ಬೇಸಿಗೆಯಲ್ಲಿ ಗಾರ್ಡನ್‍ನಲ್ಲಿ ಬೆಳೆದ ಗಿಡಗಳನ್ನು ಉಳಿಸಿಕೊಳ್ಳೋದೆ ದೊಡ್ಡ ಸವಾಲಿನ ಕೆಲಸ. ಒಂದು ದಿನ ನೀರು ಹಾಕಲು ಮರೆತರೂ ಗಿಡ ಬಾಡಿ ಬೆಂಡಾಗಿರುತ್ತೆ. ಇನ್ನು ಇನ್‍ಡೋರ್ ಪ್ಲಾಂಟ್‍ಗಳ ಕಥೆಯೂ ಇದಕ್ಕೆ ಹೊರತಾಗಿಲ್ಲ. ಪ್ರೀತಿ, ಅಕ್ಕರೆಯಿಂದ ನೆಟ್ಟು ಬೆಳೆಸಿದ ಗಿಡ ಬಾಡಿದ್ರೆ ಮನಸ್ಸು ಮರುಗುವುದು ಸಹಜ. ಆದ್ರೆ ಬೇಸಿಗೆಯಲ್ಲಿ ಕೆಲವು ಮುನ್ನೆಚ್ಚರಿಕೆ ಹಾಗೂ ಆರೈಕೆ ಕ್ರಮಗಳನ್ನು ಕೈಗೊಂಡ್ರೆ ಗಿಡಗಳಿಗೆ ಹಾನಿಯಾಗೋದಿಲ್ಲ.

ಸಾಕಷ್ಟು ನೀರು ಒದಗಿಸಿ
ಬೇಸಿಗೆಯಲ್ಲಿ ಗಿಡಗಳು ಬಾಡಲು ಅಥವಾ ಜೀವ ಕಳೆದುಕೊಳ್ಳಲು ಮುಖ್ಯ ಕಾರಣ ಅವುಗಳಿಗೆ ಸಮರ್ಪಕವಾಗಿ ನೀರು ಒದಗಿಸದಿರೋದು. ನೀರೆಂಬ ಜೀವಜಲ ಸಿಕ್ಕರೆ ಗಿಡ ಎಂಥ ಬಿರು ಬಿಸಿಲಿನಲ್ಲೂ ಬದುಕಬಲ್ಲದು. ನೀರು ಒದಗಿಸೋದು ಎಂದ್ರೆ ಮಣ್ಣಿನ ಮೇಲ್ಮೈಯನ್ನಷ್ಟೇ ಒದ್ದೆ ಮಾಡೋದಲ್ಲ. ಬದಲಿಗೆ ನೀರು ಮಣ್ಣಿನಲ್ಲಿ ಇಂಗಿ ಕೊನೆಯ ಪದರವನ್ನು ತಲುಪುವಷ್ಟು ನೀರು ಒದಗಿಸಬೇಕು. ಇದು ಏಕೆ ಅಂತೀರಾ? ಬೇಸಿಗೆಯಲ್ಲಿನ ಬಿಸಿ ಅಲೆಗಳು ಮಣ್ಣಿನಲ್ಲಿರುವ ತೇವಾಂಶವನ್ನು ಆವೆ ಮಾಡುತ್ತವೆ. ಹೀಗಾಗಿ ಮಣ್ಣಿನ ಕಡೆಯ ಪದರದ ತನಕ ನೀರು ಇಳಿದಿದ್ರೆ ಮಣ್ಣಿನ ಮೇಲ್ಮೈಯಲ್ಲಿರುವ ನೀರು ಶಾಖಕ್ಕೆ ಆವೆಯಾದ್ರೂ ಗಿಡಕ್ಕೇನೂ ಹಾನಿಯಾಗದು.

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಇರುವೆ ಕಾಟಕ್ಕೆ ಬೇವಿನ ನೀರು
ಬೇಸಿಗೆಯಲ್ಲಿ ಗಿಡಗಳಲ್ಲಿ ಅರಳಿ ನಿಂತಿರುವ ಹೂಗಳು ಮೈ ಮನಕ್ಕೆ ಮುದ ನೀಡುತ್ತವೆ. ಆದ್ರೆ ಈ ಹೂಗಳ ಅಂದಗೆಡಿಸಲು ಇರುವೆಗಳು ಸಿದ್ಧವಾಗಿರುತ್ತವೆ. ಮೊಗ್ಗುಗಳ ಒಳ ಸೇರುವ ಇವು ಹೂ ಅರಳುತ್ತಿದ್ದಂತೆ ಅದರ ಪಕಳೆಗಳಲ್ಲಿ ತೂತು ಮೂಡಿಸಿ ಅಂದಗೆಡಿಸುತ್ತವೆ. ಕೆಲವು ವಿಧದ ಕೀಟಗಳು ಕೂಡ ಹೂಗಳ ಪಕಳೆಗಳನ್ನು ತಿನ್ನುತ್ತವೆ. ಇವುಗಳ ಕಾಟ ತಗ್ಗಿಸಲು ಮಾರುಕಟ್ಟೆಯಲ್ಲಿ ಅನೇಕ ರಾಸಾಯನಿಕ ಸಿಂಪಡಣೆಗಳು ಲಭ್ಯವಿವೆ. ಆದ್ರೆ ಇವುಗಳಿಗಿಂತ ನೈಸರ್ಗಿಕ ವಿಧಾನದ ಮೂಲಕ ಇರುವೆ ಹಾಗೂ ಕೀಟಗಳು ಬಾರದಂತೆ ತಡೆಯೋದು ಒಳ್ಳೆಯದು. ನೀರಿಗೆ ಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಬೇಕು. ಈ ನೀರನ್ನು ಆರಿಸಿ ಗಿಡಗಳ ಮೇಲೆ ಸಿಂಪಡಿಸೋದ್ರಿಂ ಇರುವೆಗಳು ಹಾಗೂ ಕೀಟಗಳ ಕಾಟದಿಂದ ಮುಕ್ತಿ ಸಿಗುತ್ತೆ.

