ಮಳೆಗಾಲದಲ್ಲಿ ಸೋರುವ ಮಧುಕೇಶ್ವರ ದೇಗುಲ; ಪುರಾತತ್ವ ಇಲಾಖೆ ವಿರುದ್ಧ ಆಕ್ರೋಶ

ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುವ ಸುಪ್ರಸಿದ್ಧ ಕ್ಷೇತ್ರ ಬನವಾಸಿಯ ಮಧುಕೇಶ್ವರ ದೇವಸ್ಥಾನ ದುರಸ್ತಿ ಕಾರ್ಯವನ್ನು ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತನ್ನ ಮಾತನ್ನು ಮರೆತು, ಸುದ್ದಿಯೇ ಇಲ್ಲದಂತೆ ಸುಮ್ಮನೆ ಕುಳಿತಿರುವುದನ್ನು ಬನವಾಸಿ ತಾಲೂಕು ಹೋರಾಟ ಸಮಿತಿ ಖಂಡಿಸಿದೆ.

madhukeshwar temple leaking in rainy days demands resettlement at sirsi banavasi rav

ಶಿರಸಿ (ಡಿ.3) ; ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುವ ಸುಪ್ರಸಿದ್ಧ ಕ್ಷೇತ್ರ ಬನವಾಸಿಯ ಮಧುಕೇಶ್ವರ ದೇವಸ್ಥಾನ ದುರಸ್ತಿ ಕಾರ್ಯವನ್ನು ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತನ್ನ ಮಾತನ್ನು ಮರೆತು, ಸುದ್ದಿಯೇ ಇಲ್ಲದಂತೆ ಸುಮ್ಮನೆ ಕುಳಿತಿರುವುದನ್ನು ಬನವಾಸಿ ತಾಲೂಕು ಹೋರಾಟ ಸಮಿತಿ ಖಂಡಿಸಿದೆ.

ಈ ಕುರಿತು ಹೇಳಿಕೆಯಲ್ಲಿ ತಿಳಿಸಿರುವ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಗೌರವಾಧ್ಯಕ್ಷ ಸಿ. ಎಫ್‌. ನಾಯ್ಕ, ಕಾರ್ಯದರ್ಶಿ ವಿಶ್ವನಾಥ್‌ ವಡೆಯರ್‌, ಕೂಡಲೇ ಇಲಾಖೆ ದೇವಸ್ಥಾನದ ದುರಸ್ತಿ ಕಾರ್ಯ ಆರಂಭಿಸುವಂತೆ ಆಗ್ರಹಿಸಿದ್ದಾರೆ.

ಉತ್ತರಕನ್ನಡ: ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವರ ನವರಥಕ್ಕೆ ಮುನ್ನುಡಿ

ದೇವಸ್ಥಾನ ಸಂಪೂರ್ಣ ಸೋರುತ್ತಿರುವುದನ್ನು ಕಳೆದ ಜುಲೈ ತಿಂಗಳ ಮೊದಲ ವಾರದಲ್ಲಿಯೇ ಹೋರಾಟ ಸಮಿತಿ ಇಲಾಖೆ ಗಮನಕ್ಕೆ ತಂದಿತ್ತು. ಪರಿಶೀಲನೆ ಮಾಡಿ ದುರಸ್ತಿ ಆರಂಭ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರ ನೀಡಿತ್ತು. ಪತ್ರಿಕಾ ಹೇಳಿಕೆ ನೀಡಿ 15 ದಿನಗಳ ಗಡುವು ಕೂಡ ನೀಡಿತ್ತು.

ಆದರೆ ವರದಿ ಬಂದ ಎಂಟು ದಿನಗಳಲ್ಲಿ ಇಲಾಖೆ ಸಿ.ಎ. ವಿಜಯಕುಮಾರ ತಮ್ಮ ಸಿಬ್ಬಂದಿಯೊಂದಿಗೆ ಮಧುಕೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಮಳೆ ನಿಂತ ತಕ್ಷಣ ಅಕ್ಟೋಬರ್‌ ತಿಂಗಳಲ್ಲಿ ದುರಸ್ತಿ ಕಾರ್ಯ ಆರಂಭ ಮಾಡುವುದಾಗಿ ಹೇಳಿದ್ದರಿಂದ ಹೋರಾಟ ಸಮಿತಿ ಪ್ರತಿಭಟನೆ ವಾಪಸ್‌ ಪಡೆದಿತ್ತು. ಆದರೆ ಇದೀಗ ನವೆಂಬರ್‌ ದಾಟಿ ಡಿಸೆಂಬರ್‌ ಬಂದಿದೆ. ಇಲಾಖೆಯ ಈ ದಿವ್ಯ ನಿರ್ಲಕ್ಷ್ಯಕ್ಕೆ ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ.

