Asianet Suvarna News Asianet Suvarna News

Uttara Kannada: ಶಿರಸಿ ಪ್ರತ್ಯೇಕ ಜಿಲ್ಲೆಗೆ ಸಹಮತಿ ಸೂಚನೆ ನೀಡಿದ ಶಿವರಾಮ್ ಹೆಬ್ಬಾರ್

ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಹೋರಾಟ ಆರಂಭವಾಗಿದೆ. ಈ ಬಗ್ಗೆ ನಾನೆಲ್ಲೂ ಪ್ರಸ್ತಾಪ ಮಾಡಿಲ್ಲ. ಆದರೆ, ಜಿಲ್ಲೆ ಇಬ್ಭಾಗದ ಕುರಿತು ಬುದ್ಧಿ ಜೀವಿಗಳು ಹಾಗೂ ಶಾಸಕರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

Shivram Hebbar gave consent notice for separate district of Shirsi sat
Author
First Published Dec 10, 2022, 5:18 PM IST

ಉತ್ತರ ಕನ್ನಡ (ಡಿ.10) : ರಾಜ್ಯದಲ್ಲಿ ಈವರೆಗೆ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿಬರುತ್ತಿದ್ದ ವಿಜಯನಗರ ಜಿಲ್ಲೆಯ ರಚನೆಯ ಒಂದೆರಡು ವರ್ಷಗಳಲ್ಲಿ ಈಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಹೋರಾಟ ಆರಂಭವಾಗಿದೆ. ಈ ಬಗ್ಗೆ ನಾನೆಲ್ಲೂ ಪ್ರಸ್ತಾಪ ಮಾಡಿಲ್ಲ. ಆದರೆ, ಜಿಲ್ಲೆ ಇಬ್ಭಾಗದ ಕುರಿತು ಬುದ್ಧಿ ಜೀವಿಗಳು ಹಾಗೂ ಶಾಸಕರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾರ್ಮಿಕ ಕಲ್ಯಾಣ ಸಚಿವ ಶಿವರಾಮ್ ಹೆಬ್ಬಾರ್‌ ತಿಳಿಸಿದ್ದಾರೆ.

ಈ ಕುರಿತು ಜಿಲ್ಲೆಯ ಆಂಕೋಲಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆ ಇಬ್ಭಾಗ ಮಾಡುವ ಕುರಿತು ನಾನು ಯಾವತ್ತೂ ಪ್ರಸ್ತಾಪ ಮಾಡಿಲ್ಲ, ಇವತ್ತೂ ಈ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ನಾನು ಹೇಳುವುದಿಲ್ಲ. ಹೆಚ್ಚಾಗಿ ಈ ಬಗ್ಗೆ ಮಾತನಾಡುವುದಕ್ಕೆ ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವನೂ ಅಲ್ಲ. ಹೀಗಾಗಿ, ಪ್ರತ್ಯೇಕ ಜಿಲ್ಲೆಯ ರಚನೆ ವಿಚಾರ ಈಗ ಜವಾಬ್ದಾರಿ ನನ್ನದಲ್ಲ. ಆದರೆ, ಜಿಲ್ಲೆಯ ಶಾಸಕನಾಗಿ ನಾನು ಮಾತನಾಡುವುದು ಅವಶ್ಯಕವಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯವಾಗುತ್ತದೆ. ಹೀಗಾಗಿ, ಜಿಲ್ಲೆಯ ಇಬ್ಭಾಗದ ಕುರಿತು ಸ್ಥಳೀಯ ಬುದ್ಧಿ ಜೀವಿಗಳು ಮತ್ತು ನಮ್ಮೆಲ್ಲ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಆದರೆ, ಈ ಬದಲಾವಣೆ ಎಲ್ಲರ ಅಭಿಪ್ರಾಯದೊಂದಿಗೆ ಆಗಬೇಕು. ಆದರೆ, ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಸ್ಪೀಕರ್ ಕಾಗೇರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಮಳೆಗಾಲದಲ್ಲಿ ಸೋರುವ ಮಧುಕೇಶ್ವರ ದೇಗುಲ; ಪುರಾತತ್ವ ಇಲಾಖೆ ವಿರುದ್ಧ ಆಕ್ರೋಶ

