ಒಡಿಶಾದ ಸಮುದ್ರತೀರದಲ್ಲಿ 80 ವರ್ಷದ ವೃದ್ಧರೊಬ್ಬರು ತಮ್ಮ ಮಗನೊಂದಿಗೆ ಜೀವನದಲ್ಲಿ ಮೊದಲ ಬಾರಿಗೆ ಸಮುದ್ರವನ್ನು ಕಂಡರು. ನೀರಿಗೆ ಕಾಲಿಡುವ ಬದಲು, ಭಕ್ತಿಪೂರ್ವಕವಾಗಿ ಕೈಗಳಿಂದ ಸ್ಪರ್ಶಿಸಿ ನಮಸ್ಕರಿಸಿದ ಅವರ ಭಾವುಕ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಮನಗೆದ್ದಿದೆ.
ಒಡಿಶಾ (ಆ.3): 'ಆನಂದಕ್ಕೆ ವಯಸ್ಸಿನ ಮಿತಿಯಿಲ್ಲ, ಅದಕ್ಕಾಗಿ ಕೇವಲ ಸೂಕ್ತ ಸಮಯಕ್ಕಾಗಿ ಕಾಯಬೇಕಷ್ಟೇ...' ಎಂಬ ಮಾತನ್ನು ಸಾಬೀತುಪಡಿಸುವ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಹೃದಯ ಗೆದ್ದಿದೆ. 80 ವರ್ಷದ ವೃದ್ಧ ತಂದೆ ತಮ್ಮ ಜೀವಮಾನದಲ್ಲಿಯೇ ಮೊದಲ ಬಾರಿಗೆ ಸಮುದ್ರವನ್ನು ಕಂಡು, ಭಕ್ತಿಪೂರ್ವಕವಾಗಿ ನಮಸ್ಕರಿಸಿದ ದೃಶ್ಯ ಪ್ರತಿಯೊಬ್ಬರ ಮನಸ್ಸನ್ನು ಭಾವುಕ ಮಾಡಿದೆ.
ಮಗನೊಬ್ಬ ತನ್ನ 80 ವರ್ಷದ ತಂದೆಯನ್ನು ಒಡಿಶಾದ ಕೋನಾರ್ಕ್‌ನಲ್ಲಿರುವ ಪ್ರಸಿದ್ಧ ಚಂದ್ರಭಾಗ ಸಮುದ್ರದಂಡೆಗೆ (Chandrabhaga Beach) ಕರೆತಂದಿದ್ದಾನೆ. ಅಲ್ಲಿ ಆ ವೃದ್ಧರು ಮೊದಲ ಬಾರಿಗೆ ಬೃಹತ್ ಸಾಗರವನ್ನು ಕಣ್ತುಂಬಿಕೊಂಡಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋವನ್ನು 'ಶ್ರೀಕಾಂತ್ ಮತ್ತು ನೂಪುರ್' ಎಂಬ ದಂಪತಿ ತಮ್ಮ 'bhukkhad_musafir' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಲೆಗಳು ಹತ್ತಿರ ಬರುತ್ತಿದ್ದಂತೆ ವೃದ್ಧ ವ್ಯಕ್ತಿ ಪಾದಗಳಿಂದ ನೀರನ್ನು ಸ್ಪರ್ಶಿಸುವ ಬದಲು, ತಗ್ಗಿ ಬಾಗಿ ಕೈಗಳಿಂದ ನೀರನ್ನು ಮುಟ್ಟಿ, ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸುವ ಮೂಲಕ ಪ್ರಕೃತಿ ಮಾತೆಗೆ ಗೌರವ ಸಲ್ಲಿಸಿದರು. ಇದನ್ನು ಕಂಡ ಅವರ ಮಗ, "ನನ್ನ ಜೀವನದ ಅತ್ಯಂತ ಸುವರ್ಣ ಕ್ಷಣ ಇದು. ನನ್ನ ತಂದೆಗೆ ಈ ಅನುಭವವನ್ನು ನೀಡಲು ನನಗೆ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಚಿರಋಣಿಯಾಗಿದ್ದೇನೆ" ಎಂದು ಭಾವುಕರಾಗಿ ಹೇಳಿದ್ದಾರೆ. 80ನೇ ವಯಸ್ಸಿನಲ್ಲಿ ಅವರು ಮೊದಲ ಬಾರಿಗೆ ಸಮುದ್ರವನ್ನು ಕಂಡರು... ಅವರ ಮುಖದಲ್ಲಿ ಅರಳಿದ ನಗು ಮತ್ತು ಕಣ್ಣುಗಳಲ್ಲಿ ಕಂಡ ಬಾಲ್ಯದ ಉತ್ಸಾಹ ವರ್ಣನಾತೀತ. ಅಪ್ಪನ ಈ ಮುಗುಳುನಗೇ ನಮ್ಮ ಜೀವನದ ಅತಿದೊಡ್ಡ ಆಸ್ತಿ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಅಲೆ ಎಬ್ಬಿಸಿದ ವಿಡಿಯೋ
ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆದಾಗಿನಿಂದ ಈ ವಿಡಿಯೋ ಬರೋಬ್ಬರಿ 4.5 ಮಿಲಿಯನ್‌ಗೂ (45 ಲಕ್ಷಕ್ಕೂ ಹೆಚ್ಚು) ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೃದ್ಧ ವ್ಯಕ್ತಿಯ ಭಕ್ತಿ ಹಾಗೂ ಸರಳತೆಗೆ ಸಾವಿರಾರು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.'ಇಂದು ಸಮುದ್ರವೂ ಸಂಭ್ರಮಿಸುತ್ತಿರಬೇಕು! ಏಕೆಂದರೆ ಮೊದಲ ಬಾರಿಗೆ ಯಾರೋ ಒಬ್ಬರು ನನ್ನನ್ನು ಕಾಲುಗಳಿಂದ ತುಳಿಯದೆ, ಕೈಗಳಿಂದ ಸ್ಪರ್ಶಿಸಿ, ಭಕ್ತಿಯಿಂದ ಪ್ರಣಾಮ ಸಲ್ಲಿಸಿದರು ಎಂದು ಸಾಗರ ಭಾವಿಸಿರಬಹುದು' ಎಂದು ಒಬ್ಬ ಯೂಸರ್ ಕಮೆಂಟ್ ಮಾಡಿದ್ದಾರೆ.
"ಅವರ ಮೊದಲ ಪ್ರತಿಕ್ರಿಯೆಯೇ ನೀರನ್ನು ದೇವರೆಂದು ಭಾವಿಸಿ ನಮಸ್ಕರಿಸುವುದಾಗಿತ್ತು. ಅವರಿಗೆ ಪ್ರಕೃತಿಯ ಬೆಲೆ ಎಷ್ಟು ಅಮೂಲ್ಯ ಎಂಬುದು ತಿಳಿದಿದೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಇನ್ನು ಕೆಲವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. "ನಾನು ಕೂಡ 2021ರಲ್ಲಿ ನನ್ನ 64 ವರ್ಷದ ತಾಯಿಯನ್ನು ಮೊದಲ ಬಾರಿಗೆ ಸಮುದ್ರ ತೋರಿಸಲು ಕರೆದೊಯ್ದಿದ್ದೆ. ಅವರು ತುಂಬಾ ಸಂತೋಷಪಟ್ಟಿದ್ದರು. ಆದರೆ 2024ರ ಫೆಬ್ರವರಿ 21ರಂದು ಅವರು ನಮ್ಮನ್ನು ಅಗಲಿದರು. ಆದರೂ ಇಂದಿಗೂ ಅವರು ಮುಂಬೈನ ಜುಹು ಬೀಚ್‌ನಲ್ಲಿ ಉಪ್ಪು ನೀರಿನಲ್ಲಿ ಕಾಲಿಟ್ಟು ನಿಂತಿರುವಂತೆಯೇ ನನಗನ್ನಿಸುತ್ತದೆ" ಎಂದು ಯೂಸರ್ ಒಬ್ಬರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ನೆಟ್ಟಿಗರ ಈ ಪ್ರೀತಿಗೆ ಪ್ರತಿಕ್ರಿಯಿಸಿರುವ ವೃದ್ಧನ ಮಗ ಶ್ರೀಕಾಂತ್, "ನಾನು ಪ್ರತಿಯೊಂದು ಕಮೆಂಟ್ ಅನ್ನು ನನ್ನ ತಂದೆಗೆ ಓದಿ ಹೇಳುತ್ತಿದ್ದೇನೆ. ಜನ ತಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಅವರಿಗೆ ತಿಳಿಸುತ್ತಿದ್ದೇನೆ. ಅವರ ಮುಖದಲ್ಲಿ ಈ ನಗು ಮೂಡಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.


