ಸಪ್ತ ಸಾಗರ ದಾಟಲಿದೆ ಅನುಶ್ರೀ ನಡೆಸಿ ಕೊಡುವ 'ಸರಿಗಮಪ': ವಿಶ್ವಾದ್ಯಂತ ಆಡಿಷನ್ ಶುರು
ಜೀ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗ್ತಿರೋ ಸರಿಗಮಪ ಸಂಗೀತ ರಿಯಾಲಿಟಿ ಷೋ ಆಡಿಷನ್ ವಿದೇಶಗಳಲ್ಲಿ ನಡೆಯಲಿದೆ. ಈ ಕುರಿತು ಪ್ರೋಮೋ ಬಿಡುಗಡೆ ಮಾಡಲಾಗಿದೆ.
ಅನುಶ್ರೀ ಜೀ ಕನ್ನಡ ಚಾನೆಲ್ನಲ್ಲಿ (Zee Kannad Channel) ವಾರಾಂತ್ಯದಲ್ಲಿ ನಡೆಸಿಕೊಡುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿದೆ. ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳ ದನಿಯನ್ನು ಆಲಿಸಲು ಜನರು ಕಾತರದಿಂದ ಈ ಷೋಗಾಗಿ ಕಾಯುತ್ತಿರುತ್ತಾರೆ. ಇದಾಗಲೇ 19 ಸರಣಿಗಳನ್ನು (season) ಪೂರೈಸಿದ್ದು, ಇದೀಗ 20ನೇ ಸೀಸನ್ ಶುರುವಾಗುವ ಹಂತದಲ್ಲಿದೆ. ಈ ಬಾರಿ, ಹೊಸತನಕ್ಕೆ ಕೈಹಾಕಲಾಗಿದೆ. 20ನೇ ಸೀಸನ್ ಅನ್ನು ವಿಶೇಷವಾಗಿ ಹೊರತರಲು ನಿರ್ಧರಿಸಿರುವ ತಂಡ, ವಿದೇಶಗಳ ಪ್ರತಿಭೆಗಳನ್ನು ಗುರುತಿಸುವ ಸಾಹಸಕ್ಕೆ ಕೈಹಾಕಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಆಡಿಷನ್ ನಡೆದಿದೆ. ಇಲ್ಲಿ ಆಡಿಷನ್ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ದೊರಕಿದೆ. ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿರುವ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಈ ಕುರಿತು ಪ್ರೋಮೋ ಒಂದನ್ನು ಬಿಡುಗಡೆ ಮಾಡಲಾಗಿದೆ. ವಿಶ್ವದ ಕನ್ನಡಿಗರಿಗಾಗಿ ಎಂದು ಅದರಲ್ಲಿ ತೋರಿಸಲಾಗಿದೆ. ಕನ್ನಡದ ಸ್ವರ ಸಂಭ್ರಮ ಈಗ ವಿಶ್ವ ಸಂಭ್ರಮವಾಗಲಿದೆ, ಕನ್ನಡದ ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ ಎಂದು ಜೀ ನ್ಯೂಸ್ ತನ್ನ ಪ್ರೋಮೋದಲ್ಲಿ ಹೇಳಿಕೊಂಡಿದೆ. ಸರಿಗಮಪ ಸೀಸನ್ 19ರ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣುಸೂರು (Raghavendra Hunusuru) ಹೊಸ ಘೋಷಣೆ ಮಾಡಿದ್ದರು. ಇಂಗ್ಲೆಂಡ್, ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶದಲ್ಲಿ ಇರೋ ಕನ್ನಡಿಗರಿಗೆ ಅವಕಾಶ ಕೊಡುವುದಾಗಿ ಹೇಳಿದ್ದರು. ಅಲ್ಲಿ ಇರುವವರು ಕನ್ನಡದ ಹಾಡು ಹೇಳುವ ಚಾನ್ಸ್ ಇದೆ ಎಂದಿದ್ದರು. ಅದರಂತೆಯೇ ಈಗ ತಂಡ ಕಾರ್ಯಪ್ರವೃತ್ತವಾಗಿದೆ. ಈ 19 ಸೀಸನ್ನಲ್ಲಿ ಹಾಡಿರುವ ಹಲವು ಗಾಯಕರು ಸಂಗೀತ ಆಲ್ಬಂಗಳಿಗೆ ಆಯ್ಕೆಯಾದವರಿದ್ದಾರೆ. ಹಿನ್ನೆಲೆ ಗಾಯಕರಾಗಿಯೂ ಅವರಿಗೆ ಅವಕಾಶ ಸಿಕ್ಕಿದೆ. ಇದೀಗ ಹೊರ ದೇಶಗಳ ಪ್ರತಿಭೆಗಳನ್ನು ಹುಡುಕಿ ಅವರಿಗೆ ಅವಕಾಶ ನೀಡಲಾಗುತ್ತಿದೆ.
