ಅಮೆರಿಕದ ಲೂಸಿಯಾನಾದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ 8 ವರ್ಷದ ಬಾಲಕಿ 'ಮಿದುಳು ತಿನ್ನುವ ಅಮೀಬಾ' ಸೋಂಕಿಗೆ ಬಲಿಯಾಗಿದ್ದಾಳೆ. ಮೂಗಿನ ಮೂಲಕ ಮಿದುಳನ್ನು ಪ್ರವೇಶಿಸುವ ಈ ಭೀಕರ ಸೋಂಕಿನಿಂದಾಗಿ ಬಾಲಕಿ ತನ್ನ ಎಂಟನೇ ಹುಟ್ಟುಹಬ್ಬದ ಮರುದಿನವೇ ಕೊನೆಯುಸಿರೆಳೆದಿದ್ದಾಳೆ.

ಲೂಸಿಯಾನಾ (ಅಮೆರಿಕ): ಕೆರೆಯಲ್ಲಿ ಈಜಲು ಹೋಗಿದ್ದ ಎಂಟು ವರ್ಷದ ಪುಟಾಣಿ ಬಾಲಕಿಯೊಬ್ಬಳು ಅತೀ ಅಪರೂಪದ ಹಾಗೂ ಭೀಕರ 'ಮಿದುಳು ತಿನ್ನುವ ಅಮೀಬಾ' (Brain-eating amoeba) ಸೋಂಕಿಗೆ ಬಲಿಯಾದ ಘಟನೆ ಅಮೆರಿಕದ ಲೂಸಿಯಾನಾದಲ್ಲಿ ನಡೆದಿದೆ.

ಲಿಲಿಯನ್ ಸ್ಮಾರ್ಟ್ ಎಂಬ ಬಾಲಕಿ ಮೃತಪಟ್ಟ ದುರ್ದೈವಿ. ವಿಶೇಷವೆಂದರೆ ಶನಿವಾರ ಆಕೆಯ 8ನೇ ವರ್ಷದ ಹುಟ್ಟುಹಬ್ಬವಿತ್ತು. ತನ್ನ ಜನ್ಮದಿನವನ್ನು ಆಚರಿಸಿಕೊಂಡ ಮರುದಿನವೇ ಆಕೆ ಮೃತಪಟ್ಟಿರುವುದು ಕುಟುಂಬದವರನ್ನು ತೀವ್ರ ಶೋಕಕ್ಕೀಡು ಮಾಡಿದೆ.

ಘಟನೆ ಹಿನ್ನೆಲೆ

ಆಗಸ್ಟ್ 15ರಂದು ಲಿಲಿಯನ್ ಲೂಸಿಯಾನಾದ ಕ್ಲೈಬೋರ್ನ್ ಕೆರೆಯಲ್ಲಿ ಈಜಲು ಹೋಗಿದ್ದಳು. ಅಲ್ಲಿ ಈಜುವಾಗ ನೀರಿನಲ್ಲಿದ್ದ ನೇಗ್ಲೇರಿಯಾ ಫೌಲೆರಿ (Naegleria fowleri) ಎಂಬ ಅಮೀಬಾ ಆಕೆಯ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿತ್ತು. ನಂತರ ಅದು ನೇರವಾಗಿ ಮಿದುಳಿಗೆ ದಾಳಿ ಮಾಡಿ ಗಂಭೀರ ಸೋಂಕನ್ನು ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮಿದುಳಿನ ಊತ ಹಾಗೂ ಹಾನಿಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.

ಏನಿದು ಮಿದುಳು ತಿನ್ನುವ ಅಮೀಬಾ?

ಇದರ ಹೆಸರು ನೇಗ್ಲೇರಿಯಾ ಫೌಲೆರಿ (Naegleria fowleri). ಇದೊಂದು ಏಕಕೋಶಜೀವಿ. ಇದು ಸಾಮಾನ್ಯವಾಗಿ ಕೆರೆ, ನದಿ ಮತ್ತು ಬಿಸಿನೀರಿನ ಬುಗ್ಗೆಗಳಂತಹ ಸಿಹಿನೀರಿನ ಮೂಲಗಳಲ್ಲಿ ವಾಸಿಸುತ್ತದೆ. ಈ ಅಮೀಬಾ ಇರುವ ನೀರಿನಲ್ಲಿ ಈಜುವಾಗ ಅಥವಾ ಮುಳುಗಿದಾಗ ಅದು ಮೂಗಿನ ಮೂಲಕ ದೇಹ ಸೇರುತ್ತದೆ. ಅಲ್ಲಿಂದ ನರಗಳ ಮೂಲಕ ಮಿದುಳಿಗೆ ತಲುಪಿ, ಮಿದುಳಿನ ಕೋಶಗಳನ್ನು ನಾಶಪಡಿಸಲು ಆರಂಭಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಪ್ರೈಮರಿ ಅಮೀಬಿಕ್ ಮೆನಿಂಗೋಎನ್ಸೆಫಾಲಿಟಿಸ್' (PAM) ಎಂದು ಕರೆಯಲಾಗುತ್ತದೆ.

ಲಕ್ಷಣಗಳ

  • ತೀವ್ರ ತಲೆನೋವು
  • ಜ್ವರ
  • ವಾಕರಿಕೆ
  • ವಾಂತಿ
  • ಕುತ್ತಿಗೆ ಬಿಗಿಯಾದಂತಾಗುವುದು
  • ಗೊಂದಲ
  • ಪಾರ್ಶ್ವವಾಯು

ಎಚ್ಚರಿಕೆ ಏನು

  • ಈ ಅಮೀಬಾ ಇರುವ ನೀರನ್ನು ಕುಡಿಯುವುದರಿಂದ ಸೋಂಕು ಹರಡುವುದಿಲ್ಲ. ಕೇವಲ ಮೂಗಿನ ಮೂಲಕ ಹೋದರೆ ಮಾತ್ರ ಅಪಾಯ.
  • ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಉಪ್ಪುನೀರು (ಸಮುದ್ರ) ಅಥವಾ ಸರಿಯಾಗಿ ಕ್ಲೋರಿನ್ ಹಾಕಿದ ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಈ ಅಮೀಬಾ ಇರುವುದಿಲ್ಲ.

ಈ ಸೋಂಕು ತಗುಲಿದವರು ಬದುಕುವುದು ತೀರಾ ವಿರಳ. ಸಂಶೋಧನೆಗಳ ಪ್ರಕಾರ ಇದರ ಮರಣ ಪ್ರಮಾಣ ಶೇ. 97ರಷ್ಟಿದೆ. ಅಮೆರಿಕದಾದ್ಯಂತ ಈ ಸೋಂಕು ಬಹಳ ಅಪರೂಪವಾಗಿದ್ದರೂ, ಸಿಹಿನೀರಿನ ಮೂಲಗಳಲ್ಲಿ ಈಜುವಾಗ ಮೂಗಿಗೆ ನೀರು ಹೋಗದಂತೆ 'ನೋಸ್ ಪ್ಲಗ್'ಗಳನ್ನು ಬಳಸಲು ಅಥವಾ ಮುಖವನ್ನು ನೀರಿನೊಳಗೆ ಹಾಕದಂತೆ ಜಾಗರೂಕತೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.