ಹಸಿರು ಹೊದ್ದ ನೆಲದ ಸುತ್ತ ಬಣ್ಣ ಬಣ್ಣದ ಹೂ ಬಿಟ್ಟ ಗಿಡ-ಬಳ್ಳಿಗಳು. ನಡುವಲ್ಲೊಂದು ಉಯ್ಯಾಲೆ. ತುಸು ದೂರದಲ್ಲಿ ಪುಟ್ಟ ಕಾರಂಜಿ. ಮನೆ ಮುಂದೆ ಇಂಥ ಉದ್ಯಾನವಿದ್ರೆ ಮನೆಮಂದಿಯ ಖುಷಿಗೆ, ಉತ್ಸಾಹ ಹಾಗೂ ಹೆಮ್ಮೆಗೆ ಎಲ್ಲೆಯುಂಟೆ? ಯಾರದ್ದೋ ಮನೆಮುಂದೆ ಕಾಣಿಸುವ ಇಂಥ ಉದ್ಯಾನ ಕಂಡ್ರೆ ನಮ್ಮನೆ ಮುಂದೂ ಇಂಥದೊಂದು ಇದ್ದಿದ್ರೆ ಎಷ್ಟು ಚೆನ್ನಾಗಿರುತ್ತೆ ಎಂಬ ಬಯಕೆ ಮೂಡೋದು ಸಹಜ. ಕೆಲವರಿಗೆ ಹಸಿರಿನ ಮೇಲೆ ವಿಪರೀತ ವ್ಯಾಮೋಹ. ಮನೆ ಮುಂದೆ ಜಾಗವಿಲ್ಲದಿದ್ರೂ ಬಾಲ್ಕನಿ, ಕಿಚನ್ ಹಿಂಭಾಗ, ಟೆರೇಸ್ ಹೀಗೆ ಲಭ್ಯವಿರುವ ಸ್ಥಳಗಳಲ್ಲಿ ಪಾಟ್‍ಗಳಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಹಸಿರು ಕಣ್ಣಿಗೂ ತಪ್ಪು, ಜೊತೆಗೆ ಮನಸ್ಸಿಗೂ ಹಿತ. ಆದ್ರೆ ಬೆಡ್‍ರೂಮ್, ಕಿಚನ್, ಪೂಜಾ ಕೋಣೆ ಸೇರಿದಂತೆ ಮನೆಯ ಪ್ರತಿ ಮೂಲೆಗೂ ವಾಸ್ತು ನಂಟು ನೋಡುವ ನಾವು, ಗಾರ್ಡನ್ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಗಾರ್ಡನ್ ಎಲ್ಲಿ ಮಾಡಿದ್ರೂ, ಹೇಗೆ ಮಾಡಿದ್ರೂ ನಡೆಯುತ್ತೆ ಎಂಬ ಭಾವನೆ ಮನಸ್ಸಿನಲ್ಲಿ ಬೇರೂರಿರುತ್ತೆ. ಆದ್ರೆ ಗಾರ್ಡನ್‍ಗೂ ವಾಸ್ತುವಿದೆ. ಮನೆ ಅಥವಾ ಆಫೀಸ್‍ನ ಸುತ್ತ ಗಾರ್ಡನ್ ಅಥವಾ ಗಿಡ-ಮರಗಳಿದ್ರೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಇದ್ರಿಂದ ಯಶಸ್ಸು, ಆರ್ಥಿಕಾಭಿವೃದ್ಧಿ ಹಾಗೂ ಅಲ್ಲಿ ನೆಲೆಸಿರುವ ಜನರ ನಡುವಿನ ಬಾಂಧವ್ಯ ಹೆಚ್ಚುತ್ತದೆ. ಹಾಗಾದ್ರೆ ಗಾರ್ಡನ್‍ಗೆ ಯಾವ ದಿಕ್ಕು ಪ್ರಶಸ್ತ? ನೋಡೋಣ ಬನ್ನಿ.

ಗಾರ್ಡನ್ ಅಂದಕ್ಕೆ ಬಿಸಿಲೇ ಕಂಟಕ; ಗಿಡ, ಬಳ್ಳಿಗೆ ಬೇಕು ವಿಶೇಷ ಆರೈಕೆ

-ವಾಸ್ತುಶಾಸ್ತ್ರದ ಪ್ರಕಾರ ಗಾರ್ಡನ್ ನಿರ್ಮಾಣಕ್ಕೆ ಪ್ರಶಸ್ತವಾದ ದಿಕ್ಕು ಉತ್ತರ. ಅದ್ರಲ್ಲೂ ಮನೆಯೊಳಗೆ ಗಿಡಗಳನ್ನು ಬೆಳೆಸುವ ಆಲೋಚನೆಯಿದ್ರೆ ಉತ್ತರ ದಿಕ್ಕನ್ನೇ ಆರಿಸಿಕೊಳ್ಳಿ. ಹಾಗೆಯೇ ಈ ದಿಕ್ಕಿನಲ್ಲಿ ಜಾಸ್ತಿ ಎತ್ತರ ಬೆಳೆಯದ ಗಿಡಗಳು ಹಾಗೂ ಬಳ್ಳಿಗಳನ್ನು ಬೆಳೆಸಿ. ದೊಡ್ಡ ಮರಗಳು, ಶಿಲೆಗಳು ಅದ್ರಲ್ಲೂ ಪೇಂಟಿಂಗ್ ಇರುವ ಶಿಲೆಗಳು ಈ ದಿಕ್ಕಿನಲ್ಲಿ ಇರಲೇಬಾರದು. 

