ಕನ್ನಡ ವಾಹಿನಿಯಲ್ಲಿ ಸೂಪರ್ ಹಿಟ್ ಕಾಮಿಡಿ ಶೋ ' ಕಾಮಿಡಿ ಕಿಲಾಡಿಗಳು' ಸ್ಪರ್ಧಿ ನಯನಾ ಇತ್ತೀಚಿಗೆ ತಮ್ಮ ಫೇಕ್‌ಬುಕ್‌ ಖಾತೆಯಲ್ಲಿ ಅಭಿಮಾನಿಯೊಬ್ಬ ಮಾಡಿದ ಕಾಮೆಂಟ್‌ಗೆ ಮರು ಉತ್ತರ ನೀಡಿದ ಶೈಲಿ ಗಮನಿಸಿದ ನೆಟ್ಟಿಗರು, ಅವರ ವಿರುದ್ಧ ಅಸಮಾಧಾನ ವ್ಯಕ್ತಿ ಪಡಿಸಿದ್ದರು. 

ವಿವಾದದಲ್ಲಿ ಸಿಲುಕಿಕೊಂಡ 'ಕಾಮಿಡಿ ಕಿಲಾಡಿಗಳು' ನಯನಾ; 'ಮುಚ್ಕೊಂಡ್‌ ಕೆಲಸ ನೋಡ್ಕೊ' ಅಂತ ಹೇಳ್ಬೇಕಿತ್ತಾ?

ಕಾಮೆಂಟ್‌, ಫೋಟೋಸ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ನಯನಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮತ್ತೊಂದು ವಿಡಿಯೋ ಮಾಡುವ ಮೂಲಕ 'ಅಪ್ಪಟ ಕನ್ನಡಿಗರ  ಕ್ಷಮೆ ಕೇಳಿದ್ದಾರೆ. ಆದರೆ ಈ ವಿಡಿಯೋದಲ್ಲಿ ನಯನಾ ಮಾತನಾಡಿದ ಶೈಲಿಗೂ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ನಯನಾ ಮಾತನಾಡಿರುವ ರೀತಿ, ಕೈ ತೋರಿಸಿಕೊಂಡು ಕೋಪದಲ್ಲಿ ಮಾತನಾಡಿರುವುದು ಕಾಟ ಚಾರಕ್ಕೆ ಮಾತನಾಡಿದಂತಿದೆ, ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಏನಿದೆ ವಿಡಿಯೋದಲ್ಲಿ?:
ವಿಡಿಯೋ ಪ್ರಾರಂಭಿಸುವ ಮೊದಲು ನಯನಾ ಎಲ್ಲಾ ಅಪ್ಪಟ ಕನ್ನಡಿಗರಿಗೆ ನಮಸ್ಕಾರ ಹೇಳಿದ್ದಾರೆ. ನಯವಾಗಿಯೇ ಮಾತು ಆರಂಭಿಸಿದ ನಯಾನಾ, ತಮ್ಮ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ ವೆಂಕಟೇಶ್‌ ಎಂಬುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

