ಕೃಷ್ಣಾಪುರ ಮತ್ತು ಗರಕಹಳ್ಳಿ ಗ್ರಾಮಗಳಲ್ಲಿ ಚಿರತೆ ದಾಳಿ ನಡೆಸಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕೋಳಿ ಫಾರಂಗೆ ನುಗ್ಗಿ 300ಕ್ಕೂ ಹೆಚ್ಚು ಕೋಳಿಗಳನ್ನು ತಿಂದಿರುವ ಚಿರತೆ, ಮಾಲೀಕ ಹಾಗೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೂ ದಾಳಿ ಮಾಡಿದೆ. ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ದಕ್ಷಿಣ (ಅ.08): ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆಗಳ ಉಪಟಳ ಮಿತಿಮೀರಿದ್ದು, ಒಂದೇ ದಿನ ಎರಡು ಕಡೆ ಪ್ರತ್ಯಕ್ಷವಾಗಿ ದಾಳಿ ನಡೆಸುವ ಮೂಲಕ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭೀತಿ ಹುಟ್ಟಿಸಿದೆ. ಕೋಳಿ ಫಾರಂಗೆ ನುಗ್ಗಿ ನೂರಾರು ಕೋಳಿಗಳನ್ನು ತಿಂದು ಹಾಕಿರುವ ಚಿರತೆ, ಮಾಲೀಕನ ಮೇಲೂ ದಾಳಿಗೆ ಯತ್ನಿಸಿದೆ. ಮತ್ತೊಂದೆಡೆ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ.
ಕೋಳಿ ಫಾರಂಗೆ ನುಗ್ಗಿ 300 ನಾಟಿ ಕೋಳಿಗಳ ಭಕ್ಷಣೆ:
ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಿರಂಜನ್ ಎಂಬುವವರಿಗೆ ಸೇರಿದ ನಾಟಿ ಕೋಳಿ ಫಾರಂಗೆ ರಾತ್ರಿ ವೇಳೆ ನುಗ್ಗಿದ ಚಿರತೆ ಭೀಕರ ದಾಳಿ ನಡೆಸಿದೆ. ಫಾರಂನಲ್ಲಿದ್ದ ಸುಮಾರು 300ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಕೊಂದು ತಿಂದು ಹಾಕಿದೆ. ಬುಧವಾರ ಮುಂಜಾನೆ ಮಾಲೀಕ ನಿರಂಜನ್ ಅವರು ಫಾರಂ ಬಳಿ ಬಂದಾಗ ಕಣ್ಣೆದುರೇ ಚಿರತೆ ಪ್ರತ್ಯಕ್ಷವಾಗಿದೆ. ತಕ್ಷಣ ಚಿರತೆ ನಿರಂಜನ್ ಅವರ ಮೇಲೂ ಜಿಗಿದು ದಾಳಿಗೆ ಮುಂದಾಗಿದೆ. ಸಮಯಪ್ರಜ್ಞೆ ಮೆರೆದ ನಿರಂಜನ್ ಅವರು ಸ್ಥಳದಿಂದ ಕಿರುಚುತ್ತಾ ಓಡಿ ಹೋಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೋಳಿಗಳು ನಾಶವಾಗಿದ್ದು, ನಿರಂಜನ್ ಅವರಿಗೆ ಭಾರಿ ಆರ್ಥಿಕ ನಷ್ಟ ಸಂಭವಿಸಿದೆ.
ಗರಕಹಳ್ಳಿಯಲ್ಲಿ ಹೊಲದಲ್ಲಿದ್ದ ಯುವಕನ ಮೇಲೆ ದಾಳಿ:
ಇದೇ ತಾಲೂಕಿನ ಗರಕಹಳ್ಳಿ ಗ್ರಾಮದಲ್ಲೂ ಚಿರತೆಯ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೇಲೆ ಏಕಾಏಕಿ ಎರಗಿದ ಚಿರತೆ ದಾಳಿ ಮಾಡಿದೆ. ಯುವಕ ಪ್ರತಿರೋಧ ಒಡ್ಡಿದ ಪರಿಣಾಮ ಕೈಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳು ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ – ಬೋನು ಇಡಲು ಆಗ್ರಹ:
ಒಂದೇ ದಿನ ತಾಲೂಕಿನ ಎರಡು ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಗಳಲ್ಲಿ ಜನರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹೆದರುವ ವಾತಾವರಣ ನಿರ್ಮಾಣವಾಗಿದೆ. 'ಕೂಡಲೇ ಅರಣ್ಯ ಇಲಾಖೆ ಸ್ಥಳದಲ್ಲಿ ಬೋನು ಇಟ್ಟು ನರಭಕ್ಷಕ ಚಿರತೆಯನ್ನು ಸೆರೆಹಿಡಿಯಬೇಕು, ಇಲ್ಲವಾದರೆ ಜನರ ಜೀವಕ್ಕೆ ರಕ್ಷಣೆ ಇಲ್ಲದಂತಾಗುತ್ತದೆ' ಎಂದು ಆಕ್ರೋಶಗೊಂಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


