎಂಬ ಸುದ್ದಿ ಎಲ್ಲರನ್ನು ಅಚ್ಚರಿಗೊಳಿಸಿದೆ.
21 ಮದುವೆಯಾದ ಭಿಕ್ಷುಕ !
ಬಾಂಗ್ಲಾದೇಶದ 35 ವರ್ಷದ ಭಿಕ್ಷುಕನೊಬ್ಬನ ವಿಚಿತ್ರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೊರು ಮಿಯಾ ಎಂಬ ವ್ಯಕ್ತಿ ತಮಗೆ ಬರೋಬ್ಬರಿ 21 ಪತ್ನಿಯರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ತಮ್ಮ ಎಲ್ಲ ಪತ್ನಿಯರ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಕೂಡ ಕಷ್ಟವಾಗುತ್ತದೆ ಎಂದಿದ್ದಾನೆ. ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೊರು ಮಿಯಾ, ತಾನು ಮಹಿಳೆಯರನ್ನು ಹುಡುಕಿಕೊಂಡು ಹೋಗಿ ಮದುವೆಯಾಗಿಲ್ಲ ಎಂದಿದ್ದಾನೆ. ಮಹಿಳೆಯರೇ ತಮ್ಮ ಬಳಿ ಬಂದು ಮದುವೆಯಾಗುವಂತೆ ಪ್ರಸ್ತಾಪ ಮಾಡುತ್ತಿದ್ದರು ಎಂದಿದ್ದಾನೆ.
ಹುಡುಗಿಯರೇ ಬರ್ತಾರಂತೆ
ನನ್ನಲ್ಲಿ ಅವರಿಗೆ ಏನು ಇಷ್ಟವಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರಿಸಬೇಕು. ಮಹಿಳೆಯರೇ ನನ್ನ ಬಳಿ ಬಂದು ನಾವು ಮದುವೆಯಾಗೋಣ ಎಂದು ಹೇಳುತ್ತಾರೆ ಎಂದು ಮೊರು ಮಿಯಾ ಹೇಳಿದ್ದಾನೆ. ಮದುವೆಯ ಪ್ರಸ್ತಾಪಗಳನ್ನು ತಿರಸ್ಕರಿಸಲು ಸಾಧ್ಯವಾಗದೆ ಒಪ್ಪಿಕೊಂಡೆ ಎಂದೂ ಮಿಯಾ ಹೇಳಿಕೊಂಡಿದ್ದಾನೆ. ಹೀಗೆ ಒಂದರ ಹಿಂದೆ ಒಂದರಂತೆ ಮದುವೆಯಾಗುತ್ತಾ ತಮ್ಮ ಪತ್ನಿಯರ ಸಂಖ್ಯೆ 21ಕ್ಕೆ ತಲುಪಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾನೆ.
21 ಹೆಂಡತಿಯರನ್ನು ಹೊಂದಿದ್ದರೂ, ಮೊರು ಒಂದು ಕೋಣೆಯ ಗುಡಿಸಲಿನಲ್ಲಿ ಸರಳ ಜೀವನವನ್ನು ನಡೆಸುತ್ತಿದ್ದಾನೆ. ವರದಿಗಳ ಪ್ರಕಾರ, ಭಿಕ್ಷಾಟನೆಯೇ ಅವನ ಮುಖ್ಯ ಆದಾಯದ ಮೂಲವಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ಅವನು ನಿಯಮಿತ ದಿನಚರಿಯನ್ನು ಅನುಸರಿಸುತ್ತಾನೆ. ಇದರಲ್ಲಿ ಒಬ್ಬ ಹೆಂಡತಿ ಅವನೊಂದಿಗೆ ಭಿಕ್ಷೆ ಬೇಡಲು ಹೋಗುತ್ತಾಳೆ ಮತ್ತು ಉಳಿದವರು ಪಾಳಿಯಂತೆ ಕೆಲಸ ಮಾಡ್ತಾರೆ.
ಪತ್ನಿಯರ ಹೆಸರು
ಇನ್ನು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮದುವೆಯಾಗಿರುವ ವ್ಯಕ್ತಿಗೆ ತನ್ನ ಪತ್ನಿಯರ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗುತ್ತದೆಯಂತೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಿಯಾ, ಕೆಲವೇ ಕೆಲವು ಪತ್ನಿಯರ ಹೆಸರನ್ನು ಹೇಳಿದ್ದಾನೆ. ಶೀಲಾ, ನರ್ಗಿಸ್, ಸೆಲೆನಾ, ಆಲಿಯಾ, ತಾರಾ, ಜ್ಯೋತ್ಸ್ನಾ, ರಾಬಿಯಾ ಮತ್ತು ಪಾರುಲ್ ಎಂದಿರುವ ಮಿಯಾ, ಎಲ್ಲರ ಹೆಸರು ನೆನಪಿಲ್ಲ ಎಂದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ವಿಚಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.


