ಗಟ್ಟಿಮೇಳ ಸೀರಿಯಲ್​ನಲ್ಲಿ ಇಷ್ಟು ದಿನ ಕಾಣೆಯಾಗಿದ್ದ ವೇದಾಂತ್​ ಹಾಗೂ ಕೊಲೆಯಾಗಿದ್ದಾನೆ ಎನ್ನಲಾಗಿದ್ದ ವಿಕ್ಕಿ ಇಬ್ಬರೂ ಬಂದಾಗಿದೆ. ಅಮ್ಮ-ಮಕ್ಕಳ ಮಿಲನ ಕಂಡು ಫ್ಯಾನ್ಸ್​ ಭಾವುಕರಾಗಿದ್ದಾರೆ. 

ವೈಜಯಂತಿ ಆಗಿ ಇಷ್ಟು ದಿನ ತಮ್ಮ ಮನೆಗೆಲಸದವಳಂತೆ ಇದ್ದ ವೈದೇಹಿಯೇ ಅಮ್ಮನೆಂದು ತಿಳಿದ ಮೇಲೂ ವೇದಾಂತ್​ ಮತ್ತು ಅಮ್ಮನ ಮಿಲನ ಆಗದೇ ಇರುವುದಕ್ಕೆ ಗಟ್ಟಿಮೇಳದ ಫ್ಯಾನ್ಸ್​ ಪಟ್ಟ ಸಂಕಟ ಅದೆಷ್ಟೋ. ಪ್ರತಿ ಸಲ ಸೋಷಿಯಲ್​ ಮೀಡಿಯಾದಲ್ಲಿ ಗಟ್ಟಿಮೇಳದ ಪ್ರೊಮೋ ರಿಲೀಸ್ ಆದಾಗಲೆಲ್ಲವೂ ವೇದಾಂತ್​ ಎಲ್ಲಿ ಎಂದು ಕೇಳುತ್ತಿದ್ದವರೇ ಎಲ್ಲಾ. ಅಮ್ಮ-ಮಗನ ಮಿಲನವನ್ನು ನೋಡಲು ಕಾತರರಾಗಿದ್ದೇವೆ ಎಂದು ಕಮೆಂಟ್ಸ್​ಗಳ ಮಹಾಪೂರವೇ ಹರಿದುಬರುತ್ತಿತ್ತು. ಕೆಲ ತಿಂಗಳುಗಳಿಂದ ವೇದಾಂತ್​ ಸೀರಿಯಲ್​ನಲ್ಲಿ ಕಾಣಿಸಿಕೊಳ್ಳದೇ ಇದ್ದ ಕಾರಣ, ವೇದಾಂತ್​ ಪಾತ್ರಧಾರಿ ಬದಲಿಯಾಗುತ್ತಾನೆ ಎಂಬ ಸಂದೇಹವನ್ನು ಕೆಲವು ನೆಟ್ಟಿಗರು ವ್ಯಕ್ತಪಡಿಸಿದ್ದರು. ದಯವಿಟ್ಟು ಯಾವುದೇ ಕಾರಣಕ್ಕೂ ಈ ಪಾತ್ರಧಾರಿಯನ್ನು ಬದಲಿಸಬೇಡಿ ಎಂದು ​ ಸೀರಿಯಲ್​ ಪ್ರಿಯರು ನಿರ್ದೇಶಕರನ್ನು ಬೇಡಿಕೊಂಡಿದ್ದೂ ನಡೆದಿದೆ. ಈಗ ಎಲ್ಲವೂ ಹ್ಯಾಪ್ಪಿ ಎಂಡಿಂಗ್​ ಆಗಿದೆ.

