ನಟ ಜಗ್ಗೇಶ್ ಅವರು 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡುತ್ತಿರುವ ನಟ ಪರೀಕ್ಷಿತ್ ಅವರನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರೀಕ್ಷಿತ್ ಅವರು ಜಗ್ಗೇಶ್ ಅವರ ಸರಳತೆ ಮತ್ತು ಪ್ರೋತ್ಸಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನವರಸನಾಯಕ, ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ರಾಯರ ಮೇಲಿನ ಅಪಾರ ಭಕ್ತಿ ಮತ್ತು ನಂಬಿಕೆಯನ್ನು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ತಮ್ಮ ಪ್ರತಿಯೊಂದು ಕಾರ್ಯದಲ್ಲಿಯೂ ರಾಯರನ್ನು ಸ್ಮರಿಸುವ ಜಗ್ಗೇಶ್, ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಇದೀಗ ರಾಯರ ಭಕ್ತಿಯ ಜೊತೆಗೆ ಅವರ ಜೀವನ ಚರಿತ್ರೆಯನ್ನು ಕಿರುತೆರೆಯಲ್ಲಿ ಕಟ್ಟಿಕೊಡುತ್ತಿರುವ ಕಲಾವಿದನ ಅಭಿನಯಕ್ಕೂ ಜಗ್ಗೇಶ್ ಮನಸೋತಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಮೆಚ್ಚುಗೆಗೆ ಪಾತ್ರರಾದ ಆ ನಟ ಯಾರು ಗೊತ್ತಾ?

ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಗೆ ಜಗ್ಗೇಶ್ ಮೆಚ್ಚುಗೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಜೀವನ, ಭಕ್ತಿ, ಪವಾಡಗಳು ಹಾಗೂ ಮಹಿಮೆಗಳನ್ನು ಕಿರುತೆರೆಯಲ್ಲಿ ಕಟ್ಟಿಕೊಡಲಾಗುತ್ತಿದೆ. ಧಾರಾವಾಹಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ನಟ ಪರೀಕ್ಷಿತ್ ಅಭಿನಯಿಸುತ್ತಿದ್ದಾರೆ. ರಾಯರ ಜೀವನದ ಒಂದೊಂದು ಮಹತ್ವದ ಘಟನೆ ಹಾಗೂ ಪವಾಡಗಳನ್ನು ತೆರೆಯ ಮೇಲೆ ಜೀವಂತವಾಗಿ ಕಟ್ಟಿಕೊಡುತ್ತಿರುವ ಪರೀಕ್ಷಿತ್ ಅವರ ಅಭಿನಯಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಪಾತ್ರದ ನಿರ್ವಹಣೆ ಎಷ್ಟು ಸಹಜವಾಗಿದೆ ಎಂದರೆ, ರಾಯರೇ ಮತ್ತೊಮ್ಮೆ ಭೂಮಿಗೆ ಅವತರಿಸಿದಂತೆ ಭಾಸವಾಗುತ್ತದೆ ಎಂಬ ಅಭಿಪ್ರಾಯವೂ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.

ರಾಘವೇಂದ್ರ ಸ್ವಾಮಿಗಳ ಪಾತ್ರಧಾರಿ ಪರೀಕ್ಷಿತ್ ಭೇಟಿಯಾದ ಜಗ್ಗೇಶ್

ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ಜಗ್ಗೇಶ್ ಅವರು ಈ ಧಾರಾವಾಹಿಯ ಸಂಚಿಕೆಗಳನ್ನು ತಪ್ಪದೆ ವೀಕ್ಷಿಸುತ್ತಿದ್ದಾರೆ. ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರ ಅಭಿನಯವನ್ನು ಗಮನಿಸಿರುವ ಅವರು, ಇದೀಗ ಸ್ವತಃ ನಟನನ್ನು ಭೇಟಿಯಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಧಾರಾವಾಹಿಯ ಕಲಾವಿದರೊಂದಿಗೆ ಕೆಲಕಾಲ ಕಳೆದ ಜಗ್ಗೇಶ್, ಪರೀಕ್ಷಿತ್ ಅವರ ಪಾತ್ರ ನಿರ್ವಹಣೆ ಹಾಗೂ ರಾಯರ ಪವಾಡಗಳ ದೃಶ್ಯಗಳಿಗೆ ಜೀವ ತುಂಬುತ್ತಿರುವ ರೀತಿಯನ್ನು ಶ್ಲಾಘಿಸಿದ್ದಾರೆ. ಹಿರಿಯ ನಟನ ಈ ಭೇಟಿ ಧಾರಾವಾಹಿ ತಂಡಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.

