ನಾವು ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಲಾಕ್‌ಡೌನ್‌ನ ನಾಲ್ಕನೇ ಹಂತದಲ್ಲಿದ್ದೇವೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ್ ಭಾರತದ ಕುರಿತು ಮಾತನಾಡಿ- ಸ್ವದೇಶಿ ವಸ್ತುಗಳ ಬಳಕೆ ಹಾಗೂ ಉತ್ಪಾದನೆ ಕುರಿತು ಕರೆ ನೀಡಿದ್ದಾರೆ. ಬಹುತೇಕ ದೇಶಗಳು ಎಲ್ಲವಕ್ಕೂ ಚೀನಾದ ವಸ್ತುಗಳ ಮೇಲೆ ಅವಲಂಬಿತವಾಗಿರುವ ಈ ದಿನಗಳಲ್ಲಿ ಅವುಗಳ ಖರೀದಿ ಬಿಟ್ಟು, ಸ್ವದೇಶಿ ಚಳುವಳಿಯೊಂದನ್ನು ಹುಟ್ಟುಹಾಕುವತ್ತ ಗಮನ ಹರಿಸುತ್ತವೆ. ಭಾರತ ಕೂಡಾ ಈ ಬಗ್ಗೆ ಉತ್ಸುಕವಾಗಿದೆ. 

ಇದಕ್ಕಾಗಿ ಸ್ವದೇಶದಲ್ಲೇ ಬಹುತೇಕ ಅಗತ್ಯ ವಸ್ತುಗಳನ್ನು ಉತ್ಪಾದಿಸುವುದಷ್ಟೇ ಅಲ್ಲ, ಅವುಗಳನ್ನೇ ಕೊಳ್ಳುವತ್ತಲೂ ಜನರು ಗಮನ ಹರಿಸಬೇಕಿದೆ. ಸ್ಥಳೀಯ ವಸ್ತುಗಳ ಬಳಕೆಯಿಂದ ನಮ್ಮವರನ್ನೇ ಬೆಳೆಸಿದಂತಾಗುವ ಜೊತೆಗೆ ದೇಶದ ಅಭಿವೃದ್ಧಿಗೂ ಕಾರಣವಾಗಬಹುದು. ಮನೆಯ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸುತ್ತಲೇ ಹೇಗೆ ಲೋಕಲ್ ವಸ್ತುಗಳನ್ನು ಬಳಸಬಹುದು ಎಂಬ  ಬಗ್ಗೆ ಇಲ್ಲಿದೆ. 

ಸೆಕ್ಸ್‌ನಲ್ಲೂ ಆತ್ಮನಿರ್ಭರತೆ ಸಾಧಿಸಿದವರು!

ಮಡಕೆಗಳು
ಬೇಸಿಗೆಯಲ್ಲಿ ತಣ್ಣನೆಯ ನೀರಿಗಾಗಿ ಫ್ರಿಡ್ಜ್‌ನಲ್ಲಿಟ್ಟ ನೀರನ್ನು ಬಳಸುತ್ತೇವೆ. ಆದರೆ ಇದರಿಂದ ಬಹಳಷ್ಟು ಜನ ಶೀತ, ಕೆಮ್ಮು ಅನುಭವಿಸಬೇಕಾಗುತ್ತದೆ. ಅದರ ಬದಲಿಗೆ ಮಡಿಕೆಯನ್ನು ಖರೀದಿಸಿ ಅದರಲ್ಲಿ ಕುಡಿಯುವ ನೀರನ್ನು ಇರಿಸಿ. ನೀರು ತಣ್ಣಗಿರುವ ಜೊತೆಗೆ, ದೇಹಕ್ಕೆ ಹಲವು ಆರೋಗ್ಯ ಲಾಭಗಳನ್ನೂ ತಂದುಕೊಡುತ್ತದೆ. ಇದು ದೇಹದ ಪಿಎಚ್ ಮಟ್ಟ ಕಾಪಾಡುವ ಜೊತೆಗೆ ಜೀರ್ಣವ್ಯವಸ್ಥೆ ಉತ್ತಮಗೊಳಿಸುತ್ತದೆ. ತೂಕ ಇಳಿಕೆಗೂ ಸಹಕರಿಸುತ್ತದೆ. ಇವೆಲ್ಲದರೊಂದಿಗೆ ಸ್ಥಳೀಯವಾಗಿ ಮಡಕೆ ಮಾಡಿ ಮಾರುವವರ ಕೌಶಲಕ್ಕೂ ನಾವು ಬೆಲೆ ಕೊಟ್ಟಂತಾಗುತ್ತದೆ. 