ಅರಸನ ಕೋಟೆ ಸೊಸೆ 'ಪಾರು'ವಿಗೆ ನಿಜ ಜೀವನದಲ್ಲಿ ವಿಶೇಷ ಚೇತನ ತಮ್ಮ, ಅವನಿಗೆ ಇವಳೇ ಅಮ್ಮ!
ಸೀಸನ್ 20 (Sarigamapa Season 20) ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸಪ್ತಸಾಗರಗಳನ್ನ ದಾಟಿ ಆಡಿಷನ್ ನಡೆಯಲಿರುವ ಕಾರಣ, ಈ ಸೀಸನ್ ಬಹು ಕುತೂಹಲ ಮೂಡಿಸಿದೆ. ವಿಶ್ವಾದ್ಯಂತ ಕನ್ನಡದ ಕಂಪು ಬೀರಲು ಇದು ಅವಕಾಶವಾಗಿದೆ. ಅಂದಹಾಗೆ, ಇಂಥದ್ದೊಂದು ಪ್ರಯತ್ನ ಮಾಡಿರುವುದು ಕನ್ನಡದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಸಿನಿಮಾದ ಹಿನ್ನೆಲೆ ಗಾಯಕರು ವಿದೇಶಗಳಿಗೆ ಹೋಗಿ ಹಾಡುವುದು ಬಹಳ ಹಿಂದಿನಿಂದಲೂ ಇದೆ. ಅದೇ ರೀತಿ ಕನ್ನಡದ ಖ್ಯಾತನಾಮರೂ ಹೋಗಿದ್ದಾರೆ. ಆದರೆ ವಿದೇಶದಲ್ಲಿಯೇ ಆಡಿಷನ್ ಮಾಡಿ ಈ ರೀತಿ ರಿಯಾಲಿಟಿ ಷೋ ಒಂದರಲ್ಲಿ ಹಾಡಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿಯೇ ಹೊಸ ಪ್ರಯತ್ನ ಎನ್ನಲಾಗುತ್ತಿದೆ.
ಅದೇ ಇನ್ನೊಂದೆಡೆ, ಜನ ಸಾಮಾನ್ಯರು ನಮ್ಮದೇ ಕರ್ನಾಟಕದ ಹಳ್ಳಿ ಮೂಲೆಗಳಲ್ಲಿ ಯಾವುದೇ ಅವಕಾಶಗಳು ಸಿಗದೇ ವಂಚಿತರಾಗಿರುವ ಹಲವಾರು ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಬೇಕಿದೆ. ವಿದೇಶಿಗರಿಗೆ ಅವಕಾಶಗಳು ಹಲವಾರು ಇರುತ್ತವೆ. ಆದರೆ ನಮ್ಮ ನೆಲದ ಮಕ್ಕಳನ್ನು ಗುರುತಿಸಿ ಎಂದೂ ಹೇಳುತ್ತಿದ್ದಾರೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಇನ್ನೂ ಹೆಚ್ಚಿನ ಕನ್ನಡಿಗರಿಗೆ ಈ ಅವಕಾಶ ಸಿಕ್ಕರೆ ಒಳ್ಳೆಯದು ಎನ್ನುವುದು ಅವರ ಅಭಿಲಾಷೆ. ಇನ್ನು ಕೆಲವರು, ಕನ್ನಡಿಗರ ಮನಗೆದ್ದ ಸಂಗೀತ ಕಾರ್ಯಕ್ರಮ (Music relality show) ಶೀಘ್ರದಲ್ಲೇ ವಿದೇಶಕ್ಕೆ ಹಾರಿ ಅಲ್ಲಿನ ಅದ್ಭುತ ಸಂಗೀತ ಪ್ರತಿಭೆಗಳನ್ನು ಆರಿಸಿ ಜಗತ್ತಿಗೆ ಪರಿಚಯಿಸಲಿ ಎಂದು ಹಾರೈಸುತ್ತಿದ್ದಾರೆ.