ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ, 'ಗೆಳತಿ ಗಾಯತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಇಬ್ಬರು ಗೆಳತಿಯರ ಕಥೆಯುಳ್ಳ ಈ ಸೀರಿಯಲ್‌ನಲ್ಲಿ ಅವರು ಪಾರ್ವತಿ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬೆಂಗಳೂರು (ಆ.12): ಸುದೀರ್ಘ ವಿರಾಮದ ಬಳಿಕ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಇಬ್ಬರು ಗೆಳತಿಯರ ಭಾವನಾತ್ಮಕ ಪಯಣದ ಕಥೆಯನ್ನು ಹೊಂದಿರುವ ಗೆಳತಿ ಗಾಯತ್ರಿ ಸೀರಿಯಲ್‌ ಮೂಲಕ ಆ.17 ರಿಂದ ಅವರು ಮತ್ತೆ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಗೆಳತಿ ಗಾಯತ್ರಿ ಸೀರಿಯಲ್‌ ವಿಚಾರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಇಡೀ ಟೀಮ್‌ ಹಾಜರಿತ್ತು. ಈ ವೇಳೆ ವೈಷ್ಣವಿ ಗೌಡ ಕೂಡ ಆಕರ್ಷಕವಾಗಿ ಕಾಣಿಸಿಕೊಂಡರು. ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಂಡನ ಕೈ-ಕೈ ಹಿಡಿದು ಬಂದ ವೈಷ್ಣವಿ ಗೌಡ, ಸೀರಿಯಲ್‌ನಿಂದ ಭಾರೀ ನಿರೀಕ್ಷೆಯಲ್ಲಿದ್ದಾರೆ.

ಸುದ್ದಿಗೋಷ್ಠಿಯ ವೇದಿಕೆಯಲ್ಲೇ ತನ್ನ ಗಂಡ ಅನುಕೂಲ್‌ ಮಿಶ್ರಾ ಅವರ ಕಾಲೆಳೆದ ವೈಷ್ಣವಿ ಗೌಡ, ಅವರಿಗೆ ಇಲ್ಲಿಯವರೆಗೂ ನಾವಾಡಿರುವ ಒಂದು ಮಾತು ಕೂಡ ಅರ್ಥ ಆಗಿರಲಿಕ್ಕಿಲ್ಲ ಎಂದರು.

ಈ ಸಂಜೆಯ ಬಹಳ ಸ್ಪೆಷಲ್‌ ಆಗಿರೋದು ನನ್ನ ಪತಿ ಹಾಗೂ ಅತ್ತೆ-ಮಾವ ಬಂದಿರುವುದು. ನನ್ನ ಇವೆಂಟ್‌ಗಳಲ್ಲಿ ಅವರು ಭಾಗಿಯಾದರೆ ನನಗೆ ಬಹಳ ಸಂತೋಷ. ಅವರಿಗೂ ಕೂಡ ಥ್ಯಾಂಕ್‌ ಯು. ನಾವು ಏನೇ ಕೆಲಸ ಮಾಡಿದರೂ, ಫ್ಯಾಮಿಲಿ ಅನ್ನೋದು ತುಂಬಾ ಇಂಪಾರ್ಟೆಂಟ್‌. ಮನೇಲಿ ಶಾಂತಿ ಇಲ್ಲ, ಸಪೋರ್ಟ್‌ ಇಲ್ಲ, ಅರ್ಥ ಮಾಡಿಕೊಳ್ಳುವವರು ಇಲ್ಲ ಎಂದಾದಾಗ ನಾವೇನೂ ಕೆಲಸ ಮಾಡೋದಕ್ಕೂ ಸಾಧ್ಯವಿಲ್ಲ. ಆ ಒಂದು ಶಾಂತಿ, ನೆಮ್ಮದಿ ಹಾಗೂ ಸಪೋರ್ಟ್‌ಅನ್ನು ಕೊಟ್ಟಿರೋದು ನನ್ನ ಪತಿ. ಅವರು ಯಾವಾಗಲೂ ಹೇಳ್ತಾ ಪ್ರೋತ್ಸಾಹ ಮಾಡ್ತಾ ಇರ್ತಾರೆ. ಏನಾದ್ರೂ ಒಂದು ಕೆಲಸ ಮಾಡು, ಸುಮ್ಮನೆ ಇರಬೇಡ ಅಂತಾ. ಅವರಿಗೆ ಈ ಹಂತದಲ್ಲಿ ಥ್ಯಾಂಕ್ಸ್‌ ಹೇಳ್ತೇನೆ' ಎಂದು ಹೇಳಿದರು.