'ನಾನು ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಫೋಟೋ ಅಪ್ಲೋಡ್ ಮಾಡಿದೆ. ಅದಕ್ಕೆ ಒಂದು ಪುಸ್ತಕದ ಹಿಂದಿದ್ದ ಸಾಲುಗಳನ್ನು ಬರೆದಿದ್ದೆ. ನನಗೆ ಅದನ್ನು ಕನ್ನಡದಲ್ಲಿ ಅನುವಾದ ಮಾಡುವಷ್ಟು ಅನುಕೂಲವಾಗಿರಲಿಲ್ಲ.  ಹಾಗಾಗಿ ನಾನು ಇದ್ದಂತೆ ಪೋಸ್ಟ್ ಮಾಡಿದೆ. ಅದಕ್ಕೆ ವೆಂಕಟೇಶ್‌ ಎಂಬುವವರು ಕಾಮೆಂಟ್ ಮಾಡಿದ್ದರು. ನಾನು ಒಂದು ಮಾತು ಹೇಳುತ್ತೇನೆ, ನಾನು ಯಾವ ಚಾನೆಲ್‌ಗೆ ಹೋದರೂ, ಸಿನಿಮಾಗಳಲ್ಲಿ ನಟಿಸಿದರೂ, ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗಲೂ ನಾನು  ಇಂಗ್ಲಿಷ್‌ನವಳು, ನಾನು ಇಂಗ್ಲೀಷ್‌ಗೆ ಹುಟ್ಟಿದವಳು, ನನಗೆ ಇಂಗ್ಲೀಷ್‌ ಮೇಲೆ ವ್ಯಾಮೋಹ ಜಾಸ್ತಿ ಎಂದು ಹೇಳಿಕೊಂಡಿಲ್ಲ. ಹೇಳಿಕೊಳ್ಳುವುದೂ ಇಲ್ಲ. ನಾವು ಕನ್ನಡಿಗರು, ನಮ್ಮ ಬೆಲೆ ಏನು ಎಂದು ನನಗೆ ಚನ್ನಾಗಿ ಗೊತ್ತು. ಅವರ ಕಾಮೆಂಟ್‌ ನನಗೆ ನೋವು ತಂದಿದೆ,' ಎಂದು ಹೇಳಿದ್ದಾರೆ.

ಫೇಸ್‌ಬುಕ್‌ Rulers:
'ನಾವು ಸೆಲೆಬ್ರಿಟಿಗಳಾದ ಕಾರಣ, ನಾವೇನೇ ಮಾಡಿದರೂ ಅದನ್ನು ಬೇಗ ನ್ಯೂಸ್ ಮಾಡುತ್ತಾರೆ. ಕೆಲವರು ಇದ್ದಾರೆ ಸೋ ಕಾಲ್ಡ್‌ ಫೇಸ್‌ಬುಕ್ ರೂಲರ್ಸ್‌. ಅವರು ಬೇಕಂತಲೇ ಕೆಟ್ಟ ಪದಗಳನ್ನು ಬಳಸಿದರೂ ನನಗೆ ದುರಹಂಕಾರ, ಕೊಬ್ಬು ಜಾಸ್ತಿ ಎನ್ನುತ್ತಾರೆ. ನಂಗೆ ಇವು ಯಾವವೂ, ಏನೂ, ಎಂಥ ನನಗೆ ಗೊತ್ತಿಲ್ಲ. ಏನು ದುರಂಕಾರ ಜಾಸ್ತಿ? ಏನು ಕೊಬ್ಬು ಜಾಸ್ತಿ ಆಗಿದೆ ಅಂತಾನೂ ಗೊತ್ತಿಲ್ಲ. ನೀವು ಪದಗಳನ್ನು ಇತಿಮಿತಿಯಲ್ಲಿ ಬಳಸಿದರೆ, ನಾನು ಸರಿಯಾದ ರೀತಿಯಲ್ಲಿಯೇ ಬಳಸುತ್ತೇನೆ. ಯಾಕಂದ್ರೆ ನನ್ನಷ್ಟೇ ವಯಸ್ಸಿನ ಹೆಣ್ಣು ಮಕ್ಕಳು ನಿಮ್ಮ ಮನೆಯಲ್ಲಿಯೂ ಇರ್ತಾರೆ. ಅದನ್ನು ಮರೆಯಬೇಡಿ. ನಾನು ಎಲ್ಲಾದರೂ ನಮ್ಮ ಕನ್ನಡವನ್ನು ನಿರ್ಲಕ್ಷ್ಯಸಿದ್ದರೆ, ಅದಕ್ಕೆ ಸಾಕ್ಷಿ ತೋರಿಸಿ,' ಎಂದು ತಮ್ಮನ್ನು ಫಾಲೋ ಮಾಡುತ್ತಿರುವವರಿಗೇ ನಯವಾಗಿ ಸವಾಲು ಹಾಕಿದ್ದಾರೆ ನಯನಾ.

