ಮಲೆನಾಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದುವರೆಗೂ ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗಕ್ಕೆ ಭರವಸೆ ನೀಡಿದರು.
ಶಿರಸಿ (ಮಾ.18): ಬೇಡ್ತಿ-ಅಘನಾಶಿನಿ ಯೋಜನೆ ಕುರಿತು ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ. ಮಲೆನಾಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದುವರೆಗೂ ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗಕ್ಕೆ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನೀರಾವರಿ ಸಚಿವರ ಕೊಠಡಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರು ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗ ಡಿಸಿಎಂ ಅವರನ್ನು ಭೇಟಿ ಮಾಡಿ ಈ ಯೋಜನೆಯಿಂದ ಉಂಟಾಗಲಿರುವ ಸಮಸ್ಯೆಗಳ ಬಗ್ಗೆ ವಿವರಿಸಿ, ಯಾವುದೇ ಕಾರಣಕ್ಕೂ ಯೋಜನೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿತು.
ಬೇಡ್ತಿ-ವರದಾ ಯೋಜನೆ ಬಗ್ಗೆ ಪುನರ್ ಪರಿಶೀಲನೆ ಅಗತ್ಯ. ಅಘನಾಶಿನಿ-ವೇದಾವತಿ ತಿರುವು ಬಗ್ಗೆ ಆರಂಭಿಕ ಪರಿಶೀಲನೆಯೇ ಆಗಿಲ್ಲ. ಸೋಂದಾ ಸ್ವರ್ಣವಲ್ಲೀ ಶ್ರೀಗಳು, ಜನಪ್ರತಿನಿಧಿಗಳು, ಜನತೆ ಬೃಹತ್ ಜನಾಂದೋಲನ ನಡೆಸಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ವಿಧಾನಸಭಾ ಅಧಿವೇಶನದ ಒತ್ತಡದಲ್ಲೂ ಬೇಡ್ತಿ-ಅಘನಾಶಿನಿ ನಿಯೋಗದ ಜೊತೆ ಮಾತುಕತೆ ಏರ್ಪಡಿಸಿದ್ದೇವೆ. ಸ್ವರ್ಣವಲ್ಲೀ ಶ್ರೀಗಳ ಸೂಚನೆಯಂತೆ ಈ ಸಭೆ ಏರ್ಪಡಿಸಿದ್ದೇವೆ ಎಂದರು.
ಯೋಜನೆಗಳಿಗೇ ನೀರಿಲ್ಲ
ಶಾಸಕ ಭೀಮಣ್ಣ ನಾಯ್ಕ ನೀರಿಲ್ಲದ ನದಿ ತಿರುವು ವ್ಯರ್ಥ ಎಂದು ಹೇಳಿದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಬೇಡ್ತಿಯಿಂದ ಕೆರೆ ತುಂಬಿಸುವ, ಕುಡಿಯುವ ನೀರಿನ 4 ಯೋಜನೆಗಳಿಗೇ ನೀರಿಲ್ಲ ಎಂದು ವಾಸ್ತವ ಚಿತ್ರಣ ನೀಡಿದರು. ಕುಮಟಾ ಶಾಸಕ ದಿನಕರ ಶೆಟ್ಟಿ, ಕರಾವಳಿ ಮೀನುಗಾರರು, ರೈತರು ಬೇಡ್ತಿ-ಗಂಗಾವಳಿ, ಅಘನಾಶಿನಿ ನದಿಗಳ ಸಿಹಿ ನೀರಿನ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ ಎಂದರು. ವಿಧಾನಪರಿಷತ್ ಶಾಸಕ ಶಾಂತಾರಾಮ ಸಿದ್ಧಿ, ವನವಾಸಿಗಳ ಬದುಕು ನದಿ ತಿರುವಿನಿಂದ ಅತಂತ್ರವಾಗಲಿದೆ ಎಂದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಭೂಕುಸಿತ ವರದಿ, ಧಾರಣಾ ಸಾಮರ್ಥ್ಯ ವರದಿ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಇತ್ಯಾದಿ ತಜ್ಞರ ವರದಿ ನೀಡಿದರು. 3 ಲಕ್ಷ ಜನರ ಆತಂಕದ ಬೇಡ್ತಿ-ಅಘನಾಶಿನಿ ನದಿ ಉಳಿಸಿ ಎಂದು ಅಹವಾಲು ಸಲ್ಲಿಸಿದರು.
ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿಘ್ನೆಶ್ವರ ಹೆಗಡೆ ಬೊಮ್ಮನಳ್ಳಿ ಬೇಡ್ತಿ ಪ್ರದೇಶ, ಸೋಂದಾ ಸ್ವರ್ಣವಲ್ಲೀಗೆ ಭೇಟಿ ನೀಡಲು ಡಿ.ಕೆ. ಶಿವಕುಮಾರ ಅವರಿಗೆ ಆಹ್ವಾನ ನೀಡಿದರು. ಪರಿಸರ ತಜ್ಞ ಡಾ. ಬಾಲಚಂದ್ರ ಸಾಯಿಮನೆ ನೀರಿನ ಲಭ್ಯತೆಯ ನೈಜ ಚಿತ್ರಣ ಮುಂದಿಟ್ಟರು. ಗೋಪಾಲಕೃಷ್ಣ ತಂಗಾರ್ಮರನೆ, ವಿಶ್ವನಾಥ ಶೀಗೆಹಳ್ಳಿ ಅಶ್ವಿನಿ ಕುಮಾರ, ವಿವೇಕ್ ಗಡಿಹಿತ್ಲು, ರವಿ ಮತ್ತಿತರರು ಇದ್ದರು. ನಂತರ ಬೇಡ್ತಿ ಸಮಿತಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿತು. ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಗಮನವನ್ನೂ ಸೆಳೆಯಿತು.

