ಇಂದಿನಿಂದ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಹೊಂದಲು ಅವಕಾಶವಿದ್ದು, ನಕಲಿ ಸಿಮ್‌ಗಳ ಹಾವಳಿ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಗ್ರಾಹಕರು 'ಸಂಚಾರ್ ಸಾಥಿ' ಪೋರ್ಟಲ್ ಮೂಲಕ ತಮ್ಮ ಹೆಸರಿನಲ್ಲಿರುವ ಅನಗತ್ಯ ನಂಬರ್‌ಗಳನ್ನು ಪರಿಶೀಲಿಸಿ ರಿಪೋರ್ಟ್ ಮಾಡಬಹುದಾಗಿದೆ.
ನವದೆಹಲಿ: ನೀವು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮಗಾಗಿ. ಇಂದಿನಿಂದ (ಆಗಸ್ಟ್ 24, 2026) ದೇಶಾದ್ಯಂತ ಮೊಬೈಲ್ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಸೈಬರ್ ವಂಚನೆ ಮತ್ತು ನಕಲಿ ಸಿಮ್‌ಗಳ ಹಾವಳಿ ತಡೆಯಲು ದೂರಸಂಪರ್ಕ ಇಲಾಖೆ (DoT) ಈ ಕಠಿಣ ಕ್ರಮ ಕೈಗೊಂಡಿದೆ.
ಹೊಸ ನಿಯಮವೇನು?
ದೂರಸಂಪರ್ಕ ಇಲಾಖೆಯ ಹೊಸ ಮಾರ್ಗಸೂಚಿಯ ಪ್ರಕಾರ.. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಮೊಬೈಲ್ ಕನೆಕ್ಷನ್‌ಗಳನ್ನು ಮಾತ್ರ ಹೊಂದಲು ಅವಕಾಶವಿದೆ. ಜಮ್ಮು-ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಗ್ರಾಹಕರಿಗೆ ಈ ಮಿತಿ ಕೇವಲ 6 ಸಿಮ್‌ಗಳಿಗೆ ಸೀಮಿತವಾಗಿದೆ. ನಿಮ್ಮ ಹೆಸರಿನಲ್ಲಿ ಈಗಾಗಲೇ ನಿಗದಿತ ಮಿತಿಯಷ್ಟು ಸಿಮ್‌ಗಳಿದ್ದರೆ, ಟೆಲಿಕಾಂ ಕಂಪನಿಗಳು ನಿಮಗೆ ಹೊಸ ಸಿಮ್ ನೀಡುವಂತಿಲ್ಲ.
ನಕಲಿ ಸಿಮ್ ಇದ್ದರೆ ಅಪಾಯವೇನು?
ನಿಮಗೆ ತಿಳಿಯದಂತೆ ನಿಮ್ಮ ಆಧಾರ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಬಳಸಿ ಯಾರಾದರೂ ಸಿಮ್ ಪಡೆದಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ನಕಲಿ ಸಿಮ್‌ಗಳನ್ನು ಸೈಬರ್ ವಂಚನೆ, ಬೆದರಿಕೆ ಕರೆಗಳು ಅಥವಾ ಅಕ್ರಮ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಅಂತಹ ನಂಬರ್‌ನಿಂದ ಅಪರಾಧ ನಡೆದರೆ, ದಾಖಲೆಗಳಲ್ಲಿ ನಿಮ್ಮ ಹೆಸರು ಇರುವುದರಿಂದ ಪೊಲೀಸರು ಮೊದಲು ನಿಮ್ಮನ್ನೇ ವಿಚಾರಣೆಗೆ ಒಳಪಡಿಸುತ್ತಾರೆ.
ಎಷ್ಟು ಸಿಮ್ ಇವೆ ಎಂದು ತಿಳಿಯುವುದು ಹೇಗೆ?
ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ನಂಬರ್‌ಗಳು ಸಕ್ರಿಯವಾಗಿವೆ ಎಂಬುದನ್ನು ಪತ್ತೆಹಚ್ಚಲು ಸರ್ಕಾರ 'ಸಂಚಾರ್ ಸಾಥಿ' (Sanchar Saathi) ಪೋರ್ಟಲ್‌ನಲ್ಲಿ TAFCOP ಸೌಲಭ್ಯವನ್ನು ನೀಡಿದೆ. ಸಂಚಾರ್ ಸಾಥಿ ವೆಬ್‌ಸೈಟ್‌ಗೆ ಭೇಟಿ ನೀಡಿ. ನಿಮ್ಮ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ.
ಅಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕನೆಕ್ಷನ್‌ಗಳ ಪಟ್ಟಿ ಕಾಣಿಸುತ್ತದೆ. ದರಲ್ಲಿ ಯಾವುದಾದರೂ ನಂಬರ್ ನಿಮ್ಮದಲ್ಲದಿದ್ದರೆ ಅಥವಾ ನೀವು ಬಳಸುತ್ತಿಲ್ಲದಿದ್ದರೆ, ತಕ್ಷಣವೇ ಅಲ್ಲಿರುವ 'Report' ಆಯ್ಕೆ ಬಳಸಿ ದೂರು ನೀಡಬಹುದು.
ಮಿತಿ ಮೀರಿದರೆ ಏನಾಗುತ್ತದೆ?
ಒಬ್ಬ ವ್ಯಕ್ತಿ 9ಕ್ಕಿಂತ ಹೆಚ್ಚು ಸಿಮ್ ಹೊಂದಿದ್ದರೆ ಹೊಸದಾಗಿ ಸಿಮ್ ಪಡೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ (DIP) ಮೂಲಕ ಅಂತಹ ಗ್ರಾಹಕರನ್ನು ಗುರುತಿಸಿ, ಅನಗತ್ಯ ಅಥವಾ ನಕಲಿ ಎಂದು ಕಂಡುಬರುವ ಸಿಮ್‌ಗಳನ್ನು ತಕ್ಷಣವೇ ರದ್ದುಗೊಳಿಸಲು ಕಂಪನಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆಯಾಗಿ ನಿಮ್ಮ ಹೆಸರಿನಲ್ಲಿರುವ ಸಿಮ್‌ಗಳ ಬಗ್ಗೆ ಜಾಗರೂಕರಾಗಿರುವುದು ಮತ್ತು ಅನಗತ್ಯ ನಂಬರ್‌ಗಳನ್ನು ಬಂದ್ ಮಾಡಿಸುವುದು ಈಗ ಅನಿವಾರ್ಯವಾಗಿದೆ.


