ಇಂದೋರ್‌ನ ಕುಟುಂಬವೊಂದರಲ್ಲಿ ಬರೋಬ್ಬರಿ 52 ವರ್ಷಗಳ ನಂತರ ಹೆಣ್ಣು ಮಗುವೊಂದು ಜನಿಸಿದೆ. ಐದು ದಶಕಗಳಿಂದ ಗಂಡು ಮಕ್ಕಳೇ ಜನಿಸುತ್ತಿದ್ದ ಈ ಕುಟುಂಬದಲ್ಲಿ, 'ಮಹಾಲಕ್ಷ್ಮಿ'ಯ ಆಗಮನದಿಂದ ಸಂಭ್ರಮ ಮನೆಮಾಡಿದ್ದು, ಆಸ್ಪತ್ರೆಯಲ್ಲಿ ಕುಟುಂಬಸ್ಥರು ಹಬ್ಬದಂತೆ ಆಚರಿಸಿದ ವಿಡಿಯೋ ವೈರಲ್ ಆಗಿದೆ.

ಇಂದೋರ್: ಹೆಣ್ಣು ಮಗು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿ ಮನೆಗೆ ಬಂದಂತೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಆದರೆ ಇಲ್ಲೊಂದು ಕುಟುಂಬ ಬರೋಬ್ಬರಿ 52 ವರ್ಷಗಳಿಂದ ಈ 'ಮಹಾಲಕ್ಷ್ಮಿ'ಯ ಆಗಮನಕ್ಕಾಗಿ ಕಾದು ಕುಳಿತಿತ್ತು. ಕೊನೆಗೂ ಐದು ದಶಕಗಳ ನಂತರ ಮನೆಯಲ್ಲಿ ಹೆಣ್ಣು ಮಗುವಿನ ಅಳು ಕೇಳಿಸಿದ್ದು, ಕುಟುಂಬಸ್ಥರ ಸಂಭ್ರಮ ಮುಗಿಲು ಮುಟ್ಟಿದೆ.

ಮಧ್ಯಪ್ರದೇಶದ ಇಂದೋರ್ ನಗರದ ಅಪರೂಪದ ಮತ್ತು ಭಾವುಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದೆ.

ಆಸ್ಪತ್ರೆಯಲ್ಲೇ ಹಬ್ಬದ ವಾತಾವರಣ

ಇಂದೋರ್‌ನ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಬೇಲಾ ಶಾ ಜೈನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ವೈದ್ಯರು ನವಜಾತ ಹೆಣ್ಣು ಮಗುವನ್ನು ಎತ್ತಿಕೊಂಡು ಆಪರೇಷನ್ ಥಿಯೇಟರ್‌ನಿಂದ ಹೊರಬರುತ್ತಿದ್ದಂತೆಯೇ ಹೊರಗೆ ಕಾಯುತ್ತಿದ್ದ ಕುಟುಂಬದ ಸದಸ್ಯರು ಹರ್ಷೋದ್ಗಾರ ಮಾಡುವುದನ್ನು ಕಾಣಬಹುದು. ಪ್ರತಿಯೊಬ್ಬರ ಮುಖದಲ್ಲೂ ಬೆಲೆಕಟ್ಟಲಾಗದ ನಗು ಮೂಡಿದ್ದು, ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮನೆಯ ಪುಟ್ಟ ರಾಜಕುಮಾರಿಯನ್ನು ಸ್ವಾಗತಿಸಿದ್ದಾರೆ.

52 ವರ್ಷಗಳ ಸುದೀರ್ಘ ಕಾಯುವಿಕೆ

ಕೆಲವೊಮ್ಮೆ ಪೀಳಿಗೆಗಳ ನಂತರ ಪವಾಡಗಳು ನಡೆಯುತ್ತವೆ. 52 ವರ್ಷಗಳಿಂದ ಈ ಕುಟುಂಬದಲ್ಲಿ ಕೇವಲ ಗಂಡು ಮಕ್ಕಳೇ ಜನಿಸುತ್ತಿದ್ದರು. ಈಗ ಈ ಕುಟುಂಬಕ್ಕೆ ಹೆಣ್ಣು ಮಗುವಿನ ಆಶೀರ್ವಾದ ಸಿಕ್ಕಿದೆ ಎಂದು ವೈದ್ಯರು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಕಳೆದ ಐದು ದಶಕಗಳಿಂದ ಈ ಮನೆಯಲ್ಲಿ ಹೆಣ್ಣು ಮಗುವೇ ಜನಿಸಿರಲಿಲ್ಲ!

ಮಗುವಿನ ತಾಯಿ ಮುಸ್ಕಾನ್ ಅಗರ್ವಾಲ್ ಅವರು ಈ ವಿಡಿಯೋಗೆ ಅತ್ಯಂತ ಪ್ರೀತಿಯ ಕಮೆಂಟ್ ಮಾಡಿದ್ದಾರೆ. ನಮ್ಮ ಈ ಸುಂದರ ಪ್ರಯಾಣದ ಭಾಗವಾದ ನಿಮಗೆ ಧನ್ಯವಾದಗಳು. ನೀವು ನಮಗೆ ಮತ್ತು ನಮ್ಮ ಕುಟುಂಬಕ್ಕೆ ಎಲ್ಲವೂ ಆಗಿದ್ದೀರಿ ಎಂದು ಅವರು ವೈದ್ಯರ ಸಹಕಾರವನ್ನು ಸ್ಮರಿಸಿದ್ದಾರೆ.

ನೆಟ್ಟಿಗರ ಮನಗೆದ್ದ 'ಮಹಾಲಕ್ಷ್ಮಿ'

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಈ ಸುಂದರ ಕ್ಷಣಕ್ಕೆ ಮನಸೋತಿದ್ದಾರೆ. ಹೆಣ್ಣು ಮಗು ಜನಿಸುವುದು ದೈವದ ವರ, ಮನೆಗೆ ನಿಜವಾದ ಮಹಾಲಕ್ಷ್ಮಿ ಬಂದಿದ್ದಾಳೆ, ಈ ಕುಟುಂಬದ ಸಂತೋಷ ಕಂಡು ನನ್ನ ಕಣ್ಣಲ್ಲೂ ನೀರು ಬಂತು ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯದ ನಡುವೆ, ಹೆಣ್ಣು ಮಗುವಿನ ಜನನವನ್ನು ಇಡೀ ಕುಟುಂಬವೇ ಹಬ್ಬದಂತೆ ಆಚರಿಸಿರುವುದು ಸಮಾಜಕ್ಕೆ ಒಂದು ಪಾಸಿಟಿವ್ ಸಂದೇಶ ನೀಡಿದೆ.

View post on Instagram