ಖಳನಟ ವಜ್ರಮುನಿ ಅವರ ಪುತ್ರ ವಿಶ್ವನಾಥ್ ವಜ್ರಮುನಿ ತಾವು ಯಾಕೆ ಸಿನಿಮಾ ರಂಗಕ್ಕೆ ಬರಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ತಂದೆಗೆ ಕೊಟ್ಟ ಮಾತಿನಂತೆ ನಟನೆಯನ್ನು ಬಿಟ್ಟು, ತಮಗೆ ಆಸಕ್ತಿಯಿದ್ದ ಕೃಷಿ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ವಜ್ರಗಿರಿ ನರ್ಸರಿ ನಡೆಸುತ್ತಿದ್ದಾರೆ.
ಬೆಂಗಳೂರು (ಜೂ.6): ಕನ್ನಡ ಸಿನಿಮಾದಲ್ಲಿ ಅದೆಷ್ಟೇ ಖಳನಟ ಬಂದರೂ, ವಜ್ರಮುನಿ ಅವರಂಥ ನಟ ಇನ್ನೊಬ್ಬರು ಬರೋಕೆ ಸಾಧ್ಯವಿಲ್ಲ. ಆದರೆ, ವಜ್ರಮುನಿ ಬಳಿಕ ಅವರ ಕುಟುಂಬದ ಯಾರೊಬ್ಬರೂ ಕೂಡ ಸಿನಿಮಾ ರಂಗಕ್ಕೆ ಬರಲಿಲ್ಲ. ಅವರ ಮಕ್ಕಳು ಇಂದಿಗೂ ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಕೃಷಿ, ತೋಟಗಾರಿಕೆ ಮೂಲಕ ಬ್ಯುಸಿಯಾಗಿರುವ ಹಿರಿಯ ಮಗ ವಿಶ್ವನಾಥ್ ವಜ್ರಮುನಿ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಅಂಜನಾಪುರದಲ್ಲಿ ವಜ್ರಗಿರಿ ನರ್ಸರಿ ನಡೆಸುತ್ತಿದ್ದಾರೆ.
ಸುದ್ದಿಮನೆ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಇತ್ತೀಚಿನ ಸಂದರ್ಶನದಲ್ಲಿ ತಾವು ಸಿನಿಮಾ ರಂಗಕ್ಕೆ ಯಾಕೆ ಬರಲಿಲ್ಲ ಎನ್ನವ ವಿಚಾರವನ್ನೂ ಅವರು ಬಹಿರಂಗಪಡಿಸಿದ್ದಾರೆ.
'ನಾನು ನಟನೆಗೆ ಯಾಕೆ ಬರಲಿಲ್ಲ ಅನ್ನೋದು ಎಲ್ಲರೂ ಕೇಳುವಂಥ ಪ್ರಶ್ನೆ. ಆದ್ರೆ ನಾವು ನಮ್ಮ ತಂದೆಗೆ ಮಾತು ಕೊಟ್ಟಿದ್ದೆವು. ನನ್ನೊಂದಿಗೆ ನಟನೆ ಮುಕ್ತಾಯವಾಗಬೇಕು. ಮತ್ಯಾರೂ ಸಿನಿಮಾದಲ್ಲಿ ನಟಿಸೋದು ಬೇಡ ಅಂದಿದ್ದರು. ಅವರಿಗೆ ಈ ವಿಚಾರವಾಗಿ ನಾವು ಮಾತುಕೊಟ್ಟಿದ್ದೆವು. ಬ್ಯುಸಿನೆಸ್ ಮಾಡಿಕೊಂಡು ಹೋಗಿ ಎಂದಿದ್ದರು. ಅವರ ಸಿನಿಮಾ ಜೀವನವನ್ನು ನಾವು ಕಣ್ಣಾರೆ ನೋಡಿದ್ದೆವು. ಅದಕ್ಕಾಗಿಯೇ ನಾವು ಕೂಡ ಸಿನಿಮಾಗಾಗಿ ಅಷ್ಟೆಲ್ಲಾ ಒಲವು ತೋರಿಸಲಿಲ್ಲ. ನನಗೂ ಕೂಡ ಸಿನಿಮಾದಲ್ಲಿ ನಟಿಸಬೇಕು ಅನ್ನೋದರ ಬಗ್ಗೆ ಯಾವುದೇ ಆಸಕ್ತಿ ಕೂಡ ಇದ್ದಿರಲಿಲ್ಲ. ನನಗೆ ಬ್ಯುಸಿನೆಸ್ ಮೇಲೆಯೇ ಹೆಚ್ಚಾಗಿ ಆಸಕ್ತಿ ಇತ್ತು. ತೋಟಗಾರಿಕೆ, ಕೃಷಿ ಬಗ್ಗೆ ನನ್ನ ಒಲವು ಎಂದು ವಿಶ್ವನಾಥ್ ವಜ್ರಮುನಿ ಹೇಳಿದ್ದಾರೆ.
