ವಾಸ್ತು ಶಾಸ್ತ್ರಕ್ಕೆ ಇರುವ ಮಹತ್ವದ ಬಗ್ಗೆ ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ವ್ಯಕ್ತಿಯ ಜೀವನದಲ್ಲಿ ಮುಖ್ಯವಾದ ಹಲವಾರು ವಿಚಾರಗಳು ವಾಸ್ತು ಪ್ರಕಾರ ಇದ್ದಾಗ ಮಾತ್ರ ಮನೆ ಮತ್ತು ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಹಾಗಾಗಿ ವಾಸಿಸ ಬೇಕಾದ ಮನೆಯ ವಾಸ್ತುವು ಮುಖ್ಯವಾಗುತ್ತದೆ. ಮನೆಗೆ ಅಡಿಪಾಯ ತೆಗೆಯುವುದರಿಂದ ಆರಂಭವಾಗಿ, ಮನೆಯ ಹಿಂಬದಿ ನಿರ್ಮಾಣ ಪೂರ್ಣ ಆಗುವವರೆಗೂ ವಾಸ್ತು ಬಹುಮುಖ್ಯವಾಗುತ್ತದೆ.

ಮನೆಯು ಸಕಾರಾತ್ಮಕವಾಗಿ ಅಭಿವೃದ್ಧಿ ಹೊಂದಲು ಸರಿಯಾದ ದಿಕ್ಕು ಮತ್ತು  ಸ್ಥಳದಲ್ಲಿ ವಾಸ್ತು ಪ್ರಕಾರ ಮನೆಯನ್ನು ನಿರ್ಮಿವುದು ಅವಶ್ಯಕವಾಗಿರುತ್ತದೆ. ಮನೆಯನ್ನು ನಿರ್ಮಿಸಬೇಕೆಂದುಕೊಂಡಾಗ ಮೊದಲ ಕೆಲಸವೇ ಅಡಿಪಾಯ ತೆಗೆಯುವುದು. ವಾಸ್ತು ಪ್ರಕಾರ ಅಡಿಪಾಯವಿದ್ದಲ್ಲಿ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ತುಂಬಿರುತ್ತದೆ. ಅಂಥ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚು ಪ್ರವಹಿಸುತ್ತದೆ. ಹಾಗಾಗಿ ಅಡಿಪಾಯದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ತಿಳಿಯೋಣ...

ಇದನ್ನು ಓದಿ: ಗಜಕೇಸರಿ ಯೋಗವಿದ್ದರೆ ಅದೃಷ್ಟ – ಜಾತಕದಲ್ಲಿ ಹೀಗಿದ್ದರೆ ಉತ್ತಮ ಫಲ!

ಯಾವ ಮಾಸದಲ್ಲಿ ಅಡಿಪಾಯ ತೆಗೆದರೆ ಒಳಿತು/ಕೆಡಕು?

ಈ ಮಾಸಗಳಲ್ಲಿ ಮನೆಯ ನಿರ್ಮಾಣದ ಅಡಿಪಾಯಕ್ಕೆ ಅತ್ಯಂತ ಪ್ರಶಸ್ತವಾಗಿದೆ ಎಂದು ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ತಿಳಿಸಲಾಗಿದೆ.

- ವೈಶಾಖ, ಶ್ರಾವಣ, ಮಾರ್ಗಶಿರ, ಕಾರ್ತಿಕ ಮತ್ತು ಫಾಲ್ಗುಣ ಮಾಸಗಳು ಮನೆಯ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಆರಂಭಿಸಲು ಅತ್ಯಂತ ಪ್ರಶಸ್ತವಾದ ಮಾಸವಾಗಿರುತ್ತದೆ.- ಉಳಿದ ಮಾಸಗಳಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಆರಂಭಿಸುವುದು ಅಷ್ಟು ಸೂಕ್ತವಲ್ಲವೆಂದು ಹೇಳಲಾಗುತ್ತದೆ. ಇದರಿಂದ ಕೆಡಕು ಇಲ್ಲವೇ ತೊಡಕಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿದೆ. 

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ

ಮತ್ತೆ ಏನೇನು ಆಗಬೇಕು/ಆಗಬಾರದು..?

-  ಮನೆ ನಿರ್ಮಿಸುವ ಸಂದರ್ಭದಲ್ಲಿ ಮತ್ತು ಭೂಮಿ ಪೂಜೆಯ ಸಂದರ್ಭದಲ್ಲಿ ಧ್ರುವ ತಾರೆಗಳ ಬಗ್ಗೆ ಗಮನ ಹರಿಸುವುದು ಅತ್ಯವಶ್ಯಕ.

-  ಮನೆಗೆ ಅಡಿಪಾಯ ತೆಗೆಯಲು ಸಂಜೆಯ ಸಮಯ ಅಥವಾ ಮಧ್ಯರಾತ್ರಿಯ ಅವಧಿ ಸೂಕ್ತವಲ್ಲ. 

- ಅಷ್ಟೇ ಅಲ್ಲದೆ ಮನೆ ನಿರ್ಮಾಣಕ್ಕೆ ಅಡಿಪಾಯಕ್ಕೆ ಮೊದಲಿಗೆ ಬಳಸುವ ಇಟ್ಟಿಗೆ, ಕಲ್ಲು, ಸರಳು ಇತ್ಯಾದಿ  ಎಲ್ಲಾ ಸಾಧನಗಳು ಹೊಸದಾಗಿರಬೇಕು.