- ಗಾರ್ಡನ್ ಮಾಡುವಾಗ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡ ಇರುವಂತೆ ನೋಡಿಕೊಳ್ಳೋದು ಉತ್ತಮ. ತುಳಸಿ ಸಕಾರಾತ್ಮಕ ಶಕ್ತಿಯ ಸಂಕೇತ. ಜೊತೆಗೆ ಆರೋಗ್ಯಕ್ಕೂ ಹಿತ. ತುಳಸಿ ಇರುವ ಕಡೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸೋದಿಲ್ಲ. ಪೂರ್ವ ದಿಕ್ಕಿನಲ್ಲಿ ಕೂಡ ತುಳಸಿ ಗಿಡವನ್ನು ಬೆಳೆಸಬಹುದು. 

-ಮನೆಯೊಳಗಿರುವ ಎಲ್ಲ ಗಿಡಗಳು ಮುಳ್ಳುಗಳಿಂದ ಮುಕ್ತವಾಗಿರಬೇಕು. ಮುಳ್ಳು ಅಡ್ಡಿ ಹಾಗೂ ತೊಂದರೆಗಳ ಸಂಕೇತ. ಆದ್ರೆ ಗುಲಾಬಿ ಗಿಡಗಳಿಗೆ ಈ ನಿಯಮ ಅನ್ವಯಿಸೋದಿಲ್ಲ. ಆದಕಾರಣ ಗುಲಾಬಿ ಪ್ರಿಯರು ಈ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ. 

ಆತ್ಮನಿರ್ಭರ ಭಾರತ: ಮನೆಯನ್ನು ಲೋಕಲ್ ಆಗಿಸಲು ಈ ಬದಲಾವಣೆ ಅಗತ್ಯ

-ಉತ್ತರ ದಿಕ್ಕಿನಲ್ಲಿ ಗಾರ್ಡನ್ ಮಾಡಲು ಸ್ಥಳದ ಕೊರತೆಯಿದ್ರೆ ಪೂರ್ವ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬಹುದು. ಕಿಚನ್ ಗಾರ್ಡನ್‍ಗೆ ಇದು ಸೂಕ್ತವಾದ ಸ್ಥಳ. ಹಣ್ಣು ಬಿಡುವ ಗಿಡಗಳನ್ನು ಈ ದಿಕ್ಕಿನಲ್ಲಿ ನೆಡುವುದು ಶುಭಕಾರಕ. 

-ಮನೆಯ ಪಶ್ಚಿಮ ಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ರೆ ಮಾವು, ಕಿತ್ತಳೆ, ಬಾಳೆಹಣ್ಣು ಮುಂತಾದ ಮರಗಳನ್ನು ಬೆಳೆಸಬಹುದು. ಆದ್ರೆ ಈ ಮರಗಳು ಮನೆಗೆ ತಾಗಿಕೊಂಡಿರಬಾರದು. ಅಂದ್ರೆ ಮನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡು ಬೆಳೆಸಬೇಕು. ಮನೆ ಮತ್ತು ಗಿಡಗಳ ನಡುವೆ ಖಾಲಿಯಿರುವ ಸ್ಥಳದಲ್ಲಿ ದೊಡ್ಡ ಶಿಲೆಗಳು, ಮೂರ್ತಿಗಳು ಅಥವಾ ಕೆತ್ತನೆಗಳನ್ನಿಡಬಹುದು.

-ವಾಸ್ತುಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕು ಗಾರ್ಡನ್ ಅಥವಾ ಕಿಚನ್ ಗಾರ್ಡನ್‍ಗೆ ಯೋಗ್ಯವಲ್ಲ. ಈ ಪ್ರದೇಶದಲ್ಲಿ ಹರಿಯುವ ನೀರಿನ ಯಾವುದೇ ಮೂಲಗಳಿರಬಾರದು. ಈ ದಿಕ್ಕಿನಲ್ಲಿ ಹ್ಯಾಂಗಿಂಗ್ ಬಾಸ್ಕೆಟ್‍ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಮನಿ ಪ್ಲ್ಯಾಂಟ್ ಬೆಳೆಸಲು ಇದು ಸೂಕ್ತವಾದ ದಿಕ್ಕು. 

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

-ಗಾರ್ಡನ್ ಮತ್ತು ಮನೆಯ ನಡುವೆ ಓಡಾಟ ನಡೆಸಲು ನಿರ್ಮಿಸಿರುವ ಕಾಲುದಾರಿಯ ಎರಡೂ ಬದಿಗಳಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸೋದು ಶುಭಕಾರಕ.

-ಒಣಗಿದ ಎಲೆಗಳು, ಸತ್ತ ಗಿಡ, ಬಳ್ಳಿಗಳನ್ನು ಗಾರ್ಡನ್‍ನಿಂದ ತೆಗೆದು ಹಾಕಲು ಮರೆಯಬಾರದು.

-ಕಂಪೌಂಡ್ ಗೋಡೆಗಳಿಗೆ ಬಳ್ಳಿಗಳನ್ನು ಹಬ್ಬಿಸಬಾರದು. ಹಾಗೆಯೇ ಹೂ ಬಿಡುವ ಗಿಡಗಳ ಕುಂಡಗಳನ್ನು ಕಂಪೌಂಡ್ ಗೋಡೆಗಳ ಮೇಲಿಡಬಾರದು.