ಆನ್‌ಲೈನ್ ಶಾಪಿಂಗ್‌ನಲ್ಲಿ ರಿಟರ್ನ್ ಮಾಡಿದ ವಸ್ತುಗಳ ಬದಲು ಗುಜರಿ ವಸ್ತುಗಳನ್ನು ಇಟ್ಟು ವಂಚಿಸುತ್ತಿದ್ದ ಡೆಲಿವರಿ ಬಾಯ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದುಬಾರಿ ವಸ್ತುಗಳಿಂದ ಹಿಡಿದು ಸಣ್ಣಪುಟ್ಟ ವಸ್ತುಗಳವರೆಗೆ ಕದ್ದಿದ್ದ ಈತನ ವಿರುದ್ಧ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ದೆಹಲಿ (ಜೂ.17): ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿದ ನಂತರ ಸರಿಯಾದ ವಸ್ತುಗಳು ಬಾರದೇ ಇದ್ದಲ್ಲಿ ಅವುಗಳನ್ನು ವಾಪಸ್ ಮಾಡುತ್ತಾರೆ. ಆದರೆ, ಗ್ರಾಹಕರು ಹೀಗೆ ವಾಪಸ್ ಮಾಡಿದ ವಸ್ತುಗಳನ್ನು ಪಡೆದುಕೊಂಡು ಅಮೇಜಾನ್ ಗೋದಾಮಿಗೆ ಗುಜರಿ ವಸ್ತುಗಳನ್ನು ಇಟ್ಟು ಬರುತ್ತಿದ್ದ ಡೆಲಿವರಿ ಬಾಯ್ ಇದೀಗ ಅರೆಸ್ಟ್ ಆಗಿದ್ದಾನೆ. 

ಹೌದು, ಗ್ರಾಹಕರು ರಿಟರ್ನ್​ ಮಾಡಿದ್ದ ವಸ್ತುಗಳ ಬದಲು ಡೆಲಿವರಿ ಬಾಯ್​ ಖಾಲಿ ಪ್ಯಾಕೆಟ್​ಗಳನ್ನ ಅಮೆಜಾನ್​ ಗೋದಾಮಿಗೆ ಕಳಿಸುತ್ತಿದ್ದನು. ಚಪ್ಪಲಿಗಳಿಂದ ಹಿಡಿದು ದುಬಾರಿ ಎಲೆಕ್ಟ್ರಾನಿಕ್​ ವಸ್ತುಗಳವರೆಗೆ ಎಲ್ಲವನ್ನೂ ಕದಿಯುತ್ತಿದ್ದ 22 ವರ್ಷದ ಈತನನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಅಮೆಜಾನ್​ ಡೆಲಿವರಿ ಏಜೆಂಟ್​ನನ್ನ ಬಂಧಿಸಲಾಗಿದೆ.

ಸಣ್ಣಪುಟ್ಟ ನ್ಯೂನತೆ, ಸೈಜ್​ ಸರಿಯಿಲ್ಲದಿರುವುದು ಹೀಗೆ ಹಲವು ಕಾರಣಗಳಿಂದ ಗ್ರಾಹಕರು ರಿಟರ್ನ್​ ಮಾಡಿದ್ದ ವಸ್ತುಗಳನ್ನ ತೆಗೆದುಕೊಂಡು, ಅದರಲ್ಲಿರುವ ವಸ್ತುಗಳನ್ನ ತೆಗೆದು ಬೇರೆ ವಸ್ತುಗಳನ್ನ ಇಟ್ಟು ಗೋದಾಮಿಗೆ ಕಳಿಸುತ್ತಿದ್ದ. ಕಿಶನ್​ ಎಂಬಾತನನ್ನ ಬಂಧಿಸಲಾಗಿದೆ. ಸಣ್ಣಪುಟ್ಟ ವಸ್ತುಗಳನ್ನ ಕದ್ದಿದ್ದ ಈತ ದೊಡ್ಡ ಮೊತ್ತದ ವಸ್ತು ಕದಿಯೋಕೆ ಹೋಗಿ ಸಿಕ್ಕಿಬಿದ್ದಿದ್ದಾನೆ. ದುಬಾರಿಯ ಟ್ಯಾಬ್ಲೆಟ್​ ರಿಟರ್ನ್​ ಆಗಿದ್ದನ್ನ ಕದ್ದು ಬೇರೆ ವಸ್ತು ಇಟ್ಟು ಗೋದಾಮಿಗೆ ಕಳಿಸಿದ್ದ. ಇದನ್ನ ಗಮನಿಸಿದ ಗೋದಾಮಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೆಹಲಿಯ ದಾಬ್ರಿಯ ವಿಜಯ್​ ಎನ್​ಕ್ಲೇವ್​ನಲ್ಲಿ ಕಿಶನ್​ ವಾಸವಾಗಿದ್ದ. ಸಿಸಿಟಿವಿ ದೃಶ್ಯಾವಳಿ ಮತ್ತು ಫೋನ್​ ಟ್ರ್ಯಾಕ್​ ಮಾಡಿ ಉತ್ತಮ್​ ನಗರದ ರಾಜಾಪುರಿಯಲ್ಲಿ ಕಿಶನ್​ನನ್ನ ಬಂಧಿಸಲಾಗಿದೆ. 2023ರಿಂದಲೂ ಇದೇ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕದ್ದ ಟ್ಯಾಬ್ಲೆಟ್​ ಅನ್ನೂ ವಶಪಡಿಸಿಕೊಳ್ಳಲಾಗಿದೆ. ಮೂರು ದುಬಾರಿ ವಾಚ್​ಗಳು, ಎರಡು ಜೊಡಿ ಚಪ್ಪಲಿಗಳು, ಶೂಗಳು, 22 ಟೀ ಶರ್ಟ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. 38 ಬಾರಿ ಈತ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.