ಸೆರಾಮಿಕ್ಸ್
ಜಗತ್ತು ಪ್ಲ್ಯಾಸ್ಟಿಕ್ ವಸ್ತುಗಳಿಗೆ ಬೈಬೈ ಹೇಳುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾವು ಕೂಡಾ ಮನೆಯ ಪ್ಲ್ಯಾಸ್ಟಿಕ್ ತಟ್ಟೆಲೋಟಗಳಿಗೆ ಗೇಟ್ ಪಾಸ್ ಕೊಡೋಣ. ಬದಲಿಗೆ ಸ್ಟೀಲ್ ಬಳಸೋಣ. ಸ್ಟೀಲ್ ಪಾತ್ರೆಗಳನ್ನು ಬಳಸಲು ಇಷ್ಟವಿಲ್ಲದಿದ್ದಲ್ಲಿ, ಅಂದಚೆಂದ ಹಾಗೂ ಅಲಂಕಾರಿಕವಾದ ಸೆರಾಮಿಕ್ ಪಾತ್ರೆಗಳನ್ನು ಬಳಸಬಹುದು.  ಇವು ಧೀರ್ಘ ಕಾಲ ಬಾಳಿಕೆ ಬರುವ ಜೊತೆಗೆ ಕಡಿಮೆ ಮೇಂಟೇನೆನ್ಸ್ ಬೇಡುತ್ತವೆ. 

ಸ್ಥಳೀಯ ಕಲೆ
ನಮ್ಮ ದೇಶದ ಯಾವುದೇ ಭಾಗಕ್ಕೆ ಹೋಗಲಿ, ಅಲ್ಲಿಯ ವೈಶಿಷ್ಟ್ಯತೆ ಸಾರುವ ಕಲೆಗಳಿಗೆ ಕೊರತೆಯೇ ಇಲ್ಲ. ಮಧುಬಾನಿ ಪೇಂಟಿಂಗ್ಸ್‌ನಿಂದ ಹಿಡಿದು ವರ್ಲಿ, ಕಲಂಕಾರಿ ಆರ್ಟ್, ರಾಜಸ್ಥಾನಿ ಆರ್ಟ್ - ಹೀಗೆ ನೂರಾರು ರೀತಿಯ ಕಲೆಗಳು ಸ್ಥಳೀಯತೆಯನ್ನು ಸಾರುವ ಜೊತೆಗೆ ಮನೆಯ ಲುಕ್ ಹೆಚ್ಚಿಸುತ್ತವೆ. ಹಾಗಾಗಿ ಪೇಂಟಿಂಗ್ಸ್ ಕೊಳ್ಳುವಾಗ ಸ್ಥಳೀಯ ಕಲಾವಿದರು ತಯಾರಿಸಿದಂಥವನ್ನು ನೋಡಿ ಖರೀದಿಸಿ. ಇದರಿಂದ ನಮ್ಮ ಕಲಾವಿದರನ್ನೂ ಬೆಳೆಸಿದಂತಾಗುತ್ತದೆ. 