ಉಸಿರು ನೀಡುವ ಅರಿಶಿಣ
ಕೆಲವೊಮ್ಮೆ ಅಜಾಗರೂಕತೆ ಅಥವಾ ಅಧಿಕ ತಾಪಮಾನದ ಕಾರಣಕ್ಕೆ ಗಿಡಗಳಲ್ಲಿನ ಬೆಳವಣಿಗೆ ಕುಂಠಿತಗೊಳ್ಳುತ್ತೆ. ಗಿಡದ ಕಾಂಡಗಳು ಹಾಗೂ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಇದು ಕೆಲವೇ ದಿನಗಳಲ್ಲಿ ನಿಮ್ಮ ಗಿಡ ಜೀವ ಕಳೆದುಕೊಳ್ಳಲಿದೆ ಎಂಬುದರ ಸೂಚನೆ. ಇಂಥ ಸಮಯದಲ್ಲಿ ಗಿಡಗಳಿಗೆ ಸಂಜೀವಿನಿಯಾಗಬಲ್ಲ ಒಂದು ಔಷಧವಿದೆ. ಅದೇ ಅರಿಶಿಣ ನೀರು. ಅರಿಶಿಣವನ್ನು ನೀರಿನಲ್ಲಿ ಕದಡಿ ಗಿಡದಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಭಾಗಗಳ ಮೇಲೆ ಸಿಂಪಡಿಸಿ. ಅರಿಶಿಣ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸೋದು ಮಾತ್ರವಲ್ಲ, ಗಿಡಗಳ ಜೀವವನ್ನು ಕೂಡ ಉಳಿಸಬಲ್ಲದು. ಅರಿಶಿಣ ಗಿಡಗಳÀ ಬೆಳವಣಿಗೆ ಹಾರ್ಮೊನ್‍ಗಳನ್ನು ಪ್ರಚೋದಿಸುತ್ತದೆ. ಮುಂದಿನ ಕೆಲವು ದಿನಗಳ ತನಕ ಜಾಗ್ರತೆ ವಹಿಸಿದ್ರೆ ಗಿಡ ಮತ್ತೆ ಮೊದಲಿನಂತೆ ಚಿಗುರಿ ನಿಲ್ಲುತ್ತದೆ.

ಆಹ್ಲಾದಕರ ಟೆರೇಸ್: ಕಡಿಮೆ ಖರ್ಚಿನ ತಂಪು ತಾರಸಿ

ರಸಗೊಬ್ಬರ ಬಳಕೆ ಬೇಡ
ಗಿಡಗಳ ಬೆಳವಣಿಗೆಯನ್ನು ರಸಗೊಬ್ಬರ ಪ್ರಚೋದಿಸುತ್ತದೆ. ಆದ್ರೆ ಬೇಸಿಗೆಯಲ್ಲಿ ಗಿಡಗಳಿಗೆ ರಸಗೊಬ್ಬರವನ್ನು ಹೀರಿಕೊಳ್ಳಲು ಸಾಧ್ಯವಾಗೋದಿಲ್ಲ. ಈ ಸಮಯದಲ್ಲಿ ರಸಗೊಬ್ಬರ ಬಳಸೋದು ಗಿಡಗಳ ಮೇಲೆ ಹೆಚ್ಚುವರಿ ಹೊರೆಯಷ್ಟೆ. ಆದಕಾರಣ ಬೇಸಿಗೆಯಲ್ಲಿ ರಸಗೊಬ್ಬರ ಬಳಕೆ ಬೇಡ.

ನೆರಳು ನೀಡಿ
ಬೇಸಿಗೆಯ ಶಾಖವನ್ನು ತಾಳಿಕೊಳ್ಳಲು ಗಿಡಗಳಿಗೆ ಹಾಗೂ ಬಳ್ಳಿಗಳಿಗೆ ಕಷ್ಟವಾಗುತ್ತೆ. ಆದಕಾರಣ ನಿಮ್ಮ ಮನೆಯಲ್ಲಿ ಬಿಸಿಲು ಬೀಳುವ ಸ್ಥಳದಲ್ಲಿರುವ ಗಿಡ ಹಾಗೂ ಬಳ್ಳಿಗಳನ್ನು ನೆರಳಿರುವ ಸ್ಥಳದಲ್ಲಿಡಿ. ಸೂರ್ಯನ ಕಿರಣಗಳು ಗಿಡಗಳ ಮೇಲೆ ನೇರವಾಗಿ ಬೀಳದಂತೆ ಎಚ್ಚರ ವಹಿಸಿ. ಸಮರ್ಪಕವಾಗಿ ನೀರು ನೀಡಿ.