ಅವರಿಗೆ ಕನ್ನಡ ಸೀರಿಯಲ್‌ಗಳು ಅರ್ಥ ಆಗುತ್ತಾ ಅನ್ನೋ ಪ್ರಶ್ನೆಗೆ, ಇಲ್ಲಿಯವರೆಗೂ ಸೀರಿಯಲ್‌ ವಿಚಾರದಲ್ಲಿ ಏನು ಟೆಲಿಕಾಸ್ಟ್‌ ಆಗಿದೆಯೋ ಅವರಿಗೆ ಅದರಲ್ಲಿನ ಒಂದ್‌ ಮಾತು ಕೂಡ ಅರ್ಥ ಆಗಿರಲ್ಲ. ಸೀರಿಯಲ್‌ಗೆ ಸಬ್‌ಟೈಟಲ್‌ಗಳು ಇಲ್ವಾ ಅಂತಾ ಕೇಳ್ತಿದ್ರು. ಆದರೆ ನಾನು ಅವರಿಗೆ ಒಂದಷ್ಟು ಸ್ಟೋರಿಯನ್ನು ಹೇಳಿದ್ದೇನೆ. ಅದರ ಮೂಲಕ ಸೀರಿಯಲ್‌ ವಿಚಾರವನ್ನ ಕನೆಕ್ಟ್‌ ಮಾಡಿಕೊಂಡಿರ್ತಾರೆ. ಇನ್ಮುಂದೆ ಅವರು ದಿನ ಎಪಿಸೋಡ್‌ ನೋಡ್ತಾರೆ ಎಂದು ಹೇಳಿದರು.

ಗೆಳತಿ ಗಾಯತ್ರಿ ಒಪ್ಪಿಕೊಳ್ಳೋಕೆ ಕಾರಣ ತಿಳಿಸಿದ ವೈಷ್ಣವಿ

ಇನ್ನು ಈ ಸೀರಿಯಲ್‌ ಒಪ್ಪಿಕೊಳ್ಳೋಕೆ ಕಾರಣವೇನು ಅನ್ನೋದಕ್ಕೆ, ಇದರಲ್ಲಿನ ಪಾತ್ರ ಎಂದು ಉತ್ತರಿಸಿದರು. ತುಂಬಾ ವಿಭಿನ್ನವಾಗಿರುವ ಪಾತ್ರ. ಇಲ್ಲಿಯವರೆಗಿನ ಸೀರಿಯಲ್‌ ಪ್ರಯಾಣದಲ್ಲಿ ಈ ರೀತಿಯ ಪಾತ್ರ ಮಾಡಿರಲಿಲ್ಲ. ತುಂಬಾ ಎನರ್ಜಿ ಇರುವಂಥ, ಡಾಮಿನೆಂಟ್‌ ಇರುವಂಥ ಪಾತ್ರ.ಸ್ವಲ್ಪ ಚಾಲೆಂಜಿಂಗ್‌ ಕೂಡ ಆಗಿತ್ತು ಎಂದು ಹೇಳಿದ್ದಾರೆ.

ಆ. 17 ರಿಂದ ಸನ್‌ ಉದಯದಲ್ಲಿ ಸಂಜೆ 7 ಗಂಟೆಗೆ ಸೋಮವಾರದಿಂದ ಶನಿವಾರದವರೆಗೆ ಪ್ರಸಾರ ಕಾಣಲಿದೆ. ಸೀರಿಯಲ್‌ನಲ್ಲಿ ಪಾರ್ವತಿಯಾಗಿ ವೈಷ್ಣವಿ ಗೌಡ, ಗಾಯತ್ರಿಯಾಗಿ ಕೃತಿಕಾ ನಟಿಸುತ್ತಿದ್ದು, ನಾಗಾರ್ಜುನ ಅವರು ಸೀರಿಯಲ್‌ನ ನಾಯಕಿಯಾಗಿದ್ದಾರೆ. ಮಿಲನ ಪ್ರಕಾಶ್‌ ಅವರ ನಿರ್ಮಾಣ ಸಂಸ್ಥೆ ಶ್ರೀ ಜೈ ಮಾತಾ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಧಾರಾವಾಹಿಗೆ ಯಶವಂತ ಪಾಂಡು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.