ರಸ್ತೆ ಬದಿ ತರಕಾರಿ ಮಾರಾಟಗಾರರಿಂದ ತರಕಾರಿ ಪಡೆಯುತ್ತಿರುವ ಆನೆ ಮರಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಪರಿವಾರದೊಂದಿಗೆ ಸಾಗುತ್ತಿರುವ ಆನೆಯೊಂದು ದಾರಿ ಮಧ್ಯೆ ರಸ್ತೆ ಬದಿ ತರಕಾರಿ ಮಾರಾಟ ಮಾಡುವವನ ಗಾಡಿಯ ಬಳಿ ಬಂದು ಆತನಿಂದ ತರಕಾರಿಯೊಂದನ್ನು ಪಡೆದುಕೊಂಡು ಮುಂದೆ ಸಾಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಆನೆಮರಿಯ ಮುದ್ದುತನಕ್ಕೆ ಮನಸೋತಿದ್ದಾರೆ. ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿ ಸುಸಾಂತ್ ನಂದಾ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು 50 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಆನೆ ಮರಿಯ ಮುದ್ದಾದ ವೀಡಿಯೋ ವೈರಲ್
ವೀಡಿಯೋದಲ್ಲಿ ಮಾವುತರು ಹಾಗೂ ತನ್ನ ತಾಯಿ ಹಾಗೂ ಹಿಂಡಿನ 3 ರಿಂದ 4 ಆನೆಗಳೊಂದಿಗೆ ಸಾಗುತ್ತಿರುವ ಪುಟ್ಟ ಆನೆ ಮರಿ, ರಸ್ತೆ ಬದಿಯಲ್ಲಿ ತಳ್ಳುಗಾಡಿಯೊಂದನ್ನು ಹಣ್ಣು ತರಕಾರಿಯ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಬಳಿ ಸೀದಾ ಓಡಿ ಹೋಗಿದೆ. ಅಲ್ಲಿದ್ದ ಮಹಿಳೆಯೊಬ್ಬರು ಬಳಿಕ ಒಂದು ತರಕಾರಿಯನ್ನು ತೆಗೆದು ಆನೆ ಮರಿಗೆ ನೀಡಿದ್ದಾರೆ. ಈ ವೇಳೆ ತಾಯಿ ಆನೆ ಸೊಂಡಿಲನ್ನು ಉದ್ದ ಮಾಡಿ ಮರಿಯನ್ನು ತನ್ನತ್ತ ಎಳೆದುಕೊಳ್ಳಲು ನೋಡಿದರೆ ಅತ್ತ ಮಾಲೀಕ ಮರಿಗಾಗಿ ತಿರುತಿರುಗಿ ನೋಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ತರಕಾರಿ ಗಾಡಿಯ ಬಳಿ ಒಂದು ತರಕಾರಿಯನ್ನು ತೆಗೆದುಕೊಂಡು ಅಲ್ಲಿಂದ ತನ್ನ ತಾಯಿಯ ಬಳಿ ಓಡುತ್ತಾ ಹೋಗುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಸುಸಾಂತ್ ನಂದಾ ಹಂಚಿಕೊಂಡ ವೀಡಿಯೋ
ವೀಡಿಯೋವನ್ನು ಹಂಚಿಕೊಂಡ ಸುಸಾಂತ್ ನಂದಾ ಅವರು ಆನೆಮರಿಯನ್ನು ಚೋಟು ಎಂದು ಉಲ್ಲೇಖಿಸಿದ್ದು, ಚೋಟುವಿಗೆ ಕ್ವಿಕ್ ಸ್ನ್ಯಾಕ್ ಬ್ರೇಕ್ ಅಂದರೆ ಚೋಟುವಿಗೆ ತ್ವರಿತವಾದ ಉಪಹಾರಾ ವಿರಾಮ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 16 ಸೆಕೆಂಡ್‌ಗಳ ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಆನೆಮರಿಯ ಮುದ್ದಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿಆನೆ ಮರಿ ಕುತೂಹಲದಿಂದ ಹಣ್ಣುಗಳಿಂದ ತುಂಬಿದ ಬಂಡಿಯ ಬಳಿಗೆ ನಡೆದುಕೊಂಡು ಹೋಗಿದೆ. ಮೊದಲಿಗೆ ತರಕಾರಿ ಮಾರಾಟಗಾರ ಇದನ್ನು ನೋಡಿ ತುಸು ಗಾಬರಿಯಾಗಿ ಹಿಂಜರಿದ್ದಿದ್ದಾನೆ. ಆದರೆ ಅಲ್ಲೇ ಇದ್ದ ಮಹಿಳೆ ಅಲ್ಲಿದ್ದ ತರಕಾರಿಯೊಂದನ್ನು ಆನೆಮರಿಯ ಸೊಂಡಿಲಿನಲ್ಲಿ ಇಟ್ಟು ಚೋಟುವಿಗೆ ನೀಡಿದ್ದಾರೆ. ಚೋಟು ಅದನ್ನು ಸ್ವೀಕರಿಸಿ ಅಮ್ಮ ಹೋದ ದಾರಿಯಲ್ಲಿ ಬಹಳ ಬಿರುಸಿನಿಂದಲೇ ಹೆಜ್ಜೆ ಹಾಕಿದೆ.
ವೀಡಿಯೋ ನೋಡಿದ ಒಬ್ಬರು ಎಲ್ಲಾ ಆನೆಮರಿಗಳಿಗೆ ಎಲ್ಲರೂ ಯಾವುದೇ ವಿರೋಧವಿಲ್ಲದೇ ಯಾವುದೇ ಆಹಾರವನ್ನು ಯಾವ ಸಮಯದಲ್ಲಾದರೂ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ತುಂಬಾ ಮುದ್ದಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