ಹೌದು. ಗಟ್ಟಿಮೇಳ ಸೀರಿಯಲ್ ಅಂದುಕೊಂಡಂತೆ ಹ್ಯಾಪ್ಪಿ ಎಂಡಿಂಗ್​ ಆಗುತ್ತಿದೆ. ಜನವರಿ 5ರಂದು ಸೀರಿಯಲ್​ ಮುಗಿಯುತ್ತದೆ ಎಂದು ಈ ಮೊದಲೇ ತಿಳಿಸಲಾಗಿತ್ತು. ಅದರಂತೆಯೇ ಇಂದಿನ ಎಪಿಸೋಡ್​ನಲ್ಲಿ ವೇದಾಂತ್​ ಮತ್ತು ಅಮ್ಮ ವೈದೇಹಿಯ ಮಿಲನವಾಗಿದೆ. 20 ವರ್ಷಗಳಿಂದ ಕಾಣೆಯಾಗಿದ್ದ ಅಪ್ಪ ಸೂರ್ಯನಾರಾಯಣ ವಶಿಷ್ಠ ಕೂಡ ಮನೆ ತಲುಪಿಯಾಗಿದೆ. ವೇದಾಂತ್​ಗೆ ಕಾಲ್​ ಮಾಡು ಎಂದು ವೈದೇಹಿ ಅಮೂಲ್ಯಗೆ ಹೇಳಿದ್ದಾಳೆ. ಅಷ್ಟರಲ್ಲಿಯೇ ಸಿನಿಮೀಯ ಶೈಲಿನಲ್ಲಿ ಮನೆಗೆ ವೇದಾಂತ್​ ಎಂಟ್ರಿ ಆಗಿದೆ. ಅಂದಹಾಗೆ ವೇದಾಂತ್​ ಅಂದರೆ ರಕ್ಷ್ ರಾಮ್ ಅವರು ಇಷ್ಟು ದಿನ ಸೀರಿಯಲ್​ನಲ್ಲಿ ಮಿಸ್​ ಆಗಿರುವ ಹಿಂದೆ ಕಾರಣವೂ ಇದೆ. ಅದೇನೆಂದರೆ ಅವರು ಹಿರಿತೆರೆಗೆ ಕಾಲಿಟ್ಟಿದ್ದಾರೆ. ಅವರು ‘ಬರ್ಮ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ನಿರ್ದೇಶಕ ಚೇತನ್ ಕುಮಾರ್ ಅವರು ‘ಬರ್ಮ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶೂಟಿಂಗ್​ನಲ್ಲಿ ಬಿಜಿಯಾಗಿದ್ದ ಅವರು ಕೊನೆಯ ಎಪಿಸೋಡ್​ನಲ್ಲಿ ಹಾಜರಾಗಿರುವುದು ಪ್ರೇಕ್ಷಕರ ಖುಷಿಗೆ ಕಾರಣವಾಗಿದೆ.

ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್​ ಜೋಹರ್​

ಅದೇ ಇನ್ನೊಂದೆಡೆ, ಹ್ಯಾಪ್ಪಿ ಎಂಡಿಂಗ್​ ಇರುವಾಗ ವಿಕ್ಕಿ ಇಲ್ಲದೇ ಇದ್ದರೆ ಹೇಗೆ ಎನ್ನುವ ಕೊರಗನ್ನೂ ಇದಾಗಲೇ ನಿರ್ದೇಶಕರು ಬಗೆಹರಿಸಿದ್ದಾರೆ. ಕೊಲೆಯಾಗಿದ್ದಾನೆ ಎನ್ನಲಾಗಿದ್ದ ವಿಕ್ಕಿ ಮತ್ತೆ ಮರಳಿದ್ದಾನೆ. ವಿಕ್ಕಿ ಮತ್ತು ಅಮ್ಮನ ಮಿಲನವೂ ಆಗಿದ್ದು, ಪ್ರೇಕ್ಷಕರಿಗೆ ಡಬಲ್​ ಖುಷಿ ಕೊಟ್ಟಿದೆ. ಸುಹಾಸಿನಿಯ ಕುತಂತ್ರದಿಂದ ವಿಕ್ಕಿ ಅಪಘಾತದಲ್ಲಿ ಸಾಯುವಂತೆ ತೋರಿಸಲಾಗಿತ್ತು. ಆದರೆ ಹೆಣದ ಮುಖ ತೋರಿಸದ ಕಾರಣ, ವಿಕ್ಕಿ ಸಾಯಲಿಲ್ಲ ಎನ್ನುವುದು ಅಭಿಮಾನಿಗಳ ಅನಿಸಿಕೆಯಾಗಿತ್ತು. ಅಷ್ಟಕ್ಕೂ ವಿಕ್ಕಿಯನ್ನು ಹೀಗೆ ಸಾಯಿಸಿರುವುದಕ್ಕೂ ಕಾರಣವಿದೆ. ಅದೇನೆಂದರೆ, ಅತ್ತ ಸುಹಾಸಿನಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದಂತೆಯೂ ಆಯಿತು, ಇತ್ತ ವಿಕ್ಕಿ ಅಂದರೆ ಅಭಿಷೇಕ್ ಅವರೂ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರು. ಇದೇ ಕಾರಣಕ್ಕೆ ಅವರ ಕೊಲೆಯಾಗಿದೆ ಎಂದು ತೋರಿಸಲಾಗಿತ್ತು. ಇದೀಗ ಅವರ ಎಂಟ್ರಿ ಕೂಡ ಆಗಿದೆ.