ಬೆಡ್  ಕವರ್ಸ್
ಭಾರತದಲ್ಲಿ ಕಾಟನ್ ಬೆಡ್‌ಶೀಟ್ ಹಾಗೂ ಕುಶನ್ ತಯಾರಕರಿಗೆ ಕೊರತೆ ಇಲ್ಲ. ಜೈಪುರದ ಬ್ಲಾಕ್ ಪ್ರಿಂಟ್ಸ್, ಗುಜರಾತಿನ ಹ್ಯಾಂಡ್ ಎಂಬ್ರಾಯ್ಡರಿ ಸೇರಿದಂತೆ  ನಮ್ಮ ಇಂಟೀರಿಯರ್ ಗುಣಮಟ್ಟ ಹೆಚ್ಚಿಸುವ ಹಲವಾರು ಬೆಡ್ ಕವರ್‌ಗಳು, ಕುಶನ್ ಕವರ್‌ಗಳು ಲಭ್ಯವಿವೆ. ಬೇರೆ ಯಾವುದೋ ದೇಶದ ಕಂಪನಿಯ ಸರಕು ಕೊಳ್ಳುವ ಬದಲು ಸ್ವದೇಶಿ ಬೆಡ್‌ಶೀಟ್‌ಗಳನ್ನೇ ಕೊಳ್ಳಬಹುದಲ್ಲವೇ ?

ಈ ಸಮಸ್ಯೆ ಇರುವವರು ಜಗತ್ತಿನಲ್ಲಿ ಹತ್ತಿರತ್ತಿರ ನೂರು ಮಂದಿ ಮಾತ್ರ!

ಫ್ಯಾಶನ್
ಕಾಟನ್ ಬಟ್ಟೆಗಳಿರಬಹುದು, ಬನಾರಸಿ, ಸಿಲ್ಕ್ ಸೀರೆಗಳಿರಬಹುದು- ಭಾರತದ ಬಟ್ಟೆಗಳು ಗುಣಮಟ್ಟಕ್ಕೆ ವಿಶ್ವಾದ್ಯಂತ ಖ್ಯಾತಿ ಪಡೆದಿವೆ. ಇನ್ನು ಹುಬ್ಬಳ್ಳಿಯಲ್ಲಿ ತಯಾರಾಗುವ ಜೀನ್ಸ್ ಪ್ರಸಿದ್ಧ ಬ್ರ್ಯಾಂಡೆಡ್ ಕಂಪನಿಗಳ ಜೀನ್ಸ್‌ಗಿಂತ ಕಡಿಮೆಯೇನಿಲ್ಲ. ಸಾಧ್ಯವಾದಷ್ಟು ಇವನ್ನೇ ಖರೀದಿಸಿದರೆ, ಸ್ವದೇಶಿಯೂ ಆಯಿತು, ಹಾಗಂಥ ಫ್ಯಾಶನ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿಲ್ಲ. 

ಟಾಯ್ಸ್
ಮಕ್ಕಳ ಗೊಂಬೆಗಳು ಸಾಮಾನ್ಯವಾಗಿ ನಾವು ಖರೀದಿಸುವುದೆಲ್ಲ ಮೇಡ್ ಇನ್ ಚೈನಾ ಆಗಿರುತ್ತದೆ. ಅತಿ ಕಡಿಮೆ ಬೆಲೆಗೆ ಸಿಗುವುದು ಇದಕ್ಕೆ ಕಾರಣ. ಆದರೆ, ಇನ್ನು ಮುಂದೆ ಮಕ್ಕಳಿಗೆ ಬೊಂಬೆಗಳನ್ನು ಕೊಡಿಸುವಾಗ ಅದು ಮೇಡ್ ಇನ್ ಇಂಡಿಯಾ ಆಗಿರುವಂತೆ ನೋಡಿಕೊಳ್ಳಿ. ಬೆಲೆ ಸ್ವಲ್ಪ ಹೆಚ್ಚಿದ್ದರೆ ಖರೀದಿಸುವ ಗೊಂಬೆಗಳ ಸಂಖ್ಯೆ ಕಡಿಮೆ ಮಾಡಬಹುದು. ಆದರೆ, ದೇಸಿ ಆಟಿಕೆಗಳನ್ನು ಪ್ರೋತ್ಸಾಹಿಸಿ. ಸಾಮಾನ್ಯವಾಗಿ ನಿಮ್ಮ ಪರಿಚಯದವರು, ಫೇಸ್ಬುಕ್ ಗ್ರೂಪ್‌ಗಳಲ್ಲಿ ತಾವೇ ಆಟಿಕೆ ತಯಾರಿಸಿ ಮಾರಾಟ ಮಾಡುವವರು-  ಇಂಥವರಿಂದಲೇ ಖರೀದಿಸಲು ನೋಡಿ.