ಗಜಕೇಸರಿ ಯೋಗವಿದ್ದರೆ ಅದೃಷ್ಟ – ಜಾತಕದಲ್ಲಿ ಹೀಗಿದ್ದರೆ ಉತ್ತಮ ಫಲ!
ಮಗುವು ಜನಿಸಿದ ಸಮಯ, ವಾರ, ತಿಥಿ ಇವುಗಳೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮಗುವಿನ ಜಾತಕವನ್ನು ತಯಾರಿಸಲಾಗುತ್ತದೆ. ಜಾತಕದಿಂದ ಭವಿಷ್ಯದ ಬಗೆಗಿನ ವಿಚಾರವನ್ನು ತಿಳಿಯುವುದಲ್ಲದೆ,ಅದರಲ್ಲಿರುವ ಯೋಗಗಳ ಬಗ್ಗೆಯೂ ತಿಳಿಯಬಹುದಾಗಿದೆ. ಜಾತಕದಲ್ಲಿ ಬರುವ ಅನೇಕ ಯೋಗಗಳಲ್ಲಿ ಗಜಕೇಸರಿ ಯೋಗವು ಒಂದಾಗಿದೆ. ಗಜಕೇಸರಿ ಯೋಗವು ಅದೃಷ್ಟವನ್ನು ತಂದುಕೊಡುವ ಯೋಗವಾಗಿದೆ. ಹಾಗಾದರೆ ಜಾತಕದ ಪ್ರತ್ಯೇಕ ಭಾವಗಳಲ್ಲಿ ಉಂಟಾಗುವ ಗಜಕೇಸರಿ ಯೋಗದ ಫಲಗಳನ್ನು ತಿಳಿಯೋಣ..
ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಯೋಗಗಳಿವೆ. ವ್ಯಕ್ತಿಯ ಜಾತಕದ ಪ್ರಕಾರ ಆಯಾ ಯೋಗದ ಫಲವು ಲಭಿಸುತ್ತದೆ. ಕೆಲವು ಯೋಗಗಳು ಅದೃಷ್ಟವನ್ನು ತಂದರೆ, ಮತ್ತೆ ಕೆಲವು ಯೋಗಗಳು ಸಂಕಷ್ಟವನ್ನು ಕೊಡುತ್ತವೆ. ಗಜಕೇಸರಿ ಯೋಗವನ್ನು ಅತ್ಯಂತ ಶುಭಫಲವನ್ನು ನೀಡುವ ಯೋಗವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.
ಗುರುಗ್ರಹ ಮತ್ತು ಚಂದ್ರ ಗ್ರಹಗಳ ಯೋಗದಿಂದ ಗಜಕೇಸರಿ ಯೋಗವುಂಟಾಗುತ್ತದೆ. ಜಾತಕದ ಹನ್ನೆರಡು ಮನೆಗಳಲ್ಲಿ ಯಾವುದಾದರು ಮನೆಯಲ್ಲಿ ಚಂದ್ರ ಮತ್ತು ಗುರುಗ್ರಹದ ಯುತಿ ಉಂಟಾದರೆ ಅದನ್ನು ಗಜಕೇಸರಿ ಯೋಗವೆಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಈ ಎರಡು ಗ್ರಹಗಳ ಮೇಲೆ ಯಾವುದೇ ಪಾಪಗ್ರಹಗಳ ದೃಷ್ಠಿ ಬೀಳದಿದ್ದಲ್ಲಿ ಮಾತ್ರ ಈ ಯೋಗವು ಅದೃಷ್ಟವನ್ನು ತರುತ್ತದೆ. ಗ್ರಹಗಳ ಯುತಿ ಉಂಟಾಗದೆ ಕೇವಲ ಗುರುಗ್ರಹ ಮತ್ತು ಚಂದ್ರ ಗ್ರಹಗಳು ಒಬ್ಬರ ಮೇಲೊಬ್ಬರು ದೃಷ್ಠಿ ಬೀರಿದಲ್ಲಿ ಸಹ ಈ ಯೋಗವುಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಶಾಸ್ತ್ರದ ಅನುಸಾರ ಗಜ ಎಂದರೆ ಗಣಪತಿಯ ಪ್ರತೀಕ. ಗಣಪತಿಯು ಬುದ್ಧಿಯನ್ನು ನೀಡುವ ದೇವರು, ಹಾಗಾಗಿ ಯಾರ ಜಾತಕದಲ್ಲಿ ಗಜಕೇಸರಿ ಯೋಗವಿರುತ್ತದೊ ಅವರ ಬೌದ್ಧಿಕ ಕ್ಷಮತೆ ಹೆಚ್ಚುತ್ತದೆ.
ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸುತ್ತಿರುವ ಸೂರ್ಯ- ಈ ರಾಶಿಗೆ ಸಿಗುತ್ತೆ ಸರ್ಕಾರಿ ಉದ್ಯೋಗ...
