ವೃತ್ತಿಬದುಕಿನ ಸಂಕಷ್ಟಗಳಿಂದ ಕಂಗೆಟ್ಟಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತೊರೆದು ಕೆಕೆಆರ್ ಸೇರುವ ವದಂತಿಗಳ ನಡುವೆ, ಅವರ ಈ ದೈವಭಕ್ತಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ತಿರುಪತಿ: ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಕ್ರಿಕೆಟ್ ಮೈದಾನಕ್ಕಿಂತ ಹೆಚ್ಚಾಗಿ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ವೈಫಲ್ಯಗಳು, ಗಾಯದ ಸಮಸ್ಯೆ ಹಾಗೂ ವೃತ್ತಿಬದುಕಿನ ಸಂಕಷ್ಟಗಳಿಂದ ಕಂಗೆಟ್ಟಿರುವ ಪಾಂಡ್ಯ, ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸಂಕಷ್ಟಗಳ ನಿವಾರಣೆಗೆ ಮುಡಿ ಕೊಟ್ಟ ಪಾಂಡ್ಯ
ಕಳೆದ ಕೆಲವು ಸಮಯದಿಂದ ಪಾಂಡ್ಯ ಅವರಿಗೆ ಟೈಂ ಅಷ್ಟೇನೂ ಸರಿ ಇಲ್ಲ. ಮೈದಾನದಲ್ಲಿ ಫಾರ್ಮ್ ಕಳೆದುಕೊಂಡಿರುವುದು ಒಂದೆಡೆಯಾದರೆ, ಫಿಟ್ನೆಸ್ ಸಮಸ್ಯೆ ಮತ್ತೊಂದೆಡೆ ಅವರನ್ನು ಕಾಡುತ್ತಿದೆ. ಇದೀಗ ತಿರುಪತಿಗೆ ಭೇಟಿ ನೀಡಿದ ಹಾರ್ದಿಕ್, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ನನ್ನ ಎಲ್ಲ ಸಂಕಷ್ಟಗಳನ್ನು ನೀನೇ ನಿವಾರಿಸು ತಂದೆ ಎಂದು ತಿಮ್ಮಪ್ಪನಿಗೆ ಮುಡಿ ಕೊಟ್ಟು (ಕೂದಲು ಅರ್ಪಿಸಿ), ಹರಕೆ ತೀರಿಸಿದ್ದಾರೆ. ಈ ವೇಳೆ ಪಾಂಡ್ಯ ಅವರೊಂದಿಗೆ ಗೆಳತಿ ಎನ್ನಲಾದ ಮಹಿಕಾ ಶರ್ಮಾ ಕೂಡ ಸಾಥ್ ನೀಡಿರುವುದು ಕುತೂಹಲ ಮೂಡಿಸಿದೆ.
ಕೈಕೊಟ್ಟ ವೃತ್ತಿಬದುಕು
ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಮುಂದಿನ ನಾಯಕ ಎಂದೇ ಬಿಂಬಿತವಾಗಿದ್ದ ಪಾಂಡ್ಯಗೆ ಈಗ ಕಾಲ ಬದಲಾಗಿದೆ. ಟಿ20 ನಾಯಕತ್ವದ ರೇಸ್‌ನಲ್ಲಿದ್ದ ಅವರಿಗೆ ಇಂದು ಅದು ಗಗನ ಕುಸುಮವಾಗಿದೆ. ಪದೇ ಪದೇ ಕಾಡುತ್ತಿರುವ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸರಿಯಾಗಿ ಸ್ಥಾನ ಕೂಡ ಸಿಗುತ್ತಿಲ್ಲ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಕಳೆದ ಎರಡು ಸೀಸನ್‌ಗಳಲ್ಲಿ ತಂಡವು ಹೀನಾಯ ಪ್ರದರ್ಶನ ನೀಡಿದೆ. ಅಭಿಮಾನಿಗಳ ಕೆಂಗಣ್ಣಿಗೂ ಅವರು ಗುರಿಯಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಒಳಗಿನ ಆಂತರಿಕ ಕಲಹ ಹಾಗೂ ಸತತ ಸೋಲುಗಳಿಂದ ಬೇಸತ್ತಿರುವ ಹಾರ್ದಿಕ್ ಪಾಂಡ್ಯ, ಮುಂಬೈ ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ಅವರು ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ದೊಡ್ಡ ಬದಲಾವಣೆಗೂ ಮುನ್ನ ದೈವದ ಆಶೀರ್ವಾದ ಪಡೆಯಲು ಪಾಂಡ್ಯ ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಮತ್ತೆ ಹಳೆ ಪಾಂಡ್ಯ ಮರಳಿ ಬರಲಿ
ಹಾರ್ದಿಕ್ ಪಾಂಡ್ಯ ಅವರ ಈ ಭಕ್ತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಹಲವು ಮಂದಿ ನಿಮ್ಮನ್ನು ಬೆನ್ನಿಗೆ ಚೂರಿ ಹಾಕಿರಬಹುದು ಅಥವಾ ಕೈಕೊಟ್ಟಿರಬಹುದು, ಆದರೆ ನಿಮ್ಮ ಪ್ರತಿಭೆ ನಿಮ್ಮ ಕೈಬಿಡುವುದಿಲ್ಲ. ಸ್ಟ್ರಾಂಗ್ ಕಂಬ್ಯಾಕ್ ಮಾಡಿ ಎಂದು ಹಾರೈಸುತ್ತಿದ್ದಾರೆ. ತಿಮ್ಮಪ್ಪನ ಆಶೀರ್ವಾದದೊಂದಿಗೆ ಈ ಎಂವಿಪಿ (MVP) ಆಟಗಾರ ಮತ್ತೆ ಹಳೆಯ ಲಯಕ್ಕೆ ಮರಳುತ್ತಾರಾ? ಅವರ ಮುಂದಿನ ಹಾದಿ ಸುಗಮವಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.