45 ವರ್ಷಗಳ ಕಲಾಸೇವೆಯ ಹಿರಿಯ ನಟನ ಸರಳತೆಗೆ ಪರೀಕ್ಷಿತ್ ಫಿದಾ!

ಜಗ್ಗೇಶ್ ಅವರನ್ನು ಭೇಟಿಯಾದ ಸಂತಸವನ್ನು ರಾಘವೇಂದ್ರ ಸ್ವಾಮಿಗಳ ಪಾತ್ರಧಾರಿ ಪರೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "45 ವರ್ಷಗಳ ಕಲಾಸೇವೆಯ ನಡುವೆಯೂ ಕಿಂಚಿತ್ತೂ ಹಮ್ಮು-ಬಿಮ್ಮು ಇಲ್ಲದೆ ಸರಳತೆ ಮತ್ತು ಸೌಜನ್ಯದಿಂದ ಎಲ್ಲರ ಮನಸ್ಸು ಗೆದ್ದಿರುವ ಮೇರು ವ್ಯಕ್ತಿತ್ವ ಜಗ್ಗೇಶ್ ಅವರದ್ದು ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬ ಕಲಾವಿದರ ಮೇಲೂ ಜಗ್ಗೇಶ್ ತೋರುವ ಪ್ರೀತಿ, ಕಾಳಜಿ ಮತ್ತು ಗೌರವಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮ್ಮಂತಹ ಹಿರಿಯರ ಪ್ರೀತಿ ಮತ್ತು ಪ್ರೋತ್ಸಾಹ ನನಗೆ ದೊಡ್ಡ ಶಕ್ತಿ" ಎಂದು ಪರೀಕ್ಷಿತ್ ತಮ್ಮ ಪೋಸ್ಟ್‌ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

View post on Instagram
 

ಕಿರುತೆರೆಯ ಕಲಾವಿದರಿಗೆ ಹಿರಿಯ ನಟನ ಪ್ರೋತ್ಸಾಹ

ಸಾಮಾನ್ಯವಾಗಿ ಹೊಸ ಕಲಾವಿದರಿಗೆ ಹಿರಿಯ ನಟರಿಂದ ಸಿಗುವ ಮೆಚ್ಚುಗೆ ಮತ್ತು ಪ್ರೋತ್ಸಾಹ ದೊಡ್ಡ ಪ್ರೇರಣೆಯಾಗುತ್ತದೆ. ಅದರಲ್ಲೂ ಜಗ್ಗೇಶ್ ಅವರಂತಹ ಅನುಭವಿ ಕಲಾವಿದರು ಸ್ವತಃ ಬಂದು ಅಭಿನಯವನ್ನು ಮೆಚ್ಚಿಕೊಂಡಿರುವುದು ಪರೀಕ್ಷಿತ್ ಅವರಿಗೆ ವಿಶೇಷ ಕ್ಷಣವಾಗಿದೆ. ಒಂದೆಡೆ ರಾಯರ ಪರಮ ಭಕ್ತ ಜಗ್ಗೇಶ್, ಮತ್ತೊಂದೆಡೆ ರಾಯರ ಪಾತ್ರಕ್ಕೆ ಜೀವ ತುಂಬುತ್ತಿರುವ ಪರೀಕ್ಷಿತ್. ಇವರಿಬ್ಬರ ಈ ಭೇಟಿಯ ಫೋಟೋಗಳು ಹಾಗೂ ಪರೀಕ್ಷಿತ್ ಅವರ ಭಾವುಕ ಮಾತುಗಳು ಇದೀಗ ಕಿರುತೆರೆ ಪ್ರೇಕ್ಷಕರು ಮತ್ತು ರಾಯರ ಭಕ್ತರ ಗಮನ ಸೆಳೆಯುತ್ತಿವೆ.