ಚಳುವಳಿ ಮಾಡ್ತಾ ಇರೋರನ್ನ ಕೊಲ್ಲೋ ಮಟ್ಟಕ್ಕೆ ಹೋಗಿತ್ತು
ನನ್ನ ಅಪ್ಪ ಹೆಚ್ಚೂಕಡಿಮೆ ನನ್ನಷ್ಟೇ ಎತ್ತರವಿದ್ದರು. ಅವರು 5.8 ಇದ್ದರು. ಡಾ.ರಾಜ್‌ಕುಮಾರ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಅಶ್ವಥ್, ನರಸಿಂಹರಾಜು, ಬಾಲಕೃಷ್ಣ ಇವರೆಲ್ಲಾ ಎಂಥಾ ಆರ್ಟಿಸ್ಟ್‌ಗಳು. ಬಾಲಕೃಷ್ಣ ಅವರಿಗೆ ಬರೀ ಸ್ಕ್ರಿಪ್ಟ್ ಕೊಟ್ರೆ ಒಂದೇ ಟೇಕ್‌ನಲ್ಲಿ ಆ ಸೀನ್ ಮುಗಿಸ್ತಾ ಇದ್ದರು. ಇವರೆಲ್ಲಾ ರಂಗಭೂಮಿಯಿಂದ ಬಂದಿರುವವರು. ಸಿನಿಮಾದಲ್ಲಿ ಯಾವುದೇ ಪಾತ್ರ ಕೊಟ್ರೂ ಇವರು ಬೇಡ ಅಂತಿರ್ಲಿಲ್ಲ. ಸೀಮಿತವಾಗಿಯೇ ಪಾತ್ರ ಮಾಡಬೇಕು ಅಂತಾ ಏನೂ ಇರ್ಲಿಲ್ಲ. ಇವರಿಗೆಲ್ಲಾ, ತೆಲುಗು-ತಮಿಳು ಭಾಷೆಯಲ್ಲೂ ಆಫರ್‌ಗಳಿತ್ತು. ಆದ್ರೆ ಕನ್ನಡ ಬಿಟ್ಟು ಇವರು ಎಲ್ಲೂ ಹೋಗಿಲ್ಲ. ಏಕೆಂದರೆ ಗೋಕಾಕ್ ಚಳುವಳಿ ಸಮಯದಲ್ಲಿ ಇವರೆಲ್ಲಾ ಡಾ.ರಾಜ್‌ಕುಮಾರ್ ಅವರ ಜೊತೆ ಹೋರಾಟ ಮಾಡಿದ್ರು. ಗೋಕಾಕ್ ಚಳುವಳಿ ಬಹಳ ದೊಡ್ಡ ಹೋರಾಟ. ಚಳುವಳಿ ಮಾಡ್ತಾ ಇರೋ ಜನರನ್ನೆಲ್ಲಾ ಮರ್ಡರ್ ಮಾಡೋವಷ್ಟರ ಮಟ್ಟಕ್ಕೆ ಹೋಗಿ ಬಿಟ್ಟಿತ್ತು. ಆ ಹೋರಾಟದ ಕಿಚ್ಚು ಹಾಗಿತ್ತು.ಅಲ್ಲಿಂದ ಹೆಸರು ಸಂಪಾದನೆ ಮಾಡಿಕೊಂಡು ಬಂದಿರುವವರು ಎಂದು ಹೇಳಿದ್ದಾರೆ.
ನಾನು ಬಿಎಸ್‌ಸಿ ಎಜಿ ಮಾಡಬೇಕು ಅಂದ್ಕೊಂಡಿದ್ದೆ. ಹೈಸ್ಕೂಲ್ , ಎಸ್‌ಎಸ್‌ಎಲ್‌ಸಿ, ಸೆಕೆಂಡ್ ಪಿಯುಸಿ ಆದ ಮೇಲೆ ನಮ್ಮ ತಾತನ ಜೊತೆ ರಜಾ ದಿನಗಳಲ್ಲಿ ಇಲ್ಲಿಗೆ ಬರ್ತಾ ಇದ್ದೆ. ಜಯನಗರದಿಂದ ಇಲ್ಲಿಗೆ ಬಸ್‌ನಲ್ಲಿ ಹೋಗಿ ಬರುವುದು ಮಾಡುತ್ತಿದ್ದೆ. ಆ ಹಂತದಲ್ಲಿ ಬಿಎಸ್‌ಸಿ ಎಜಿ ಮಾಡಬೇಕು ಅಂದುಕೊಂಡೆ. ಆ ಟೈಮ್‌ನಲ್ಲಿ ನಮ್ಮ ತಾತ ತೀರಿ ಹೋದರು. ಆಗ ಇಲ್ಲಿ ನೋಡಿಕೊಳ್ಳುವವರು ಯಾರೂ ಇರ್ಲಿಲ್ಲ. ಹಾಗಾಗಿ ನಾನು ಓದೋದನ್ನು ಬಿಟ್ಟು ಇಲ್ಲಿಗೆ ಬಂದುಬಿಟ್ಟೆ. ಇಲ್ಲಿಂದ ಸ್ಥಳೀಯರಿಗೆ ಮಾತ್ರವಲ್ಲದೆ ಲಾಲ್‌ಬಾಗ್‌ಗೂ ಕೂಡ ಸಪ್ಲೈ ಮಾಡುತ್ತೇವೆ ಎಂದಿದ್ದಾರೆ.


