ಶಿರಸಿ ಬಸ್‌ ನಿಲ್ದಾಣದಲ್ಲಿ ಲೈ*ಗಿಕ ಕಿರುಕುಳ ನೀಡಿದ ಪುರುಷನಿಗೆ ಮಹಿಳೆಯೋರ್ವರು ಥಳಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಶಿರಸಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವರಿಗೆ ವ್ಯಕ್ತಿಯೊಬ್ಬ ಲೈಂ*ಗಿಕ ಕಿರುಕುಳ ನೀಡಿದ್ದನು. ಆ ಬಳಿಕ ಆ ಮಹಿಳೆ ಚಪ್ಪಲಿಯಲ್ಲಿ ಥಳಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋ ವೈರಲ್‌ ಆಗಿದ್ದು, ಮಹಿಳೆ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈಗ ಆ ವ್ಯಕ್ತಿಯ ಬಂಧನವಾಗಿದೆ.

ಏನಿದು ಘಟನೆ?

ಆರಂಭದಲ್ಲಿ ಈ ವ್ಯಕ್ತಿಗೆ ಪೊಲೀಸರು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಮಹಿಳೆಯ ದೂರಿನ ಮೇರೆಗೆ ಶಿರಸಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕುಂದಾಪುರ ತಾಲೂಕಿನ ಗಂಗೋಳ್ಳಿಯ ಗುಡ್ಡಮಾಡಿ ಮೋಹನ ಶೆಟ್ಟಿ ಎಂಬಾತನೇ ಬಂಧಿತ ವ್ಯಕ್ತಿ. ಆತ ಹೋಟೆಲ್‌ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದು45 ವರ್ಷ ಪ್ರಾಯವಂತೆ. ಜುಲೈ 19ರಂದು ಎಕ್ಕಂಬಿ ಮೂಲದ ಮಹಿಳೆಯೋರ್ವರು ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು, ಶಿರಸಿಯ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅವರು ಎಕ್ಕಂಬಿಗೆ ಹೋಗಬೇಕಿತ್ತು. ಆಗ ಮೋಹನ್‌ ಎಂಬಾತ ಟೆನ್ಶನ್‌ ಕಮ್ಮಿ ಮಾಡೋಕೆ ರೂಮ್‌ ಮಾಡ್ತೀನಿ ಬಾ ಎಂದು ಹೇಳಿದ್ದಾನೆ. ಈ ಬಗ್ಗೆ ಮಹಿಳೆಯು ಶಿರಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರಿನ ಕೆ ಎಸ್‌ ಹೆಗಡೆ ಆಸ್ಪತ್ರೆ!

ಇತ್ತೀಚೆಗೆ ಹೊಸದಾಗಿ ಬಸ್‌ಸ್ಟ್ಯಾಂಡ್‌ ಉದ್ಘಾಟನೆ ಆಗಿತ್ತು. ಆ ವೇಳೆ ಮಹಿಳೆಯೋರ್ವರು ಬಸ್‌ಗೆ ಕಾಯುತ್ತ ಕುಳಿತಿದ್ದರು. ಶಿರಸಿಯಿಂದ ಮಂಗಳೂರಿಗೆ ಪ್ರೈವೇಟ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಬಹುತೇಕರು ರಾತ್ರಿ ಶಿರಸಿಯಿಂದ ಹೊರಟು, ಬೆಳಗ್ಗೆ ಮಂಗಳೂರು ತಲುಪುವ ರೋಗಿಗಳು ಕೆಎಸ್‌ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬರೋದುಂಟು. ಶಿರಸಿಯಿಂದ ಅಲ್ಲಿ ಸುತ್ತ ಮುತ್ತ ಇರುವ ಊರುಗಳಿಗೆ ಹೋಗಲು ಬಸ್‌ಗಾಗಿ ಕಾಯಬೇಕಾಗಿ ಬರುವುದು.

ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ!

ಹೀಗೆ ಮನೆಗೆ ಹೋಗಲು ಶಿರಸಿಯಲ್ಲಿ ಕಾದು ಕೂತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ, ಲೈಂ*ಗಿಕ ದೌರ್ಜನ್ಯ ಕಿರುಕುಳ ಮಾಡಿ ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡಿದ್ದಾನೆ. ಹೀಗೆಂದು ನೊಂದ ಮಹಿಳೆ ಶಿರಸಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.