ಮಳೆಗಾಲದಲ್ಲಿ ಧಾರಾಕಾರವಾಗಿ ದೇವಸ್ಥಾನದಲ್ಲೆಲ್ಲ ನೀರು ಸೋರಿಕೆ ಪ್ರವಾಸಿಗರನ್ನು ಪೇಚಿಗೆ ಸಿಲುಕಿಸುತ್ತಿದೆ. ಈ ದೃಶ್ಯ ಭಕ್ತರಲ್ಲಿ, ದೂರದಿಂದ ಬರುವ ಯಾತ್ರಾರ್ಥಿಗಳಲ್ಲಿ ಬೇಸರ ಮೂಡಿಸುತ್ತಿದೆ.

ಅನಾದಿ ಕಾಲದಿಂದಲೂ ಮಧುಕೇಶ್ವರ ದೇವಸ್ಥಾನ ಈವರೆಗೂ ತನ್ನ ಅಂದವನ್ನು ಉಳಿಸಿಕೊಂಡು ಬಂದಿದೆ. ಶಿಲೆಗಳಿಂದ ನಿರ್ಮಿಸಿರುವ ದೇವಸ್ಥಾನ ಅಷ್ಟೇ ಶಾಸನಗಳನ್ನು ಕೂಡ ಹೊಂದಿರುವ ಅಪರೂಪದ ದೇವಸ್ಥಾನವಾಗಿದೆ. ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಕರ್ನಾಟಕ ರಾಜ್ಯಕ್ಕೆ ಮುಕುಟವಿದ್ದಂತೆ. ಇದು ಕೇವಲ ರಾಜ್ಯದ ಆಸ್ತಿ ಅಷ್ಟೇ ಅಲ್ಲ, ದೇಶದ ಆಸ್ತಿ ಕೂಡ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಹಸ್ರಾರು ವರ್ಷಗಳ ಚಾರಿತ್ರಿಕ ಹಿನ್ನೆಲೆ ಜೊತೆಗೆ ಪೌರಾಣಿಕ ಹಿನ್ನೆಲೆ ಕೂಡ ಅದಕ್ಕಿದೆ ಎಂದು ಹೋರಾಟ ಸಮಿತಿ ಹೇಳಿಕೊಂಡಿದೆ.

ಈ ದೇವಸ್ಥಾನ ಸಂಪೂರ್ಣವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸುಪರ್ದಿಯಲ್ಲಿದೆ. ಅಲ್ಲಿ ಏನೇ ಕೆಲಸ ಮಾಡುವುದಾದರೂ ಈ ಇಲಾಖೆಯೇ ಮಾಡಬೇಕು. ಪುರಾತನ ಹಿನ್ನೆಲೆಯಲ್ಲಿ ಬನವಾಸಿ ದೇವಸ್ಥಾನಕ್ಕೆ ಸಿಗಬೇಕಾದ ಮಹತ್ವ ಸಿಗುತ್ತಿಲ್ಲ ಎನ್ನುವ ಆಕ್ಷೇಪ ಹೋರಾಟ ಸಮಿತಿ ಅವರದ್ದಾಗಿದೆ.

ಪಂಪನ ಬನವಾಸಿ ದೇಶದ ಮಧುಕೇಶ್ವರ ದೇಗುಲದೊಳ್....!

ಮಳೆಗಾಲದಲ್ಲಿ ಮಧುಕೇಶ್ವರ ದೇವಸ್ಥಾನ ಗರ್ಭ ಗುಡಿ, ಸಂಕಲ್ಪ ಮಂಟಪ, ದೊಡ್ಡ ಕಂಬಗಳ ಮೇಲಿಂದ ಸೋರಿಕೆ, ತ್ರಿಲೋಕ ಮಂಟಪದ ಹತ್ತಿರ, ನ್ರತ್ಯ ಮಂಟಪ, ಭಕ್ತರು ಕೂಡುವ ಆಸನಗಳ ಮೇಲೆ, ಪಾರ್ವತಿ ದೇವಸ್ಥಾನ, ಹಾಗೆ ಪ್ರಾಕಾರದಲ್ಲಿ ಎಲ್ಲೆಂದರಲ್ಲಿ ಸೋರಿಕೆ ಇದೆ. ಹಾಗಾಗಿ ಕೂಡಲೇ ಪುರಾತತ್ವ ಇಲಾಖೆ ಕೂಡಲೇ ದುರಸ್ತಿ ಕಾರ್ಯ ಪ್ರಾರಂಭಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಬನವಾಸಿ ತಾಲೂಕು ಹೋರಾಟ ಸಮಿತಿ ಸಾರ್ವಜನಿಕವಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Latest Videos
Follow Us:
Download App:
  • android
  • ios