ವಿಶ್ವನಾಥ್‌ ಅವರೊಂದಿಗೆ ಚರ್ಚೆ: ಇನ್ನು ಜಿಲ್ಲೆಯಲ್ಲಿ ಬಿಜೆಪಿ ನಾಯಕರಾಗಿರುವ ವಿಶ್ವನಾಥ ಅವರು ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಈ ವಿಷಯದ ಬಗ್ಗೆ ನಾನು ಕೂಡ ಪತ್ರಿಕೆಯಲ್ಲಿ ಓದಿದ್ದೇನೆ. ಅವರು ನನ್ನ ಸ್ನೇಹಿತರು. ಅವರೊಂದಿಗೆ ಈ ವಿಚಾರದ ಕುರಿತು ನಾನು ಮಾತನಾಡಿಲ್ಲ. ಆದರೆ, ಅವರ ಮನವೊಲಿಸಲು ನಾನು ಯಾವುದೇ ಮುಂದಾಳತ್ವನ್ನು ವಹಿಸಿಕೊಳ್ಳುವುದಿಲ್ಲ. ಅವರು ಪಕ್ಷದಲ್ಲಿ ಹಿರಿಯರು, ಪಕ್ಷ ಬಿಡುವ ವಿಚಾರವಾಗಿ ನಿಶ್ಚಿತವಾಗಿ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. 

ಟಿಕೆಟ್ ಹಂಚಿಕೆ ಹೈಕಮಾಂಡ್‌ ನಿರ್ಧಾರ: ಈಗಾಗಲೇ ಗುಜರಾತ್‌ ಮಾಡೆಲ್‌ (ಹೊಸಬರಿಗೆ ಟಿಕೆಟ್‌ ಹಂಚಿಕೆ) ಅನ್ನು ಕರ್ನಾಟಕದಲ್ಲಿ ಜಾರಿಗೊಳಿಸಿ ಹೊಸ ಮುಖಗಳಿಗೆ ಟಿಕೆಟ್‌ ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ವಿಷಯದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.

Assembly Election: ಕಾಗೇರಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕೋದ್ಯಾರು?

ಸ್ಪೀಕರ್ ಕಾಗೇರಿ ಹೇಳಿದ್ದೇನು? : ಶಿರಸಿಯಲ್ಲಿ ಡಿ.6ರಂದು ನಡೆದ ಕಾರ್ಮಿಕ ವಿಮಾ ಚಿಕಿತ್ಸಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆ ದೊಡ್ಡದಾಗಿದ್ದು, ಪ್ರತ್ಯೇಕ ಜಿಲ್ಲೆ ಮಾಡಿದಲ್ಲಿ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ. ಈಗಾಗಲೇ ರಾಜ್ಯದಲ್ಲಿ ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ಉಡುಪಿ ಜಿಲ್ಲೆಗಳು ಪ್ರತ್ಯೇಕ ಜಿಲ್ಲೆಗಳಾಗಿ ಅಸ್ತಿತ್ವ ಕಂಡುಕೊಂಡಿವೆ. ಇತ್ತೀಚೆಗೆ ವಿಜಯನಗರ ಜಿಲ್ಲೆ ಕೂಡ ಸ್ಥಾಪನೆಯಾಗಿದೆ. ಸೂಕ್ತ ಕಾಲಕ್ಕೆ ಸರ್ಕಾರ ಸ್ಪಂದಿಸಿ ಜನರ ಭಾವನೆಗೆ ಬೆಲೆ ಕೊಡಲಿದೆ ಎಂದು ತಿಳಿಸಿದ್ದರು. 

Follow Us:
Download App:
  • android
  • ios