ಸಂತಾನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ವಡ್ಡೆ ಈರಣ್ಣ ಎಂಬ ವ್ಯಕ್ತಿಯು ಪವಿತ್ರ ನಂದಾದೀಪದಿಂದ ಸಿಗರೇಟ್ ಹಚ್ಚಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾನೆ. ಈ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾದ ದೇವಸ್ಥಾನವು ಕಿಡಿಗೇಡಿಗಳ ಅಸಭ್ಯ ವರ್ತನೆಯಿಂದ ಅಪವಿತ್ರಗೊಂಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಅದೋನಿಯಲ್ಲಿ ನಡೆದಿದೆ. ಇಲ್ಲಿನ ಪ್ರಸಿದ್ಧ ಸಂತಾನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಪವಿತ್ರವಾದ ನಂದಾದೀಪದಿಂದಲೇ ಸಿಗರೇಟ್ ಹಚ್ಚುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾನೆ.
ಘಟನೆಯ ವಿವರ:
ವರದಿಗಳ ಪ್ರಕಾರ, ವಡ್ಡೆ ಈರಣ್ಣ ಎಂಬ ವ್ಯಕ್ತಿ ದೇವಸ್ಥಾನದ ಒಳಗೆ ಪ್ರವೇಶಿಸಿ, ಗರ್ಭಗುಡಿಯ ಮುಂದಿದ್ದ ಪವಿತ್ರ ದೀಪದಿಂದ ಸಿಗರೇಟ್ ಹಚ್ಚಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ದೇವಸ್ಥಾನದ ಆವರಣದಲ್ಲಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಪಕ್ಕದಲ್ಲಿದ್ದ ಶಿವನ ದೇವಸ್ಥಾನಕ್ಕೂ ಅಪಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ಜೊತೆಯಲ್ಲಿದ್ದ ಸ್ನೇಹಿತರು ಈ ಸಂಪೂರ್ಣ ನೀಚ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೇವಾಲಯ ಹೊರಗೆ ಬರುತ್ತಲೇ ಆಗಿದ್ದೇನು?
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳುಗೆಡವಿದ ಈರಣ್ಣ ಮತ್ತು ಆತನಿಗೆ ಸಾಥ್ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ದೂರು ದಾಖಲಾಗಿ 24 ಗಂಟೆಗಳು ಕಳೆದರೂ ಪೊಲೀಸರು ಈವರೆಗೆ ಯಾವುದೇ ಅಧಿಕೃತ ಕ್ರಮ ಅಥವಾ ಬಂಧನ ಮಾಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ವಡ್ಡೆ ಈರಣ್ಣ ಎಂಬ ಯುವಕ ಸಿಗರೇಟ್ ಸೇದುತ್ತಾ ಹೊರಗೆ ನಗಾಡುತ್ತಾ ಬಂದು ಮೊಬೈಲ್ ವಿಡಿಯೋ ಮಾಡುವವರ ಮುಂದೆ ಕೈಮುಗಿದಿದ್ದಾನೆ. ಈತನು ಗ್ರಾಮದಿಂದ ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ.
ಪೊಲೀಸ್ ವಿಳಂಬಕ್ಕೆ ಆಕ್ಷೇಪ:
ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. 'ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು' ಎಂದು ಹಿಂದೂ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಸದ್ಯ ಅದೋನಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಡ ಹೆಚ್ಚುತ್ತಿದೆ.