- ಅಡಿಪಾಯ ತೆಗೆಯುವಾಗ ಮೊದಲು ಈಶಾನ್ಯ ದಿಕ್ಕಿನಿಂದ ಆರಂಭಿಸಬೇಕು. ನಂತರ ಅಗ್ನಿ ಮೂಲೆಯಿಂದ ಅಡಿಪಾಯ ತೆಗೆಯಬೇಕು. ಈ ಕೋನದಲ್ಲಿ ಭೂಮಿಯನ್ನು ಅಗೆದ ನಂತರ ನೈರುತ್ಯ ದಿಕ್ಕಿನ ಮೂಲೆಯಿಂದ ಮತ್ತೆ ಆರಂಭಿಸಬೇಕು. ಇದೇ ತೆರನಾಗಿ ಪೂರ್ವ ಉತ್ತರ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಭೂಮಿಯನ್ನು ಅಗೆಯಬೇಕು.

- ರವಿ ಪುಷ್ಯ ಯೋಗ ಅಥವಾ ಪ್ರಶಸ್ತವಾದ ಮುಹೂರ್ತವನ್ನು ನೋಡಿ ಅಡಿಪಾಯವನ್ನು ಹಾಕಬೇಕು.
- ಹಾಲು, ಮೊಸರು ಮತ್ತು ತುಪ್ಪವನ್ನು ಅಡಿಪಾಯ ತೆಗೆದು ಪೂಜೆ ಮಾಡುವ ದಿನ ಉಪಯೋಗಿಸಬೇಕು.

ಈ ವಸ್ತುಗಳು ಸಿಕ್ಕರೆ ಅಪಾಯ..!

- ಅಡಿಪಾಯಕ್ಕಾಗಿ ಭೂಮಿ ಅಗೆಯುವಾಗ ಬೂದಿ, ಕಲ್ಲಿದ್ದಲು, ಮೂಳೆ ಇತ್ಯಾದಿ ಅಶುಭ ವಸ್ತುಗಳು ದೊರಕಿದರೆ, ಆ ಸ್ಥಳ ಮನೆ ಕಟ್ಟಲು ಯೋಗ್ಯವಲ್ಲವೆಂದೇ ಅರ್ಥ.
- ಇಂಥ ಸ್ಥಳದಲ್ಲಿ ಮನೆ ಕಟ್ಟಿ, ವಾಸಿಸಿದರೆ ಸದಾ ರೋಗದಿಂದ ಬಳಲಬೇಕಾಗುತ್ತದೆ. ಹಾಗಾಗಿ ಮನೆ ಕಟ್ಟುವ ಜಾಗದಲ್ಲಿ ವಾಸ್ತು ನೋಡಿ ಕಟ್ಟುವುದು ಅವಶ್ಯಕ.
- ಕೆಲವು ಸಂದರ್ಭಗಳಲ್ಲಿ ಅದೇ ಜಾಗದಲ್ಲಿ ಮನೆ ಕಟ್ಟಬೇಕಾದಂತ, ಅನಿವಾರ್ಯತೆ ಇದ್ದಾಗ ದೋಷ ನಿವಾರಣೆಗೆ ಶಾಂತಿಯನ್ನು ಮಾಡಿಸಿಕೊಳ್ಳಬೇಕು.

ಇದನ್ನು ಓದಿ: ಶನಿ ಉದಯದಿಂದ ಶುಭ ಫಲಗಳನ್ನು ಪಡೆಯುವ ರಾಶಿಗಳಿವು

ಆರೋಗ್ಯ ಹದಗೆಟ್ಟಿದ್ದರೆ ಒಮ್ಮೆ ಪರಾಮರ್ಶಿಸಿ

- ಮನೆಯಲ್ಲಿ ಗರ್ಭಿಣಿ ಇದ್ದು, ದಿನ ತುಂಬಿದ್ದರೆ ಅಂತಹ ಸಂದರ್ಭದಲ್ಲಿ ಭೂಮಿಪೂಜೆಯನ್ನು ಅಥವಾ ಹೊಸ ಮನೆ ನಿರ್ಮಾಣ ಕಾರ್ಯವನ್ನು ಮುಂದೂಡುವುದು ಉತ್ತಮ.
- ಮನೆಯ ಸದಸ್ಯರು ಯಾರಿಗಾದರೂ ಆರೋಗ್ಯ ತೀರಾ ಹದಗೆಟ್ಟಿದ್ದರೂ ಈ ಕಾರ್ಯಕ್ರಮವನ್ನು ಮುಂದೂಡುವುದು ಒಳ್ಳೆಯದು. 
- ಅಡಿಪಾಯ ತೆಗೆದು ಪೂಜೆ ನೆರವೇರಿಸುವ ಸಂದರ್ಭದಲ್ಲಿ ಜೋಡಿ ಸರ್ಪದ ಬೆಳ್ಳಿ ಪ್ರತಿಮೆಯನ್ನು ಭೂಮಿಯಲ್ಲಿ ಇಡುವ ವಾಡಿಕೆ ಇದೆ. ಪಾತಾಳ ಲೋಕದ ಸ್ವಾಮಿ ಸರ್ಪ ರಾಜ. ಹಾಗಾಗಿ ಈ ರೀತಿ ಮಾಡುವುದರಿಂದ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.