 

ಕ್ಷಮೆ:
'ನಾನು ಕನ್ನಡ ಶಾಲೆಯಲ್ಲಿಯೇ ಓದಿರುವ ಕಾರಣ ನನಗೆ ಅದರ ಮೇಲೆ ಗೌರವ ಮತ್ತು ಅಧಿಕಾರ ಇದೆ. ಅದಿಕ್ಕೆ ನಾನು ಕ್ಷಮೆ ಕೇಳುವುದು, ಅಪ್ಪಟ ಕನ್ನಡ ಅಭಿಮಾನಿಗಳಲ್ಲಿ ಮಾತ್ರ. ನನ್ನ ಕಡೆಯಿಂದ ದಯವಿಟ್ಟು ತಪ್ಪಾಗಿದ್ದರೆ ಕ್ಷಮಿಸಬೇಕು. ಕಾಮೆಂಟ್‌ನಲ್ಲಿ ಅವಾಚ್ಯ ಶಬ್ಧಗಳಿಂದ ರಿಪ್ಲೈ ಮಾಡಿದ್ದೀರಿ. ಅವರಿಗೆ ಉತ್ತರ ನೀಡಲೆಂದೇ ನನ್ನ ಕಡೆ ಒಬ್ಬರು ಸರ್ ಇದ್ದಾರೆ. ಅವರು ನನಗೆ ಸಹಾಯ ಮಾಡುತ್ತಾರೆ. ಅವರು ಇರುವ ಧೈರ್ಯದಿಂದಲೇ ನಾನು ಈ ವಿಡಿಯೋ ಮಾಡಿದೆ,' ಎಂದು ಹೇಳಿದ್ದಾರೆ. ಆದರೆ, ಆ ಸರ್ ಯಾರು, ಪತಿಗೇ ಹಾಗೆ ಹೇಳಿದ್ರಾ ಗೊತ್ತಾಗ್ತಾ ಇಲ್ಲ.
 
ಜಗ್ಗೇಶ್‌ ಉತ್ತರ: 
ನಯನಾ ಕಾಮೆಂಟ್‌ಗೆ ನೆಟ್ಟಿಗರ ಉತ್ತರ ವೈರಲ್ ಆಗುತ್ತಿದ್ದಂತೆ, ನಟ ಜಗ್ಗೇಶ್‌ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

'ಕನ್ನಡಿಗರು ಸಾಧ್ಯವಾದಷ್ಟು ಕನ್ನಡವನ್ನು ಬರಿ ಮಾತಿನಲ್ಲೇ ಆಡದೇ, ಬರೆಯಲೂ ಯತ್ನಿಸಬೇಕು. ನಾವೇ ನಮ್ಮ ಭಾಷೆ ಉಳಿಸದಿದ್ದರೆ, ಮುಂದಿನ ಪೀಳಿಗೆ ಸಂಪೂರ್ಣ ಮರೆಯುತ್ತೆ! ಬರೀ ಓದು ಬರಹವಲ್ಲ, ಕನ್ನಡದ ಸಾಹಿತ್ಯ ಪತ್ರಿಕೆ, ಸಿನಿಮಾ ಸಂಸ್ಕೃತಿಯನ್ನು ಉಳಿಸಬೇಕು. ಆಗಲೇ ಕನ್ನಡ ಪ್ರೇಮ ಸಾರ್ಥಕ . ಇಲ್ಲದಿದ್ದರೆ ಪ್ರಚಾರಕ್ಕೆ ಮಾತ್ರ ಸೀಮಿತ ಅನಿಸಿಕೆ' ಎಂದು ಬರೆದು ಕೊಂಡಿದ್ದಾರೆ.

 

ಒಟ್ಟಿನಲ್ಲಿ ಇತ್ತೀಚೆಗೆ ಸುದ್ದಿಯಲ್ಲಿಯೇ ಇರದ ನಯಾನಾ, ಇದೀಗ ಯಾವುದೋ ಒಂದು ಕಾರಣಕ್ಕೆ ಮತ್ತೆ ಸುದ್ದಿಯಾಗುತ್ತಿದ್ದಾರೆ. ಆ ಮೂಲಕ ತಾವೊಬ್ಬ ಸೆಲೆಬ್ರಿಟಿ ಎಂಬುದನ್ನು ಅವರೇ ನೆನಪಿಸಿಕೊಂಡು, ಅಭಿಮಾನಿಗಳಿಗೂ ನೆನಪಿಸುತ್ತಿದ್ದಾರೆ.