ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, ಜ್ಯೋತಿಷಿಗಳ ಸಲಹೆಯಂತೆ ವಾಸ್ತು ಪ್ರಕಾರ ವಿಧಾನಸೌಧದ ಸಾಂಪ್ರದಾಯಿಕ ಪಶ್ಚಿಮ ದ್ವಾರದ ಬದಲು 'ಉತ್ತರ ದ್ವಾರ'ದ ಮೂಲಕ ಪ್ರವೇಶಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.

ಬೆಂಗಳೂರು (ಜೂ.03): ಕರ್ನಾಟಕ ರಾಜಕೀಯದ 'ಮಹಾ ತಂತ್ರಗಾರ' ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಶಕ್ತಿ ಕೇಂದ್ರವಾದ ವಿಧಾನಸೌಧ ಪ್ರವೇಶದಲ್ಲೂ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದುವರೆಗೆ ರಾಜ್ಯದ ಮುಖ್ಯಮಂತ್ರಿಗಳಾದವರು ಪಶ್ಚಿಮ ದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸುತ್ತಿದ್ದ ವಾಡಿಕೆಯನ್ನು ಬದಿಗೊತ್ತಿ, ಡಿ.ಕೆ. ಶಿವಕುಮಾರ್ ಅವರು ಜ್ಯೋತಿಷಿಗಳ ಸಲಹೆಯಂತೆ ವಾಸ್ತು ಪ್ರಕಾರ 'ಉತ್ತರ ದ್ವಾರ'ದ ಮೂಲಕ ಪ್ರವೇಶಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂದಿ ಬಾಗಿಲಿನ ಮೂಲಕ ಹಸಿರು ನಿಶಾನೆ:

ಲೋಕಭವನದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರಿಂದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ, ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ವಿಧಾನಸೌಧದ 'ನಂದಿ ಬಾಗಿಲು' (ಉತ್ತರ ದ್ವಾರ) ಮೂಲಕ ಒಳಗೆ ಹೆಜ್ಜೆ ಇರಿಸಲಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳು ವಿಧಾನಸೌಧದ ಪ್ರಮುಖ ಧ್ವಾರವಾಗಿರುವ ಪಶ್ಚಿಮ ಬಾಗಿಲನ್ನೇ ಬಳಸುತ್ತಿದ್ದರು, ಆದರೆ ಡಿಕೆಶಿ ಅವರ ಈ ಬದಲಾವಣೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇದು ರಾಜ್ಯದ ಅಭಿವೃದ್ಧಿ ಮತ್ತು ತಮ್ಮ ಅಧಿಕಾರಾವಧಿಯ ಸ್ಥಿರತೆಗಾಗಿ ಕೈಗೊಂಡ ನಿರ್ಧಾರ ಎಂದು ಹೇಳಲಾಗುತ್ತಿದೆ.

ಜನಸಾಗರ ಮತ್ತು ಸಾಂಸ್ಕೃತಿಕ ವೈಭವ:

ಮುಖ್ಯಮಂತ್ರಿಗಳ ಸ್ವಾಗತಕ್ಕಾಗಿ ವಿಧಾನಸೌಧದ ಮುಂಭಾಗದ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಅಭಿಮಾನಿಗಳ ಸಾಗರವೇ ತುಂಬಿದೆ. ಡೊಳ್ಳು ಕುಣಿತ, ಯಕ್ಷಗಾನ ಕಲಾವಿದರ ನೃತ್ಯದೊಂದಿಗೆ ಡಿಕೆಶಿ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ರಸ್ತೆಯುದ್ದಕ್ಕೂ 'ಡಿ.ಕೆ. ಡಿ.ಕೆ.' ಎಂಬ ಘೋಷಣೆಗಳು ಮೊಳಗುತ್ತಿವೆ. ವಿಧಾನಸೌಧದ ಮುಂಭಾಗ ನೆರೆದಿದ್ದ ಸಹಸ್ರಾರು ಅಭಿಮಾನಿಗಳಿಗಾಗಿ ಬೃಹತ್ ಎಲ್‌ಇಡಿ (LED) ಪರದೆಗಳನ್ನು ಅಳವಡಿಸಲಾಗಿದ್ದು, ಪ್ರಮಾಣವಚನ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.

ಮಹನೀಯರಿಗೆ ಗೌರವ ಸಲ್ಲಿಕೆ:

ವಿಧಾನಸೌಧ ಪ್ರವೇಶಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಸಂಕೇತವಾಗಿ ಈ ಮಹನೀಯರ ಆಶೀರ್ವಾದ ಪಡೆದು ತಮ್ಮ ಆಡಳಿತದ ಮೊದಲ ದಿನವನ್ನು ಆರಂಭಿಸಲಿದ್ದಾರೆ.

ವಿದ್ಯಾರ್ಥಿ ನಾಯಕನಿಂದ ಮುಖ್ಯಮಂತ್ರಿ ಹುದ್ದೆಯವರೆಗೆ:

1981ರಲ್ಲಿ ಎನ್‌ಎಸ್‌ಯುಐ (NSUI) ಮೂಲಕ ರಾಜಕೀಯ ಪ್ರವೇಶಿಸಿದ ಡಿ.ಕೆ. ಶಿವಕುಮಾರ್ ಅವರ ಪಯಣ ಸುಲಭದ್ದಾಗಿರಲಿಲ್ಲ. 1985ರಲ್ಲಿ ಎಚ್.ಡಿ. ದೇವೇಗೌಡರ ವಿರುದ್ಧ ಸೋತರೂ ಎದೆಗುಂದದ ಅವರು, 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು, 'ಬಂಡೆಯಂತೆ' ಕಾಂಗ್ರೆಸ್ ಪಕ್ಷವನ್ನು ಕಾಯುತ್ತಾ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಇದೀಗ ಉಪಮುಖ್ಯಮಂತ್ರಿ ಹುದ್ದೆಯ ಹಂತ ದಾಟಿ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ಸಚಿವ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ 'ಸರ್ವಜನಾಂಗದ ಶಾಂತಿಯ ತೋಟ' ಎಂಬ ತತ್ವಕ್ಕೆ ಡಿಕೆಶಿ ಒತ್ತು ನೀಡಿದ್ದಾರೆ. 55 ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ ಇವರ ಆಡಳಿತ ರಾಜ್ಯದ ಪಾಲಿಗೆ ಹೊಸ ಭರವಸೆಯನ್ನು ತಂದಿದೆ.