ಗಜಕೇಸರಿ ಯೋಗದಿಂದ ಸಿಗುವ ಫಲಗಳು
ಗಜಕೇಸರಿ ಯೋಗದಲ್ಲಿ ಹುಟ್ಟಿದವರು ಇತರರ ಮಾತನ್ನು ಚೆನ್ನಾಗಿ ಅರ್ಥೈಸಿಕೊಳ್ಳುವುದಲ್ಲದೆ, ತಮ್ಮ ಮಾತನ್ನು ಇತರರಿಗೆ ಅರ್ಥವಾಗುವಂತೆ ಮಾಡುತ್ತಾರೆ. ಈ ಯೋಗದಲ್ಲಿ ಜನಿಸಿದವರ ಆರೋಗ್ಯವು ಉತ್ತಮವಾಗಿರುತ್ತದೆ. ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ಯೋಗ ನಿರ್ಮಾಣವಾದಾಗ, ಅನೇಕ ಮೂಲಗಳಿಂದ ಧನಲಾಭವಾಗುತ್ತದೆ. ಸಮಾಜದಲ್ಲಿ ಗೌರವಾದರಗಳು ಹೆಚ್ಚುತ್ತವೆ. ಈ ವ್ಯಕ್ತಿಗಳು ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತರುವಲ್ಲಿ ಶ್ರಮವಹಿಸುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿದ ಕೆಲಸಗಳಲ್ಲಿದ್ದರೆ ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾರೆ. ಈ ವ್ಯಕ್ತಿಗಳ ಜೀವನವು ಸುಖವಾಗಿರುತ್ತದೆ.
ಜಾತಕದಲ್ಲಿ ಪ್ರತ್ಯೇಕ ಭಾವಗಳಲ್ಲಿ ಗಜಕೇಸರಿ ಯೋಗವುಂಟಾದರೆ ಫಲಗಳೇನು?
- ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪ್ರಥಮ ಭಾವದಲ್ಲಿ ಅಂದರೆ ಒಂದನೇ ಮನೆಯಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಯು ಬುದ್ಧಿವಂತನಾಗುತ್ತಾನೆ.
- ದ್ವೀತಿಯ ಭಾವದಲ್ಲಿ ಗಜಕೇಸರಿ ಯೋಗವು ನಿರ್ಮಾಣವಾದರೆ ಅಂಥ ವ್ಯಕ್ತಿಗಳಿಗೆ ಹಣದ ಸಮಸ್ಯೆ ಎದುರಾಗುವುದಿಲ್ಲ.
ಇದನ್ನು ಓದಿ: ಶನಿ ಉದಯದಿಂದ ಶುಭ ಫಲಗಳನ್ನು ಪಡೆಯುವ ರಾಶಿಗಳಿವು...
- ಮೂರನೇ ಮನೆಯಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಯು ಸಾಹಸಿ ಪ್ರವೃತ್ತಿಯನ್ನು ಹೊಂದುತ್ತಾನೆ.
- ಚತುರ್ಥ ಭಾವದಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಯು ವಿದ್ವಾನ್ ಆಗುತ್ತಾನೆ ಮತ್ತು ಕುಟುಂಬ ಜೀವನ ಅತ್ಯಂತ ಸುಖಕರವಾಗಿರುತ್ತದೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಂಚಮ ಭಾವದಲ್ಲಿ ಅಂದರೆ ಐದನೇ ಮನೆಯಲ್ಲಿ ಗಜಕೇಸರಿ ಯೋಗವು ಬಂದರೆ ವ್ಯಕ್ತಿಗೆ ಶಿಕ್ಷಣದಲ್ಲಿ ಮತ್ತು ಪ್ರೀತಿಯಲ್ಲಿ ಯಶಸ್ಸು ದೊರೆಯುತ್ತದೆ.
- ಏಳನೇ ಮನೆಯಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಗೆ ವ್ಯಾಪಾರದಲ್ಲಿ ಸಫಲತೆ ದೊರೆಯುತ್ತದೆ. ಇದರೆ ಜೊತೆಗೆ ವೈವಾಹಿಕ ಜೀವನವು ಶಾಂತಿಯುತವಾಗಿರುತ್ತದೆ.
- ನವಮ ಭಾವದಲ್ಲಿ ಅಂದರೆ ಒಂಭತ್ತನೆ ಮನೆಯಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬರುವುದಲ್ಲದೆ, ಉತ್ತಮವಾದ ಸಲಹೆಗಳನ್ನು ನೀಡುವವನಾಗುತ್ತಾನೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಶಮ ಭಾವದಲ್ಲಿ ಯೋಗವುಂಟಾದರೆ ವ್ಯಕ್ತಿಗೆ ಜೀವನದಲ್ಲಿ ಹಣದ ಕೊರೆತೆಯುಂಟಾಗುವುದಿಲ್ಲ.
- ಹನ್ನೊಂದನೇ ಮನೆಯಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಗೆ ಸರ್ಕಾರಿ ಸೇವಗಳಲ್ಲಿ ಉಚ್ಛ ಪದವಿ ಸಿಗುತ್ತದೆ. ಈ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತಾರೆ. ಜನಮನ್ನಣೆಯನ್ನು ಸಹ ಗಳಿಸುತ್ತಾರೆ.
ಇದನ್ನು ಓದಿ: ಈ 6 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿಯೇ ಇರೋದಿಲ್ವಂತೆ..!
- ಆರನೇ, ಎಂಟನೇ ಮತ್ತು ಹನ್ನೆರಡನೆ ಮನೆಯಲ್ಲಿ ಗಜಕೇಸರಿ ಯೋಗವುಂಟಾದರೆ ಹೆಚ್ಚು ಉತ್ತಮ ಫಲಗಳನ್ನು ನೀಡುವುದಿಲ್ಲ. ಈ ಮೂರು ಭಾವಗಳನ್ನು ಹೊರತುಪಡಿಸಿ ಉಳಿದೆಲ್ಲ ಮನೆಗಳಲ್ಲಿ ಗಜಕೇಸರಿ ಯೋಗವುಂಟಾದರೆ ವ್ಯಕ್ತಿಗೆ ಅದೃಷ್ಟ ಒಲಿದು ಬರುತ್ತದೆ.