ಇನ್ನು ಉಳಿದಿರುವುದು ಸುಹಾಸಿನಿ ಏನಾಗುತ್ತಾಳೆ ಎನ್ನುವ ವಿಷಯವಷ್ಟೇ. ಸುಹಾಸಿನಿಯನ್ನು ನಂಬಿ, ಆಕೆ ಒಳ್ಳೆಯವಳಾಗಿದ್ದಾಳೆ ಎಂದು ನಂಬಿ ಮತ್ತೊಮ್ಮೆ ಮನೆಯವರು ಮೋಸ ಹೋಗಿಯಾಗಿದೆ. ಇದಾಗಲೇ ಮಕ್ಕಳ ಕೊಲೆ ಪ್ರಯತ್ನದ ಆರೋಪ ಈಕೆಯ ಮೇಲಿದೆ. ಜೊತೆಗೆ ಕಿಡ್ನಾಪಿಂಗ್​ ಕೇಸ್​ ಅಪರಾಧವೂ ಇದೆ. ಇದೇಕಾರಣಕ್ಕೆ ಸುಹಾಸಿನಿಯನ್ನು ಪೊಲೀಸರು ಬಂಧಿಸುತ್ತಾರೆಯೋ ಅಥವಾ ಮನೆಯವರೆಲ್ಲರೂ ಸೇರಿ ಮತ್ತೊಮ್ಮೆ ಆಕೆಯನ್ನು ಕ್ಷಮಿಸುತ್ತಾರೋ ಎನ್ನುವುದಷ್ಟೇ ಕಾದು ನೋಡಬೇಕಿದೆ. ಈಕೆಯನ್ನು ಪೊಲೀಸರಿಗೆ ಒಪ್ಪಿಸಿ, ಮತ್ತೊಮ್ಮೆ ಮೋಸ ಹೋಗಬೇಡಿ ಎಂದು ನೆಟ್ಟಿಗರು ಸಲಹೆ ಕೊಡುತ್ತಿದ್ದಾರೆ. ಅವೆಲ್ಲವೂ ಮೊದಲೇ ಶೂಟಿಂಗ್​ ಆಗಿದೆ, ನೀವು ಈಗ ಸಲಹೆ ಕೊಟ್ಟು ಪ್ರಯೋಜನ ಇಲ್ಲ ಎಂದು ಮತ್ತೊಂದಿಷ್ಟು ಮಂದಿ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಗಟ್ಟಿಮೇಳದಲ್ಲಿ ನಾಯಕರ ಪಾತ್ರವನ್ನು ಬದಲಿಸದೇ ಇರುವುದು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. 

ಡ್ರಗ್ಸ್​ ಹೆಸರಲ್ಲಿ ಖ್ಯಾತ ನಟಿ ಅಂಜಲಿ ಪಾಟೀಲ್​ಗೆ 5.79 ಲಕ್ಷ ರೂ. ದೋಖಾ! ನಂಬಿ ಮೋಸ ಹೋಗಿದ್ದು ಹೇಗೆ?